ಈ ದಿನ ಸಂಪಾದಕೀಯ | ಬಡವರ ಬೆವರಿಳಿಸುತ್ತಿರುವ ಬೆಲೆ ಏರಿಕೆ ಚುನಾವಣಾ ವಿಷಯವಲ್ಲವೇ?

Date:

ಬೆಲೆ ಏರಿಕೆ, ಹಣದುಬ್ಬರ ತಡೆಯುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ನಿರ್ವಹಿಸುತ್ತಿಲ್ಲ. ಜನರೂ ಕೂಡ ಇದು ಸರ್ಕಾರದ ಜವಾಬ್ದಾರಿ ಎಂಬುದನ್ನು ಮನಗಾಣುತ್ತಿಲ್ಲ. ಸರ್ಕಾರದ ಕ್ರಮವನ್ನು ಉಗ್ರವಾಗಿ ಖಂಡಿಸಿ, ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕಾದ ಮಾಧ್ಯಮಗಳಿಗೆ ಅದು ಬೇಕಾಗಿಲ್ಲ. ವಿರೋಧ ಪಕ್ಷಗಳಿಗೆ ಬೆಲೆ ಏರಿಕೆ ಚುನಾವಣಾ ವಿಷಯವೇ ಅಲ್ಲ.

2023-24ನೆ ಹಣಕಾಸು ವರ್ಷ ಆರಂಭವಾಗಿದೆ. ಏಪ್ರಿಲ್ ಒಂದರಿಂದ ಅಗತ್ಯ ವಸ್ತುಗಳ ಬೆಲೆ ದಿಢೀರ್ ಏರಿಕೆಯಾಗಿದೆ. ಬಡವರಿಗೆ ಬೇಸಿಗೆಯ ಜೊತೆಗೆ ಬೆಲೆ ಏರಿಕೆಯ ಬಿಸಿ ತಟ್ಟಲು ಶುರುವಾಗಿದೆ. ಅಂದರೆ ಪ್ರಧಾನಿ ಮೋದಿ ಅವರ ಅಚ್ಛೇ ದಿನ್ ಆರಂಭವಾಗಿದೆ!

ಕಳೆದ ಎರಡು ವರ್ಷಗಳಲ್ಲಿ ಕೊರೊನಾದಿಂದಾಗಿ ಸಂಪೂರ್ಣವಾಗಿ ನೆಲಕಚ್ಚಿದ್ದ ಜನಸಾಮಾನ್ಯರ ಬದುಕು ಇತ್ತೀಚೆಗೆ ತುಸು ಚೇತರಿಕೆ ಕಾಣತೊಡಗಿತ್ತು. ಇಂತಹ ಹೊತ್ತಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿ, ಸರಕು ಸಾಗಾಣಿಕೆ ವೆಚ್ಚವೂ ಏರಿತು. ಅದು ನೇರವಾಗಿ ಜನತೆಯ ತಲೆ ಮೇಲೆ ಬಿತ್ತು. ಕೋವಿಡ್ ನಂತರದ ದಿನಗಳಲ್ಲಿ ದಿನಗೂಲಿಗಳ, ಗೃಹಿಣಿಯರ, ರೈತರ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಾಗಿರುವುದೇಕೆ? ಅಚ್ಛೇ ದಿನ್ ಅನುಭವಿಸುತ್ತಿರುವರು ಯಾರು? ಡಬಲ್ ಎಂಜಿನ್ ಸರ್ಕಾರ ಉತ್ತರಿಸಬೇಕಲ್ಲವೇ?

ಏಪ್ರಿಲ್ ಒಂದರಿಂದ ಅಗತ್ಯವಸ್ತುಗಳಾದ ಔಷಧಿ, ಅಡುಗೆ ಅನಿಲಗಳ ಬೆಲೆ ಏರಿಕೆಯಾಗಿದೆ. ಬದುಕುವುದೇ ಕಷ್ಟವಾಗಿರುವಾಗ ಬೆಲೆ ಏರಿಕೆ ಜನರನ್ನು ಹೈರಾಣಾಗಿಸಿದೆ. ಜನ ಸಾಮಾನ್ಯವಾಗಿ ಬಳಸುವ 800ಕ್ಕೂ ಹೆಚ್ಚು ಔಷಧಿಗಳ ಬೆಲೆ ದಿಢೀರ್ ಏರಿಕೆಯಾಗಿದೆ. ಕಳೆದ ವರ್ಷವೂ ಶೇ. 10 ಕ್ಕಿಂತ ಹೆಚ್ಚು ಏರಿಸಲಾಗಿತ್ತು. ಈ ವರ್ಷ ಮತ್ತೆ ಶೇ.12.12ರಷ್ಟು ಹೆಚ್ಚಿಸಲು ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ ಅನುಮೋದನೆ ನೀಡಿದೆ.

