ಸೌಜನ್ಯ ಹೋರಾಟದ ಮಧ್ಯೆ ಪದ್ಮಲತಾ ಪ್ರಕರಣದ ನೆನಪುಗಳು

Date:

ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸೌಜನ್ಯ ಳ ಅತ್ಯಾಚಾರ ಮತ್ತು ಕೊಲೆಯ ಪ್ರಕರಣ ಈಗ ವ್ಯಾಪಕ ಸುದ್ದಿಯಲ್ಲಿದೆ. ಸೌಜನ್ಯ ಪ್ರಕರಣದಲ್ಲಿ ನ್ಯಾಯ ದೊರೆಯಬೇಕೆಂದು ಆಗ್ರಹಿಸಿ ಹೋರಾಟ ನಡೆಯುತ್ತಿದೆ. ಸೌಜನ್ಯ ಕೊಲೆ ನಡೆದದ್ದು 2012ರಲ್ಲಿ. ಅದಕ್ಕಿಂತ ದಶಕಗಳಿಗೆ ಹಿಂದೆ ಅಂದರೆ 1987ರಲ್ಲಿ, ಅದೇ ಕಾಲೇಜಿನ ಪದ್ಮಲತಾ ಎಂಬ ವಿದ್ಯಾರ್ಥಿನಿಯ ಅಪಹರಣ/ಕೊಲೆ ನಡೆದಿತ್ತು. ಆ ಕುರಿತ ಮಾಸಿದ ನೆನಪುಗಳು ಈಗ ಪ್ರಸ್ತಾಪವಾಗುತ್ತಿವೆ. ಆಗ ಉಜಿರೆ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ (ಹೆಸರು ಹೇಳಲು ಇಚ್ಛಿಸದ) ವ್ಯಕ್ತಿಯೋರ್ವರು ಆ ಪ್ರಕರಣದಲ್ಲಿ ಉಜಿರೆ ಕಾಲೇಜಿನ ವಿದ್ಯಾರ್ಥಿಗಳು ಆಗ ನಡೆಸಿದ ಪ್ರತಿಭಟನೆಯ ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ನಾನಾಗ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯಲ್ಲಿ ಡಿಗ್ರಿ ಓದುತಿದ್ದೆ. ಅದು 1987ನೆಯ ಇಸವಿ. ಜನವರಿ ತಿಂಗಳು. ಹಿಂದಿನ ಡಿಸೆಂಬರ್ ನಲ್ಲಿ ಕ್ರಿಸ್ಮಸ್ ರಜೆ ಮುಗಿಸಿ ಮತ್ತೆ ಕಾಲೇಜಿಗೆ ಹಿಂತಿರುಗಿದಾಗ ಪಿಯುಸಿ ಇದ್ಯಾರ್ಥಿನಿಯೊಬ್ಬಳು ಕಾಣೆಯಾಗಿದ್ದಾಳೆಂದೂ, ಅವಳನ್ನು ಅಪಹರಿಸಲಾಗಿದೆಯೆಂದು ಗುಸುಗುಸು ಹಬ್ಬಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಗುಸುಗುಸು ಹೆಚ್ಚಾಯಿತು. ಅಪಹರಿಸಿದವರು ಆಕೆಯನ್ನು ಕೊಲೆ ಮಾಡಿರಬಹುದು ಎಂಬಿತ್ಯಾದಿ ಮಾತುಗಳು ಕೇಳತೊಡಗಿದವು. ಸಾಮಾಜಿಕ ಮಾಧ್ಯಮಗಳು ಬಿಡಿ, ಎಸ್‌.ಟಿ.ಡಿ. ಫೋನ್ ಕೂಡಾ ಇದ್ದಿಲ್ಲದ ಕಾಲ ಅದು.

ಆಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ರಿಕೆ ಎಂದು ಹೇಳಿಕೊಳ್ಳುತಿದ್ದ, ಆದರೆ ವಾಸ್ತವದಲ್ಲಿ news letter ನಂತಿದ್ದ ದೈನಿಕ ಒಂದು ಪ್ರಕಟವಾಗುತ್ತಿತ್ತು. ಅದು ಈಗಲೂ ಇದೆ. ವಡ್ಡರ್ಸೆ ರಘುರಾಮ ಶೆಟ್ಟಿ ಅವರ ನೇತೃತ್ವದ ಮುಂಗಾರು ಎಂಬ ದಿನ ಪತ್ರಿಕೆಯೂ ಬರುತಿತ್ತು. ಅದು ಈಗ ಇಲ್ಲ. ಆಗ ಮುಂಗಾರುವಿನಲ್ಲಾದರೂ ಪದ್ಮಲತಾ ಪ್ರಕರಣದ ಬಗ್ಗೆ ಸುದ್ದಿಯ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿತ್ತು. ಮುಂಗಾರು ನಲ್ಲೂ ಪ್ರಕರಣದ ಬಗ್ಗೆ ವಿಶೇಷ ಸುದ್ದಿಗಳೇನೂ ಬರುತ್ತಿರಲಿಲ್ಲ. ಬೆಂಗಳೂರಿನಿಂದ ಆಗ ಅಪರಾಧಗಳನ್ನು ವರದಿ ಮಾಡುವುಕ್ಕೆಂದೇ ಸೀಮಿತವಾದ ಯಾವುದೋ ಒಂದು ಪತ್ರಿಕೆ ಇತ್ತು. ಅದರ ಹೆಸರು ಕ್ರೈಂ ನ್ಯೂಸ್ ಅಂತೇನೋ ನೆನಪು. ಆಗ ಅದು ಬಹಳ ಜನಪ್ರಿಯ. ಅದರಲ್ಲಿ ಪದ್ಮಲತಾ ಪ್ರಕರಣದ ಕುರಿತು ವರದಿಯೊಂದು ಬಂದ ನಂತರ ವಿದ್ಯಾರ್ಥಿ ವಲಯದಲ್ಲಿ ಕ್ಷೋಭೆ ಉಂಟಾಯಿತು.

