- ʼಕೆಲ ಕಾಂಗ್ರೆಸ್ ನಾಯಕರು ಕುಡಿದು ಕಾಲ್ ಮಾಡಿ ಸ್ವಾಮೀಜಿಗೆ ಧಮ್ಕಿ ಹಾಕುತ್ತಿದ್ದಾರೆʼ
- ಬಿಜೆಪಿ ಶಾಸಕ ಅರವಿಂದ ಬೆಲ್ಲದ ಆರೋಪ ಅಲ್ಲಗಳೆದ ಮೃತ್ಯುಂಜಯ ಸ್ವಾಮೀಜಿ
“ನನಗೆ ಯಾವುದೇ ನಾಯಕರಿಂದ ಜೀವ ಬೆದರಿಕೆ ಕರೆಗಳು ಬಂದಿಲ್ಲ. ಮೀಸಲಾತಿ ವಿಚಾರವನ್ನು ನಾನು ಒಪ್ಪಿಕೊಂಡಿರುವುದಕ್ಕೆ ಕೆಲವು ನಾಯಕರಿಗೆ ಅಸಮಾಧಾನವಿದೆ. ಸಹಜವಾಗಿ ಸಿಟ್ಟಿನಿಂದ ಅವರು ಮಾತನಾಡುತ್ತಿದ್ದಾರೆ” ಎಂದು ಮೃತ್ಯುಂಜಯ ಸ್ವಾಮೀಜಿ ಸ್ಪಷ್ಟಪಡಿಸಿದರು.
‘ಪಂಚಮಸಾಲಿ ಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ’ ಎಂದು ಬಿಜೆಪಿ ನಾಯಕ ಅರವಿಂದ ಬೆಲ್ಲದ ಸೋಮವಾರ ಆರೋಪಿಸಿದ್ದರು. ಈ ವಿಚಾರವಾಗಿ ಈ ದಿನ.ಕಾಮ್ ಸ್ವಾಮೀಜಿ ಅವರ ಪ್ರತಿಕ್ರಿಯೆ ಪಡೆಯಲು ಅವರನ್ನು ಸಂಪರ್ಕಿಸಿದಾಗ ಅರವಿಂದ ಬೆಲ್ಲದ ಆರೋಪವನ್ನು ಅಲ್ಲಗಳೆದು ಮಾತನಾಡಿದರು.
“ಕಾಂಗ್ರೆಸ್ ನಾಯಕರು ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬುದು ಸುಳ್ಳು ಸುದ್ದಿ. ಮೀಸಲಾತಿ ವಿಚಾರ ಒಪ್ಪಿಕೊಂಡಿರುವುದಕ್ಕೆ ಸಹಜವಾಗಿ ಸಿಟ್ಟಿನಿಂದ ಮಾತನಾಡಿದ್ದಾರೆ. ಈ ಹೋರಾಟ ಇಲ್ಲಿಗೆ ನಿಂತಿಲ್ಲ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಪ್ರತಿಭಟನೆ ಹಿಂಪಡೆದಿರುವೆ. ಚುನಾವಣೆ ನಂತರ ಮತ್ತೆ ಮೀಸಲಾತಿ ಹೋರಾಟಕ್ಕೆ ನಾನು ಸಿದ್ಧ” ಎಂದರು.
“ಈ ಹಿಂದೆ ಬಿಜೆಪಿಯ ಕೆಲ ನಾಯಕರು ನನ್ನ ಬಗ್ಗೆ ಸಿಟ್ಟಾಗಿದ್ದರು. ಈಗ ಕಾಂಗ್ರೆಸ್ ನಾಯಕರು ಸಿಟ್ಟಾಗಿದ್ದಾರೆ. ಸಮುದಾಯದ ಸ್ವಾಮೀಜಿಯಾಗಿ ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಳ್ಳುವೆ” ಎಂದು ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಅರವಿಂದ ಬೆಲ್ಲದ ಆರೋಪ:
“ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸಿ ಹೋರಾಟ ಮಾಡಿದ ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಮೀಸಲಾತಿಗಾಗಿ ನಡೆದ ಹೋರಾಟದಲ್ಲಿ ಪಾಲ್ಗೊಂಡಿದ್ದ ನಾಲ್ಕೈದು ನಾಯಕರು ಸ್ವಾಮೀಜಿಗೆ ಕುಡಿದು ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ” ಎಂದು ಸೋಮವಾರ ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಆರೋಪಿಸಿದ್ದರು.