ಇದರ ಜೊತೆಗೆ ಅಡುಗೆ ಅನಿಲ ದರವನ್ನೂ ಏರಿಸಲಾಗಿದೆ. 2014ರಲ್ಲಿ ಕೇಂದ್ರದಲ್ಲಿ ಯುಪಿಐ ಸರ್ಕಾರವಿದ್ದಾಗ ಅಡುಗೆ ಅನಿಲದ ಬೆಲೆ ರೂ. 450 ಇತ್ತು. ಅಷ್ಟಕ್ಕೇ ಅಂದಿನ ವಿರೋಧ ಪಕ್ಷ ಬಿಜೆಪಿ ಬೀದಿಗಿಳಿದು ಪ್ರತಿಭಟಿಸಿತ್ತು. ಸ್ಮೃತಿ ಇರಾನಿಮಾಳವಿಕರ `ಭೀಕರ’ ಪ್ರತಿಭಟನೆ ಜನರಿಂದ ಮೆಚ್ಚುಗೆ ಹಾಗೂ ಮಾಧ್ಯಮಗಳಿಂದ ಪ್ರಚಾರ ಪಡೆದಿತ್ತು. ಈಗ ಅದೇ ಬಿಜೆಪಿ ಅಧಿಕಾರದಲ್ಲಿದೆ. ಕೇವಲ ಒಂಭತ್ತು ವರ್ಷಗಳ ಅವಧಿಯಲ್ಲಿ ಅಡುಗೆ ಅನಿಲದ ಬೆಲೆಯನ್ನು ರೂ. 1105ಕ್ಕೆ ಏರಿಸಿದೆ.

ಬೆಲೆ ಏರಿಕೆಯನ್ನು ತಡೆಯುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ನಿರ್ವಹಿಸುತ್ತಿಲ್ಲ. ಜನರೂ ಕೂಡ ಇದು ಸರ್ಕಾರದ ಜವಾಬ್ದಾರಿ ಎಂಬುದನ್ನು ಮನಗಾಣುತ್ತಿಲ್ಲ. ಸರ್ಕಾರದ ಕ್ರಮವನ್ನು ಉಗ್ರವಾಗಿ ಖಂಡಿಸಿ, ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕಾದ ಮಾಧ್ಯಮಗಳಿಗೆ ಅದು ಬೇಕಾಗಿಲ್ಲ. ವಿರೋಧ ಪಕ್ಷಗಳಿಗೆ ಬೆಲೆ ಏರಿಕೆ ಚುನಾವಣಾ ವಿಷಯವೇ ಅಲ್ಲ.

ಇಂತಹ ವಿರೋಧಾಭಾಸಗಳ ಸನ್ನಿವೇಶದಲ್ಲಿ ಅಂದಂದಿನ ಕೂಲಿಯನ್ನು ನಂಬಿಕೊಂಡ ಬಡ ಕಾರ್ಮಿಕರ ಬದುಕಂತೂ ಹೇಳತೀರದಾಗಿದೆ. ಬೆಲೆ ಏರಿಕೆಯ ನೇರ ಪರಿಣಾಮವನ್ನು ಜನಸಾಮಾನ್ಯರು ಅನುಭವಿಸಿದರೆ ಇದರ ಪರೋಕ್ಷ ಪರಿಣಾಮಗಳು ಜನರ ಖರೀದಿ ಸಾಮರ್ಥ್ಯ, ವ್ಯಾಪಾರ- ವಹಿವಾಟು, ಹಣದುಬ್ಬರ, ಆರ್ಥಿಕತೆಯ ಮೇಲಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರ ಜನಸಾಮಾನ್ಯರ ಹಿತ ಮತ್ತು ಆರ್ಥಿಕತೆ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಕೆಲವೊಂದು ಬೃಹತ್ ಯೋಜನೆಗಳನ್ನು, ದೊಡ್ಡ ಮಟ್ಟದ ಹಣಕಾಸಿನ ವರ್ಗಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಿ ಜನಸಾಮಾನ್ಯರ ಮೇಲಿನ ಹೊರೆ ಕಡಿಮೆಗೊಳಿಸಬೇಕು.