ಅದೊಂದು ದಿನ ಬೆಳಗ್ಗೆ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದರು. ನಾವೆಲ್ಲಾ ತರಗತಿಗೆ ಹೋಗಲು ನಿರಾಕರಿಸಿ ಕ್ಲಾಸ್ ಹೊರಗೆ ವರಾಂಡದಲ್ಲಿ ನಿಂತು ನ್ಯಾಯಬೇಕು ಎಂದು ಘೋಷಣೆ ಕೂಗಿದೆವು. ವಿದ್ಯಾರ್ಥಿಗಳನ್ನು ಮನವೊಲಿಸುವ ಕಾಲೇಜಿನವರ ಪ್ರಯತ್ನ ವಿಫಲವಾಯಿತು. ವಿದ್ಯಾರ್ಥಿಗಳೆಲ್ಲಾ ಕಾಲೇಜಿನ ಮುಂಬಾಗದಲ್ಲಿ ಜಮಾಯಿಸಿದರು. ಅಲ್ಲಿಂದ ಎಲ್ಲರೂ ಸೇರಿ ಬೆಳ್ತಂಗಡಿ ಪೊಲೀಸು ಠಾಣೆಗೆ ಪ್ರತಿಭಟನಾ ಮೆರವಣಿಗೆ ಹೋಗುವುದೆಂದು ನಿರ್ಣಯ ಆಯಿತು. ಮೆರವಣಿಗೆಯ ಸಾಲನ್ನು ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಸೇರಿಕೊಂಡರು. ಉಜಿರೆ ಕಾಲೇಜಿನ ಕೆಲವು ವಿದ್ಯಾರ್ಥಿಗಳಿಗೆ ಸಿದ್ದವನ ಗುರುಕುಲ ಎಂಬ ವಿದ್ಯಾರ್ಥಿ ನಿಲಯದದಲ್ಲಿ ಉಚಿತ ಊಟ ಮತ್ತು ವಾಸ್ತವ್ಯದ ವ್ಯವಸ್ಥೆ ಇತ್ತು. ಈಗಲೂ ಇದೆ. ತೀರಾ ಬಡವರ ಮಕ್ಕಳು ಸಿದ್ದವನ ಗುರುಕುಲದಲ್ಲಿದ್ದು ಓದುತ್ತಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಾಲೇಜಿನಲ್ಲಿ ನಡೆಯುವ ಹೋರಾಟ ಇತ್ಯಾದಿಗಳಿಗೆ ಸಿದ್ದವನದ ಮಕ್ಕಳು ಸೇರಿಕೊಳ್ಳಬಾರದು. ಕಾಲೇಜು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎನ್ನುವ ಅಲಿಖಿತ ನಿಯಮವಿತ್ತು. ಅಂದು ಕೂಡಾ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರು ಮತ್ತು ಸಿದ್ದವನ ಗುರುಕುಲದ ಪ್ರಧಾನ ವಾರ್ಡನ್ ಆಗಿದ್ದ ಗೋಪಾಲ ಅರ್ಜುನ ಅಲರ್ವಾಡ್ ಅವರು ಸಿದ್ಧವನದ ಹುಡುಗರು ಯಾರಾದರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೋ ಅಂತ ಹದ್ದಿನ ಕಣ್ಣಿಂದ ನೋಡುತಿದ್ದರು. ಸಾಮಾನ್ಯವಾಗಿ ಸಿದ್ದವನದ ಹುಡುಗರು ಇಂತಹ ಚಟುವಟಿಕೆಗಳಿಂದ ದೂರ ಇರುವುದು ವಾಡಿಕೆ ಆಗಿತ್ತು. ಆದರೆ, ಅಂದು ಅದೇನಾಗಿತ್ತೋ, ಅಲರ್ವಾಡ್ ಅವರು ಗಮನಿಸುತ್ತಿದ್ದಾರೆ ಎನ್ನುವುದನ್ನೂ ಲೆಕ್ಕಿಸದೆ ಸಿದ್ದವನದ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಪ್ರತಿಭಟನಾ ಮೆರವಣಿಗೆಯಲ್ಲಿ ಸೇರಿಕೊಂಡರು. ಕೆಲವೇ ಕೆಲವರು ಸೇರಿಕೊಂಡರೆ ಅವರ ವಿರುದ್ದ ಕ್ರಮ ಜರಗಿ ಅವರನ್ನು ಹಾಸ್ಟೆಲ್ ನಿಂದ ಹೊರಹಾಕಬಹುದಿತ್ತೋ ಏನೋ? ಆದರೆ ಎಲ್ಲರೂ ಪಾಲ್ಗೊಂಡ ಕಾರಣ ಆ ಬಗ್ಗೆ ಮತ್ತೇನೂ ಕೇಳಿಬರಲಿಲ್ಲ.

‘ನ್ಯಾಯ ಬೇಕು’ ಅಂತ ಘೋಷಣೆ ಕೂಗುತ್ತಾ ನಾವು ಉಜಿರೆಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಯವರೆಗೆ ಹೋದೆವು. ಅಂದು ಪೊಲೀಸ್ ಠಾಣೆಯಲ್ಲಿ ಅಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದ ಸುಧೀರ್ ಕೃಷ್ಣ ಇದ್ದರು. ಸ್ವತಃ ಜಿಲ್ಲಾಧಿಕಾರಿಗಳೇ ನಮ್ಮನ್ನು ಎದುರುಗೊಂಡು ನಮ್ಮಿಂದ ಮನವಿ ಪತ್ರ ಸ್ವೀಕರಿಸಿದರು. ಆಗ ಕಾಲೇಜಿನ ವಿದ್ಯಾರ್ಥಿ ನಾಯಕ, ಯಾರು ಅಂತ ನೆನಪಿಲ್ಲ. ಆದರೆ ಆತ ಮುಂದೆ ನಿಂತು ಸುಧೀರ್ ಕೃಷ್ಣ ಅವರಿಗೆ ಮನವಿ ಪತ್ರ ಹಸ್ತಾಂತರಿಸಿದ ಚಿತ್ರಣ ಇನ್ನೂ ನನಗೆ ಕಣ್ಣಿಗೆ ಕಟ್ಟಿದಂತೆ ನೆನಪಿದೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ

ಆಗಿನ್ನೂ ಪದ್ಮಲತಾ ದೇಹ ಪತ್ತೆ ಆಗಿರಲಿಲ್ಲ. ಆದರೆ ನೇತ್ರವತಿಯಲ್ಲಿ ಮೃತದೇಹವೊಂದು ಪತ್ತೆ ಆಗಿತ್ತೆಂದೂ, ಅದು ಪದ್ಮಲತಾದ್ದೆ ಇರಬಹುದು ಎಂದು ಶಂಕೆ ವ್ಯಕ್ತವಾಗುತ್ತಿತ್ತು. ವಿದ್ಯಾರ್ಥಿ ನಾಯಕ ಆ ಕುರಿತು ಸುಧೀರ್ ಕೃಷ್ಣ ಅವರಲ್ಲಿ ಸ್ಪಷ್ಟೀಕರಣ ಕೇಳಿದ್ದ. ಅದಕ್ಕೆ ಅವರು, ಇನ್ನೂ ಏನೂ ಖಚಿತವಾಗಿಲ್ಲ ಅಂತ ಹೇಳಿದ್ದರು. ತನಿಖೆ ನಡೆಯುತ್ತಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಅಂತ ಹೇಳಿದ್ದರು. ಸುಧೀರ್ ಕೃಷ್ಣ ಉತ್ತರ ಪ್ರದೇಶ ಮೂಲದವರು. ಆದರೆ ನಮ್ಮ ಜತೆ ಅಂದು ಕನ್ನಡದಲ್ಲೇ ಮಾತನಾಡಿದ್ದರು. ಆ ನಂತರ ಪದ್ಮಲತಾ ದೇಹ ಸಿಕ್ಕಿ, ಮೇಲೆ ಪ್ರಸ್ತಾಪಿಸಿದ ಅಪರಾಧ ಸುದ್ದಿಗಳ ವಾರಪತ್ರಿಕೆಯಲ್ಲಿ ವಿಧವಿಧವಾದ ವರದಿಗಳು ಬರುತ್ತಿದ್ದವು. ಆಗ ಕಾಲೇಜಿನಲ್ಲಿ ಕೇಳಿಸುತಿದ್ದ ಪಿಸುಮಾತಿನ ಪ್ರಕಾರ ಮುಂದಿನ ವಾರದಲ್ಲಿ ಆ ಪತ್ರಿಕೆ ಉಜಿರೆಗೆ ಬರುತ್ತಿದ್ದಂತೆಯೇ ಅದರ ಇಡೀ ಬಂಡಲ್ ಅನ್ನೇ ಖರೀದಿಸಿ ಸುಟ್ಟು ಹಾಕಿದ್ದರು. ಹಾಗೆ ಖರೀದಿಸಿ ಸುಟ್ಟವರು, ನಾವೆಲ್ಲಾ ಕಂಡು ಬಲ್ಲ ಅಲ್ಲಿನ ಹಿರಿಯರೊಬ್ಬರು (ಅವರು ಈಗ ತೀರಿಕೊಂಡಿದ್ದಾರೆ) ಅಂತಲೂ ಹೇಳಲಾಗುತ್ತಿತ್ತು.

ಆ ನಂತರ ಪ್ರಕರಣದ ಕುರಿತು ಬರೆಯಬಾರದು ಎಂದು ಆ ಪತ್ರಿಕೆಗೆ ನ್ಯಾಯಾಲಯ ಆದೇಶ ನೀಡಿತ್ತು ಅಂತಲೂ ನೆನಪು. ಆ ಮಧ್ಯೆ ಫೆಬ್ರವರಿನಲ್ಲಿ ಸುಧೀರ್ ಕೃಷ್ಣ ಅವರಿಗೆ ವರ್ಗಾವಣೆ ಆಗಿ, ಹೊಸ ಜಿಲ್ಲಾಧಿಕಾರಿ ಅನೂಪ್ ಕೆ. ಪೂಜಾರಿ ಅಧಿಕಾರ ವಹಿಸಿಕೊಂಡರು. ಆಗ ರಾಜ್ಯದಲ್ಲಿ ರಾಮಕೃಷ್ಣ ಹೆಗ್ಡೆ ಸರಕಾರ ಇತ್ತು. ಆರ್.ಎಲ್. ಜಾಲಪ್ಪ ಅವರು ಗೃಹ ಮಂತ್ರಿ ಆಗಿದ್ದರು. ಹಲವು ದಿನ ಹರಿದಾಡಿದ್ದ ವಿಧವಿಧದ ಗುಸುಗುಸು ಆ ನಂತರ ಹಾಗೆ ತಣ್ಣಗಾಯಿತು.

ಇದನ್ನು ಓದಿ ಧರ್ಮಸ್ಥಳ | ಸೌಜನ್ಯ ಕುಟುಂಬ, ಹೋರಾಟಗಾರರ ವಿರುದ್ಧ ಅಪಪ್ರಚಾರಕ್ಕಿಳಿದ ಭಕ್ತಪಡೆ

ಇವೆಲ್ಲಾ ಆಗಿ ಕೆಲವು ದಿನಗಳಾದ ನಂತರ ಒಂದು ಸಂಜೆ ಸೈರನ್ ಮೊಳಗಿಸುತ್ತಾ ಕೆಂಪು ದೀಪ ಹೊತ್ತ ಒಂದು ಅಂಬಾಸಿಡರ್ ಕಾರು ಮತ್ತು ಅದನ್ನು ಹಿಂಬಾಲಿಸಿಕೊಂಡು ಪೊಲೀಸ್ ವಾಹನಗಳು ಉಜಿರೆಯಿಂದ ಧರ್ಮಸ್ಥಳಾಭಿಮುಖವಾಗಿ ಹೋಗುವುದನ್ನು ನೋಡಿದೆವು. ಆ ಕಾಲಕ್ಕೆ ಆ ಹಳ್ಳಿಯ ಮೂಲೆಯಲ್ಲಿ ಅಂತವನ್ನೆಲ್ಲಾ ನೋಡುವುದೆಂದರೆ ಏನೋ ಪುಳಕ. ಅದರಲ್ಲಿದ್ದದ್ದು ಜಿಲ್ಲೆಯಲ್ಲಿ ಅಧಿಕೃತ ಬೇಟಿಗೆಂದು ಬಂದಿದ್ದ ಗೃಹ ಮಂತ್ರಿ ಜಾಲಪ್ಪನವರು ಅಂತ ಮರುದಿನ ಪತ್ರಿಕೆಗಳಿಂದ ತಿಳಿಯಿತು.

ಫೆಬ್ರವರಿ ಬಂತು. ಪರೀಕ್ಷೆ ಹತ್ತಿರ ಬಂತು. ಮಾರ್ಚ್‌ನಲ್ಲಿ ಪರೀಕ್ಷೆ ತಯಾರಿ ರಜೆ ಬಂತು. ಏಪ್ರಿಲ್‌ನಲ್ಲಿ ಪರೀಕ್ಷೆಗಳಾದವು. ನಂತರ ಬೇಸಿಗೆ ರಜೆ ಬಂತು. ಜೂನ್/ಜೂಲೈ ನಲ್ಲಿ ಮತ್ತೆ ಕಾಲೇಜು ಪ್ರಾರಂಭವಾಯಿತು. ಉಧೋ ಅಂತ ಮಳೆ ಸುರಿಯಿತು. ಹಿಂದಿನ ಬೇಸಿಗೆಯ ಎಲ್ಲಾ ನೆನಪುಗಳೂ ಕೊಚ್ಚಿ ಹೋದವು. ಪದ್ಮಲತಾ ಪ್ರಕರಣದ ನೆನಪು ಕೂಡಾ ಎಲ್ಲರಿಗೂ ಮರೆತೇ ಹೋಯಿತು.

ಮತ್ತೆ ನೆನಪಾಗಿದ್ದು ಈಗ ಸುದ್ದಿಯಲ್ಲಿರುವ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದ ಬಗ್ಗೆ ಕೇಳಿದಾಗ. ಪ್ರಕರಣ ನಡೆಯುವಾಗ ಜಿಲ್ಲಾಧಿಕಾರಿಗಳಾಗಿದ್ದ ಸುಧೀರ್ ಕೃಷ್ಣ ಅವರು ಮುಂದೆ 1990ರ ದಶಕದಲ್ಲಿ ರಾಜ್ಯದ ವಾಣಿಜ್ಯ ತೆರಿಗೆ ಆಯುಕ್ತರಾಗಿದ್ದರು. ಆ ನಂತರ ಕೇಂದ್ರ ಸರಕಾರದಲ್ಲಿ ನಗರಾಭಿವೃದ್ಧಿ ಮಂತ್ರಾಲಯದ ಕಾರ್ಯದರ್ಶಿ ಆಗಿ ನಿವೃತ್ತಿ ಹೊಂದಿದರು. ವ್ಯಾಪಕ ಆಸಕ್ತಿಗಳಿದ್ದ ಅವರು ಕರ್ನಾಟಕದ ಭೂಸುಧಾರಣೆಗಳ ಬಗ್ಗೆ ಒಂದು ಪುಸ್ತಕ ಕೂಡಾ ಬರೆದಿದ್ದಾರೆ. ಬೆಂಗಳೂರಿನಲ್ಲಿ ವೃತ್ತಿ ಸಂಬಂಧ ಅವರನ್ನು ಹಲವು ಬಾರಿ ಭೇಟಿ ಮಾಡಿ ಮಾತನಾಡಿಸುವ ಅವಕಾಶ ಸಿಕ್ಕಾಗಲೆಲ್ಲಾ ನಿಗೂಢ ಪದ್ಮಲತಾ ಪ್ರಕರಣದ ಬಗ್ಗೆ ಕೇಳಿ ನೋಡಬೇಕೆಂಬ ಕುತೂಹಲ ಮೂಡಿತ್ತು. ಆದರೆ ಅದ್ಯಾಕೋ ಹೃದಯದಲ್ಲಿದ್ದ ಪ್ರಶ್ನೆ ಏನೇ ಮಾಡಿದರೂ ಬಾಯಿಗೆ ಬರಲಿಲ್ಲ. ಮತ್ತೊಮ್ಮೆ ಅವನ್ನೆಲ್ಲಾ ನೆನಪಿಸುವ ಸಂದರ್ಭ ಬಂದೀತು ಅಂತ ಆಗ ಯಾರಿಗೆ ತಾನೇ ಗೊತ್ತಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹಾತ್ಮ ಗಾಂಧಿ | ಸಂಭಾಷಣೆಯಲ್ಲಿ ರೂಪುಗೊಂಡ ಲೋಕಹಿತ ಚಿಂತಕ

ಈ ಲೇಖನದಲ್ಲಿ ನಾವು ನಿದರ್ಶನವಾಗಿ ತೋರಿಸಿದ ಮೂರು ಸಂವಾದಗಳು ಭಾರತದ ಸ್ವಾತಂತ್ರ್ಯ...

ಈ ದಿನ Exclusive ಸಂದರ್ಶನ | ದೇಶಕ್ಕೆ ಸಾಮೂಹಿಕ ಜೋಮು ಹಿಡಿದಿದೆ; ಹೊಸ ಭ್ರಮೆಗಳ ಕಟ್ಟಲಾಗುತ್ತಿದೆ: ಪರಕಾಲ ಪ್ರಭಾಕರ್

ಪರಕಾಲ ಪ್ರಭಾಕರ್ ಬುಧವಾರ(ಜ.24)ದಂದು ಬೆಂಗಳೂರಿಗೆ ಭೇಟಿ ನೀಡಿದ್ದರು. 'ಈ ದಿನ' ಯೂಟ್ಯೂಬ್...

ಭಾರತೀಯರಿಗೆ ಪುರಾಣ ಪಥ್ಯವಾಯಿತು, ವಾಸ್ತವ ಅಪಥ್ಯವಾಯಿತು

ಭಾರತದ ಇತಿಹಾಸದ ನೆಲೆಗಳೆಲ್ಲವೂ ವಾಸ್ತವದಲ್ಲಿ ಬೌದ್ಧ ಹಾಗೂ ಜೈನ ನೆಲೆಗಳು. ಇದಕ್ಕೆ...