ಬಂಟ್ವಾಳ: ಪರಿವಾನಿಗೆ ರಹಿತವಾಗಿ ಪಿಕಪ್ ವಾಹನದಲ್ಲಿ ಜಾನುವಾರು ಸಾಗಿಸುತ್ತಿದ್ದ ಆರೋಪದ ಮೇರೆಗೆ ನಾಲ್ವರ ಮೇಲೆ ಬಂಟ್ವಾಳ ತಾಲ್ಲೂಕಿನ ವಿಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರವಾನಿಗೆ ಇಲ್ಲದೆಯೇ ಪಿಕಪ್ ವಾಹನದಲ್ಲಿ ಜಾನುವಾರು ಸಾಗಿಸಿರುವುದರಿಂದ ವಿಟ್ಲ ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದು, ವಾಹನದಲ್ಲಿದ್ದ ಅಬ್ದುಲ್ಲಾ(45) ಮತ್ತು ಸುಬ್ರಮಣ್ಯ(55) ಎಂಬುವವರನ್ನು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ಜಾನುವಾರು ಸಾಗಿಸಲು ಯಾವುದೇ ಪರವಾನಿಗೆ ಇಲ್ಲದಿರುವುದು ಕಂಡು ಬಂದಿದೆ.
ಅಲ್ಲದೇ ಕಾರಿನಲ್ಲಿ ಬಂದಿದ್ದ ಉಷಾ ಎಸ್ ಶೆಟ್ಟಿ ಹಾಗೂ ಗುರುತೇಜ ಎಂಬುವವರ ಆದೇಶದ ಮೇರೆಗೆ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿರುತ್ತಾರೆ. ಹೀಗಾಗಿ ಪೊಲೀಸರು ನಾಲ್ವರ ಮೇಲೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಾನುವಾರು ಸಾಗಾಟಕ್ಕೆ ಬಳಸಲಾಗಿರುವ ಪಿಕಪ್ ವಾಹನವನ್ನು ವಶಕ್ಕೆ ಪಡೆದಿರುವ ಪೊಲೀಸರು ನಾಲ್ವರು ಆರೋಪಿಗಳ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 303(2) ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.