ಇದನ್ನು ಓದಿದ್ದೀರಾ? ರಾಜಕೀಯ ಸತ್ ಪರಂಪರೆಯ ರಾಜ್ಯದಲ್ಲಿ ನಡೆಯಬೇಕಿದೆ ಮುಕ್ತ, ನ್ಯಾಯಸಮ್ಮತ ಚುನಾವಣೆ

ಆದರೆ ಪ್ರಧಾನಿ ಮೋದಿಯವರು ಎಂದಿನಂತೆ ಕಾರ್ಪೋರೇಟ್ ಕುಳಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕಾಯ್ದೆ ಮತ್ತು ಹಣಕಾಸಿನ ವರ್ಗಾವಣೆಯಲ್ಲಿ ನಿರತವಾಗಿದ್ದಾರೆ. ಅದರಲ್ಲೂ ಸ್ನೇಹಿತ ಅದಾನಿಗೆ ಎದುರಾಗಿರುವ ಕಂಟಕದಿಂದ ಪಾರು ಮಾಡಲು ಪ್ರಯತ್ನಿಸುತ್ತಿದ್ದಾರೆ.

ದೇಶದ 28 ಕೋಟಿಗೂ ಹೆಚ್ಚು ನೋಂದಾಯಿತ ಕಾರ್ಮಿಕರ ತಿಂಗಳ ಸಂಬಳದಲ್ಲಿ ಉಳಿತಾಯ ಮಾಡಿ ಪ್ರಾವಿಡೆಂಟ್ ಫಂಡ್‌ನಲ್ಲಿ ಕೂಡಿಟ್ಟಿದ್ದ ಹಣವನ್ನು ಕೂಡ ಮುಳುಗುತ್ತಿರುವ ಅದಾನಿ ಕಂಪನಿಯಲ್ಲಿ ಹೂಡುತ್ತಿದೆ. ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ, ಬಡ ಕಾರ್ಮಿಕರ ಹಣವನ್ನು ಕಾರ್ಮಿಕರಿಗೇ ಸಿಗದಂತೆ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕಾರ್ಮಿಕರ ಪ್ರಾವಿಡೆಂಟ್ ಫಂಡ್‌ಗೆ ಹೊಸ ಕಾಯ್ದೆ ತಂದು, ಕಾರ್ಮಿಕರು ತಮಗೆ ಬೇಕಾದಾಗ ವಾಪಸ್ ಪಡೆದುಕೊಳ್ಳದಂತೆ ನಿರ್ಬಂಧ ಹೇರಿ ಅದನ್ನು ಇಡುಗಂಟಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿ ಉದ್ಯಮಗಳಿಗೆ ಲಾಭ ಮಾಡಿಕೊಡುವ ನೀತಿ ರೂಪಿಸಲಾಗಿದೆ.

28 ಕೋಟಿ ಬಡ ಕಾರ್ಮಿಕರ ಪ್ರಾವಿಡೆಂಟ್ ಫಂಡ್‌ನಲ್ಲಿ 3 ಲಕ್ಷ ಕೋಟಿ ಜಮಾವಣೆಯಾಗಿದೆ. ಅದರಲ್ಲಿ ಶೇ. 15 ರಷ್ಟು ಮೊತ್ತವನ್ನು, ಅಂದರೆ 45,000 ಕೋಟಿಯನ್ನು ಮೋದಿ ಸರ್ಕಾರ ನಿಯಂತ್ರಿಕ ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್(EPFO) ಮೂಲಕ  ಷೇರು ಮಾರುಕಟ್ಟೆಯ ಎಕ್ಸ್‌ಚೇಂಜ್ ಟ್ರೇಡ್ ಫಂಡ್(ETF)ನಲ್ಲಿ ಹೂಡುತ್ತದೆ. ಈ ಇಟಿಎಫ್‌ನಲ್ಲಿ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಗುರುತಿಸುವ 50 ಪ್ರಮುಖ ಕಂಪನಿಗಳಿವೆ. ಆ 50 ಕಂಪೆನಿಗಳಲ್ಲಿ ಅದಾನಿಯ ಕಂಪನಿಗಳೇ ಅಧಿಕವಾಗಿದ್ದು, 38,000 ಕೋಟಿಗಳಷ್ಟು ಕಾರ್ಮಿಕರ ಉಳಿತಾಯದ ಹಣವನ್ನು ಮೋದಿ ಸರ್ಕಾರ ಅದಾನಿ ಕಂಪನಿಗಳಲ್ಲಿ ಹೂಡಿಕೆ ಮಾಡಿದೆ.

