ಜೂನ್ ತಿಂಗಳು ಆರಂಭವಾಗಿದ್ದರೂ ವಿಜಯಪುರ ಜಿಲ್ಲೆಯಲ್ಲಿ ನಿರೀಕ್ಷಿಸಿದಷ್ಟು ಮಳೆಯಾಗದಿರುವುದು ರೈತರಲ್ಲಿ ಕಳವಳ ಮೂಡಿಸಿದೆ. ಬಿತ್ತನೆ ಕಾರ್ಯದ ತಯಾರಿಯಲ್ಲಿರುವ ಅನ್ನದಾತರು ಮುಗಿಲಿನತ್ತ ಮುಖ ಮಾಡಿ ನಿಂತಿದ್ದಾರೆ. ಮಳೆಯ ಆಗಮನ ವಿಳಂಬವಾಗುತ್ತಿರುವುದರಿಂದ ರೈತರಲ್ಲಿ ಆತಂಕವೂ ಹೆಚ್ಚಾಗಿದೆ.
ಕೃತಿಕಾ ಹಾಗೂ ರೋಹಿಣಿ ಮಳೆಯು ಸಮರ್ಪಕವಾಗಿ ಸುರಿಯಲಿದೆ ಎಂಬ ನಿರೀಕ್ಷೆಯಲ್ಲಿ ಮುಂಗಾರು ಕೃಷಿಗೆ ಸಿದ್ಧತೆ ಮಾಡಿಕೊಂಡಿದ್ದ ರೈತರಿಗೆ ನಿರೀಕ್ಷಿತ ಮಳೆ ಕೈಕೊಟ್ಟಿದೆ. ಭೂಮಿಯನ್ನು ಉಳುಮೆ ಮಾಡಿ, ಬಿತ್ತನೆಗೆ ಅಗತ್ಯವಾದ ಬೀಜ ಮತ್ತು ಗೊಬ್ಬರವನ್ನು ಮುಂಚಿತವಾಗಿಯೇ ಖರೀದಿಸಿ ಸಜ್ಜಾಗಿರುವ ಅನ್ನದಾತರು ಈಗ ಮುಂದಿನ ಮಳೆಗಾಗಿ ಕಾತರದಿಂದ ಕಾಯುವ ಪರಿಸ್ಥಿತಿ ಎದುರಾಗಿದೆ.
ಕಳೆದ ಬಾರಿ ಮುಂಗಾರು ಪೂರ್ವ ಮುಂಗಾರಿನಲ್ಲಿ ಕೊರತೆಯಿರದ ಕಾರಣ, ಹೆಸರು ಸೇರಿದಂತೆ ಅಲ್ಪಾವಧಿ ಬೆಳೆಗಳನ್ನು ನಿಗದಿತ ಪ್ರಮಾಣಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ ಬಿತ್ತನೆ ಮಾಡಲಾಗಿತ್ತು. ಆದರೆ, ಈ ಬಾರಿ ಮಳೆ ಕೊರತೆಯಾಗಿದ್ದರಿಂದ ಹೆಸರು ಬಿತ್ತನೆ ಅವಧಿ ಮುಗಿಯುವ ಆತಂಕ ಕಾಡುತ್ತಿದೆ. ಹೀಗಾಗಿ, ಈ ಬಾರಿ ʼಹೆಸರುʼ ಬಿತ್ತನೆ ಪ್ರದೇಶ ನಿರೀಕ್ಷಿತ ಗುರಿ ತಲುಪುವುದು ಅನುಮಾನ. ಮಳೆ ವಿಳಂಬವಾದಲ್ಲಿ ಅಲ್ಪಾವಧಿ ಮತ್ತು ಕಡಿಮೆ ನೀರು ಅಗತ್ಯವಿರುವ ಬೆಳೆಗಳತ್ತ ರೈತರು ಗಮನಹರಿಸುವಂತೆ ಕೃಷಿ ತಜ್ಞರು ಸಲಹೆ ನೀಡುತ್ತಿದ್ದಾರೆ. “ಜುಲೈವರೆಗೆ ಮಳೆ ಸಮರ್ಪಕವಾಗಿ ಆಗದಿದ್ದರೆ ಬೆಳೆ ಮಾದರಿಯಲ್ಲೂ ಬದಲಾವಣೆ ಮಾಡಬೇಕಾಗಬಹುದು” ಎಂಬ ಸಲಹೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಯೂರಿಯಾ 22,337 ರಷ್ಟು ಸಂಗ್ರಹವಾಗಿದ್ದರೆ, ಡಿ.ಎ.