ಜೋರು ಮಳೆಯಿಂದಾಗಿ ರಸ್ತೆ ಮಧ್ಯದಲ್ಲಿದ್ದ ಡಿವೈಡರ್ ಸರಿಯಾಗಿ ಕಾಣಿಸದೆ,ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ದುರ್ಘಟನೆ ಚಿಂತಾಮಣಿ-ಬೆಂಗಳೂರು ರಸ್ತೆಯ ಚಿನ್ನಸಂದ್ರ ಗ್ರಾಮದ ಬಳಿ ರಾತ್ರಿ ಸಂಭವಿಸಿದೆ.
ಈ ಭೀಕರ ಅಪಘಾತದಲ್ಲಿ ಎರಡು ವರ್ಷದ ಮಗು ಮೃತಪಟ್ಟಿದ್ದು,ಕಾರಿನಲ್ಲಿದ್ದ ಐವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಎರಡು ವರ್ಷದ ರಶದಾನ್ ಆಲಿ ಎಂಬ ಮಗು ಮೃತಪಟ್ಟಿದೆ.ಸಫಿನಬಾನು(45), ಚಾಲಕ ಮೊಹಮ್ಮದ್ ಶರೀಫ್(50), ನಸರೀನ್ ತಾಜ್ (40)ಹೈದರ್ ಶರೀಫ್(55)ಮತ್ತು ಶಾಹಿನ(45) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಚಿಂತಾಮಣಿಯಿಂದ ಬೆಂಗಳೂರಿನತ್ತ ತೆರಳುತ್ತಿದ್ದ ವೇಳೆ ಚಿನ್ನಸಂದ್ರ ಗ್ರಾಮದ ಹೋಟೆಲ್ ಒಂದರ ಬಳಿ ಜೋರು ಮಳೆಯ ಪರಿಣಾಮ ಡಿವೈಡರ್ ಸ್ಪಷ್ಟವಾಗಿ ಕಾಣಿಸದೆ ಈ ಅಪಘಾತ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ಜಜ್ಜುಗುಜ್ಜಾಗಿದೆ.
ಇದನ್ನು ಓದಿದ್ದೀರಾ..?ಆರ್‌ಟಿಒ ಕಚೇರಿಗಳಲ್ಲಿ ಬೋಗಸ್ ವಾಹನ ನೋಂದಣಿ ಮತ್ತು ಡಿಎಲ್ ಅಕ್ರಮ: ಸೈಯದ್ ಮಾಲಿಕ್ ಆರೋಪ
ಅಪಘಾತದಲ್ಲಿ ಗಾಯಗೊಂಡ ಐವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.ಘಟನಾ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.