ಆ ಮೂಲಕ ದೇಶದ ಆರ್ಥಿಕ ಸ್ಥಿತಿಯನ್ನು, ಅದರಿಂದ ಬಡಜನತೆಯ ಮೇಲಾಗುವ ಪರಿಣಾಮಗಳನ್ನು ಪ್ರಜ್ಞಾಪೂರ್ವಕವಾಗಿಯೇ ಗಾಳಿಗೆ ತೂರಿದ್ದಾರೆ. ಅದನ್ನು ಮರೆಸಲು ಅಮೃತ ಕಾಲದ ಬಗ್ಗೆ ಮಾತನಾಡುತ್ತಿದ್ದಾರೆ. ಮೋದಿ ಸರ್ಕಾರಕ್ಕೆ `ಇಂದು’ ಮುಖ್ಯವಾಗಿಲ್ಲ. `ಭೂತ’ದ ಬಗ್ಗೆ ಬಡಬಡಿಸುತ್ತದೆ; ಇಲ್ಲವೇ ಭವಿಷ್ಯದ ಬಗ್ಗೆ ಮಾತನಾಡುತ್ತದೆ. ವಾಸ್ತವ ಸ್ಥಿತಿಯನ್ನು ಮರೆಮಾಚುತ್ತದೆ.

ಆಡಳಿತ ಸರ್ಕಾರ ಮರೆಮಾಚಲಿ. ಮರೆ ಮಾಚಿದ್ದನ್ನು ತೆರೆದು ತೋರುವ ಕೆಲಸ ಮಾಧ್ಯಮಗಳದ್ದಲ್ಲವೇ? ವಿರೋಧ ಪಕ್ಷಗಳಿಗೆ ಏನಾಗಿದೆ? ಬಡವರ ಬೆವರಿಳಿಸುತ್ತಿರುವ ಬೆಲೆ ಏರಿಕೆ, ಹಣದುಬ್ಬರ ಚುನಾವಣಾ ವಿಷಯವಲ್ಲವೇ? ಮತದಾರರು ಯೋಚಿಸಬೇಕಾದ ಕಾಲ ಬಂದಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಕರಾವಳಿ ಕೋಮು ರಾಜಕಾರಣಕ್ಕೆ ಮದ್ದು ಅರೆಯುವುದೇ ಸಿದ್ದು-ಡಿಕೆ ಜೋಡಿ?

ನಾಳೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೊಸ ಗೃಹಸಚಿವರು ಯಾರಾಗಲಿದ್ದಾರೆ, ಅವರು...

ಈ ದಿನ ಸಂಪಾದಕೀಯ | ಬಿಜೆಪಿಯ ಹಾದಿ ಹಿಡಿದರೆ ಕಾಂಗ್ರೆಸ್‌ನ ಸೊಂಟವನ್ನೂ ಮುರಿದೀತು ಜನಶಕ್ತಿ!

ಕಾಂಗ್ರೆಸ್ಸಿಗರು ಅಧಿಕಾರದ ಕಚ್ಚಾಟದಲ್ಲೇ ಕಾಲ ಕಳೆಯಕೂಡದು. ಕನ್ನಡ ಜನ ತಮ್ಮ ಮೇಲೆ...

ಈ ದಿನ ಸಂಪಾದಕೀಯ | ಅಭಿವೃದ್ಧಿಗಾಗಿ ಬಾಯಾರಿದ ರಾಜ್ಯ; ಹೊಸ ಪರ್ವಕ್ಕೆ ನಾಂದಿ ಹಾಡಲಿ ಕಾಂಗ್ರೆಸ್    

ನಿರುದ್ಯೋಗ, ಭ್ರಷ್ಟಾಚಾರ, ಬೆಲೆ ಏರಿಕೆಯಂಥ ನೂರೆಂಟು ಸಮಸ್ಯೆಗಳು ರಾಜ್ಯದ ಜನರನ್ನು ಕಾಡುತ್ತಿವೆ....

ಈ ದಿನ ಸಂಪಾದಕೀಯ | ಬಿಜೆಪಿಗೆ ಮತದಾರರು ಕಲಿಸಿದ ಪಾಠವನ್ನು ಕಾಂಗ್ರೆಸ್ ಮರೆಯದಿರಲಿ

ಗೆದ್ದು ಗದ್ದುಗೆ ಏರಲು ಸಿದ್ಧವಾಗಿರುವ ಕಾಂಗ್ರೆಸ್ ಈ ಅಜ್ಞಾತ ಮತದಾರರನ್ನು ಮರೆಯಬಾರದು....