ಪಿ 4,013 ಸಂಗ್ರಹವಾಗಿದೆ , ಕಾಂಪ್ಲೆಕ್ಸ್ 37,806, ಎಸ್.ಎಸ್.ಪಿ 3,980, ಒಟ್ಟು 80,044 ಟನ್ ರಸಗೊಬ್ಬರ ದಾಸ್ತಾನು ಇದೆ. ರೈತರ ಬೇಡಿಕೆಗೆ ಅನುಗುಣವಾಗಿ ಗೊಬ್ಬರ ಮತ್ತು ಬಿತ್ತನೆ ಬೀಜ ಸರಬರಾಜು ಮಾಡಲಾಗುವುದು ಎಂದು ಅಧಿಕಾರಿ ಪಾಟೀಲ ಹೇಳಿದ್ದಾರೆ.
“ಜಿಲ್ಲೆಯಲ್ಲಿ ಒಟ್ಟು 7.75 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. ಅದರಲ್ಲಿ ಪ್ರಮುಖವಾಗಿ ತೊಗರಿ 4.75 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಜಿಲ್ಲಾದ್ಯಂತ ಬಿತ್ತನೆಗೆ ಬೇಕಾದ ಬೀಜಗಳ ಲಭ್ಯತೆ ಇದೆ. ತೊಗರಿ ಕ್ವಿಂಟಲಿಗೆ ₹ 7,250 , ಮೆಕ್ಕೆಜೋಳ 5,300 , ಸಜ್ಜೆ 95 ಕ್ವಿಂ, ಹೆಸರು 54 ಕ್ವಿಂ, ಸೂರ್ಯಕಾಂತಿ 110 ಕ್ವಿಂ, ಉದ್ದು 30 ಕ್ವಿಂ ಸೇರಿದಂತೆ ಒಟ್ಟು 12,839 ಕ್ವಿಂಟಾಲ್ ಬೀಜ ಲಭ್ಯವಿದೆ,” ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸಾಮಾನ್ಯವಾಗಿ ಜೂನ್ ಮೊದಲ ವಾರದಿಂದಲೇ ಮುಂಗಾರು ಬಿತ್ತನೆ ಕಾರ್ಯ ಆರಂಭವಾಗುತ್ತದೆ. ಆದರೆ ಈ ಬಾರಿ ನಿರೀಕ್ಷಿತ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ನಿಧಾನಗೊಂಡಿವೆ. ಜಿಲ್ಲೆಯ ಹಲವೆಡೆ ಮೋಡ ಕವಿದ ವಾತಾವರಣ ಕಂಡು ಬರುತ್ತಿದ್ದರೂ ಸಮರ್ಪಕ ಮಳೆಯಾಗದಿರುವುದು ರೈತರನ್ನು ಚಿಂತೆಗೆ ದೂಡಿದೆ.
ಇದನ್ನೂ ಓದಿ> ವಿಜಯಪುರ | ʼಕೆರೆಗಳಿಗೆ ನೀರು ಹರಿಸಿʼ: ಜಿಲ್ಲಾಡಳಿತಕ್ಕೆ ಹಸಿರು ಸೇನೆ, ರೈತ ಸಂಘ ಮನವಿ
ಈ ದಿನ.ಕಾಮ್ ಜೊತೆ ಮಾತನಾಡಿದ ರೈತ ಸಂಗಪ್ಪ ”ಹೊಲ ಉಳುಮೆ ಮಾಡಿಕೊಂಡು ಬಿತ್ತನೆ ಬೀಜ ಖರೀದಿ ಮಾಡಿದ್ದೇವೆ. ಆದರೆ ಉತ್ತಮ ಮಳೆಗೆ ಕಾಯುತ್ತಿದ್ದೇವೆ. ಮಳೆ ತಡವಾದರೆ ಬೆಳೆ ಆಯ್ಕೆ ಬದಲಿಸಬೇಕಾದ ಪರಿಸ್ಥಿತಿ ಬರಬಹುದು” ಎಂದು ಹೇಳುತ್ತಿದ್ದಾರೆ.