“ಬಿಜೆಪಿ ಸರ್ಕಾರದ ನಿರ್ಧಾರದಿಂದ ಕಾಂಗ್ರೆಸ್ ನಾಯಕರಿಗೆ ಗರ ಬಡಿದಿದೆ. ಸ್ವಾಮೀಜಿಗಳಿಗೆ ಕರೆ ಮಾಡಿ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ. ಮೀಸಲಾತಿ ಒಪ್ಪಿಕೊಂಡಿರುವುದಕ್ಕೆ ಕೆಲ ಕಾಂಗ್ರೆಸ್ ನಾಯಕರು ಕುಡಿದು ಕಾಲ್ ಮಾಡಿ ಸ್ವಾಮೀಜಿಗೆ ಬೆದರಿಕೆಯೊಡ್ಡುತ್ತಿದ್ದಾರೆ. ಸ್ವತಃ ಮೃತ್ಯುಂಜಯ ಸ್ವಾಮೀಜಿ ಈ ಕುರಿತು ತಮಗಾದ ನೋವನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ” ಎಂದು ತಿಳಿಸಿದ್ದರು.
ಹಾಗೆಯೇ ಜಯಮೃತ್ಯುಂಜಯ ಸ್ವಾಮೀಜಿಗೆ ಬೆದರಿಕೆ ಕರೆ ಆರೋಪ ಹಿನ್ನೆಲೆ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅರವಿಂದ ಬೆಲ್ಲದ ವಿನಂತಿಸಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಡವರ ಬೆವರಿಳಿಸುತ್ತಿರುವ ಬೆಲೆ ಏರಿಕೆ ಚುನಾವಣಾ ವಿಷಯವಲ್ಲವೇ?
ಭದ್ರತೆ ನೀಡಲು ಸಿಎಂ ಸೂಚನೆ
ಜಯ ಮೃತ್ಯುಂಜಯ ಸ್ವಾಮೀಜಿ ಅವರಿಗೆ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ಶಾಸಕ ಅರವಿಂದ ಬೆಲ್ಲದ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮಾಹಿತಿ ನೀಡಿದ ಬೆನ್ನಲ್ಲೇ ಸ್ವಾಮೀಜಿಗೆ ಭದ್ರತೆ ಕೊಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ವಿಜಯೋತ್ಸವಕ್ಕೆ ಕರೆ ನೀಡಿದ್ದ ಸ್ವಾಮೀಜಿ
ಕಳೆದ ಮಾ.30ರಂದು ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ನೀಡಿದ್ದ ಆದೇಶ ಪತ್ರವನ್ನು ಪಡೆದುಕೊಂಡಿದ್ದ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದರು. ಹಾಗೆಯೇ ಮೀಸಲಾತಿ ವಿಜಯೋತ್ಸವ ಆಚರಿಸಲು ಸಮುದಾಯಕ್ಕೆ ಕರೆ ನೀಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ “ಮೀಸಲಾತಿ ಕ್ರೆಡಿಟ್ ಬಿಜೆಪಿ ಪಡೆದುಕೊಳ್ಳುತ್ತಿದೆ. ಅದರ ತಕ್ಕಂತೆ ನೀವು ನಡೆದುಕೊಳ್ಳುತ್ತಿದ್ದೀರಿ” ಎಂದು ಸ್ವಾಮೀಜಿಗೆ ಕಾಂಗ್ರೆಸ್ ನಾಯಕರು ಸಿಟ್ಟಿನಿಂದಲೇ ಹೇಳಿದ್ದಾರೆ ಎನ್ನಲಾಗಿದೆ.

ಆದೇಶ ಪ್ರತಿ ಸುಟ್ಟ ಕಾಂಗ್ರೆಸ್ ನಾಯಕರು
ಪಂಚಮಸಾಲಿ ಸಮುದಾಯವನ್ನು ಪ್ರವರ್ಗ ‘2ಡಿ’ಗೆ ಸೇರಿಸಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಪ್ರತಿಯನ್ನು ಮಾಜಿ ಶಾಸಕರಾದ ವಿನಯ ಕುಲಕರ್ಣಿ, ಎ ಬಿ ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಸೋಮವಾರ ಸುಟ್ಟು ಆಕ್ರೋಶ ಹೊರಹಾಕಿದ್ದಾರೆ.
ಈ ವೇಳೆ ವಿಜಯಾನಂದ ಕಾಶಪ್ಪನವರ ಮಾತನಾಡಿ, “ಪಂಚಮಸಾಲಿ ಸಮಯದಾಯಕ್ಕೆ ಮೀಸಲಾತಿ ಹಂಚಿಕೆಯಲ್ಲಿ ಬೊಮ್ಮಾಯಿ ಸರ್ಕಾರ ಅನ್ಯಾಯ ಮಾಡಿದೆ” ಎಂದು ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.