ಹವಾಮಾನ ವೈಪರೀತ್ಯದಿಂದ ಈಗಾಗಲೇ ಸಂಕಷ್ಟ ಅನುಭವಿಸುತ್ತಿರುವ ರೈತ ಸಮುದಾಯಕ್ಕೆ ಮಳೆ ವಿಳಂಬ ಚಿಂತೆ ತಂದೊಡ್ಡಿದೆ. ಜೂನ್ ಆರಂಭವಾದರೂ ಮಳೆ ಸುರಿಯದಿರುವುದು ಅನ್ನದಾತನ ಆತಂಕ ಹೆಚ್ಚಿಸಿದ್ದು, ಒಳ್ಳೆಯ ಮಳೆ ಬಿದ್ದರೆ ಮಾತ್ರ ಈ ಬಾರಿಯ ಕೃಷಿ ಚಟುವಟಿಕೆಗಳಿಗೆ ಚೈತನ್ಯ ಸಿಗಲಿದೆ.
ಈ ದಿನ.ಕಾಮ್ ಜೊತೆಗೆ ಮಾತನಾಡಿದ ವಿಜಯಪುರ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, “ಮೇ ತಿಂಗಳ ಮೂರನೇ ವಾರದಲ್ಲಿ ಸುರಿದ ಮಳೆಯಿಂದಾಗಿ ರೈತರು ಬಿತ್ತನೆಗೆ ಅಗತ್ಯ ತಯಾರಿ ಮಾಡಿಕೊಂಡಿದ್ದರು. ರೈತರಿಗೆ ಬೀಜ ಮತ್ತು ರಸಗೊಬ್ಬರವನ್ನು ಸಹಾಯಧನದಲ್ಲಿ ವಿತರಿಸಲು ದಾಸ್ತಾನು ಮಾಡಲಾಗಿದೆ” ಎಂದರು.
ಮಳೆಯು ಸರಿಯಾದ ಸಮಯಕ್ಕೆ ಸುರಿದು ರೈತರ ನಿರೀಕ್ಷೆಗಳನ್ನು ಈಡೇರಿಸುತ್ತದೆಯೇ ಎಂಬುದು ಈಗಿನ ಪ್ರಮುಖ ಪ್ರಶ್ನೆಯಾಗಿದೆ. ಬಿತ್ತನೆಗೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿರುವ ರೈತರು ಆಕಾಶದತ್ತ ಚಿತ್ತ ನೆಟ್ಟಿದ್ದು, ಮುಂಗಾರು ಚುರುಕುಗೊಂಡು ಕೃಷಿ ಚಟುವಟಿಕೆಗಳಿಗೆ ವೇಗ ನೀಡುವ ನಿರೀಕ್ಷೆಯಲ್ಲಿದ್ದಾರೆ. ವರುಣನ ಕೃಪೆ ಸಮಯಕ್ಕೆ ದೊರೆತರೆ ಉತ್ತಮ ಇಳುವರಿ ಪಡೆಯುವ ಆಶಾಭಾವನೆ ರೈತರಲ್ಲಿದ್ದರೆ, ಮಳೆ ಮತ್ತಷ್ಟು ವಿಳಂಬವಾದರೆ ಕೃಷಿ ಯೋಜನೆಗಳಲ್ಲಿ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಮಳೆಯ ಆಗಮನದತ್ತ ಜಿಲ್ಲೆಯ ರೈತರು ಕಾತರದಿಂದ ಕಾಯುತ್ತಿದ್ದಾರೆ.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು



