- ಲಡಾಖ್ ಸಮುದಾಯವು ಸಾಬೂನು ತಯಾರಿಸಲು ಕತ್ತೆಯ ಹಾಲನ್ನು ಬಳಸುತ್ತದೆ ಎಂದ ನಾಯಕಿ
- ಮರದ ಬದಲು ಹಸುವಿನ ಸಗಣಿಯಿಂದ ಮಾಡಿದ ಮರದ ದಿಮ್ಮಿಗಳನ್ನು ಬಳಸಿ ಎಂದು ಜನತೆಗೆ ಕರೆ
ಕತ್ತೆ ಹಾಲಿನ ಸಾಬೂನು ಯಾವಾಗಲೂ ಮಹಿಳೆಯರ ದೇಹವನ್ನು ಸುಂದರವಾಗಿ ಇಡುತ್ತದೆ. ಈಜಿಪ್ಟ್ ರಾಣಿ ಕ್ಲಿಯೋಪಾತ್ರಾ ಕೂಡ ಕತ್ತೆಯ ಹಾಲಿನಿಂದ ಸ್ನಾನ ಮಾಡುತ್ತಿದ್ದರು ಎಂದು ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು ಎನ್ನಲಾದ ವಿಡಿಯೋದಲ್ಲಿ, “ಕತ್ತೆ ಹಾಲಿನಿಂದ ತಯಾರಿಸಿದ ಸೋಪುಗಳಿಗೆ ದಿಲ್ಲಿಯಲ್ಲಿ 500 ರೂ. ಬೆಲೆ ಇದೆ. ನಾವು ಮೇಕೆ ಹಾಲು ಮತ್ತು ಕತ್ತೆಯ ಹಾಲಿನೊಂದಿಗೆ ಸಾಬೂನು ತಯಾರಿಸಲು ಏಕೆ ಪ್ರಾರಂಭಿಸಬಾರದು?” ಎಂದು ಮೇನಕಾ ಗಾಂಧಿ ಪ್ರಶ್ನಿಸಿದ್ದಾರೆ.
“ಲಡಾಖ್ ಸಮುದಾಯವು ಸಾಬೂನು ತಯಾರಿಸಲು ಕತ್ತೆಯ ಹಾಲನ್ನು ಬಳಸುತ್ತದೆ. ನೀವು ಕತ್ತೆಯನ್ನು ನೋಡಿ ಎಷ್ಟು ದಿನವಾಯಿತು? ಅವುಗಳ ಸಂಖ್ಯೆ ಕುಸಿಯುತ್ತಿದೆ. ಅಗಸ ಸಮುದಾಯ ಕೂಡ ಕತ್ತೆಗಳನ್ನು ಬಳಸುವುದನ್ನು ನಿಲ್ಲಿಸಿದೆ. ಕತ್ತೆಗಳ ಸಂಖ್ಯೆ ಕ್ಷೀಣಿಸುತ್ತಿರುವುದನ್ನು ಗಮನಿಸಿದ ಒಂದು ಸಮುದಾಯ ಕತ್ತೆಗಳಿಂದ ಹಾಲನ್ನು ಕರೆದು, ಆ ಹಾಲಿನಿಂದ ಸಾಬೂನು ತಯಾರಿಸುವುದನ್ನು ಪ್ರಾರಂಭಿಸಿತು. ಈ ಹಾಲಿನಿಂದ ಮಾಡಿದ ಸೋಪು ಮಹಿಳೆಯರ ದೇಹವನ್ನು ಎಂದೆಂದಿಗೂ ಸುಂದರವಾಗಿಡುತ್ತದೆ” ಎಂದು ಮೇನಕಾ ಗಾಂಧಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹೊಸ ಸಂಸತ್ತಿನ ಹೊರಗೆ ಪ್ರಧಾನಿ ಮೋದಿ ಪದವಿ ದಾಖಲೆಗಳ ಪ್ರದರ್ಶನವಾಗಲಿ; ಸಂಜಯ್ ರಾವುತ್ ಆಗ್ರಹ
ಮರಗಳು ಕಣ್ಮರೆಯಾಗುತ್ತಿರುವ ಬಗ್ಗೆ ಕೂಡ ಮೇನಕಾ ಗಾಂಧಿ ಮಾತನಾಡಿದ್ದು, “ಮರಗಳು ಕಣ್ಮರೆಯಾಗುತ್ತಿರುವುದರಿಂದ ಕಟ್ಟಿಗೆ ದುಬಾರಿಯಾಗುತ್ತಿದೆ. ಇದೇ ಕಾರಣಕ್ಕೆ ಅಂತ್ಯಸಂಸ್ಕಾರದ ವೆಚ್ಚವೂ ಹೆಚ್ಚಾಗಿದೆ. ಮರದ ಬೆಲೆ ಎಷ್ಟು ಹೆಚ್ಚಾಗಿದೆ ಎಂದರೆ ಸಾವಿನಲ್ಲೂ ಜನ ತಮ್ಮ ಕುಟುಂಬವನ್ನು ಮತ್ತಷ್ಟು ಬಡತನಕ್ಕೆ ತಳ್ಳುತ್ತಿದ್ದಾರೆ” ಎಂದಿದ್ದಾರೆ.
“ಮರಕ್ಕೆ 15,000 ರಿಂದ 20,000 ರೂ. ನೀಡುವುದಕ್ಕಿಂತ ನಾವು ಹಸುವಿನ ಸಗಣಿಗೆ ಸುಗಂಧ ದ್ರವ್ಯ ಸೇರಿಸಿ ಮೃತದೇಹವನ್ನು ಸುಡಲು ಬಳಸಬೇಕು. ಇದರಿಂದ ಶವಸಂಸ್ಕಾರದ ವೆಚ್ಚವನ್ನು ಕೇವಲ 1,500 ರೂ.ನಿಂದ 2,000 ರೂ.ಕ್ಕೆ ಇಳಿಸುತ್ತದೆ. ಜೊತೆಗೆ ಹಸುವಿನ ಸಗಣಿಯಿಂದ ಮಾಡಿದ ಮರದ ದಿಮ್ಮಿಗಳನ್ನು ಮಾರಾಟ ಮಾಡುವುದರ ಮೂಲಕ ಲಕ್ಷಾಂತರ ರೂ. ಆದಾಯ ಗಳಿಸಬಹುದು” ಎಂದು ಮೇನಕಾ ಗಾಂಧಿ ಹೇಳಿದ್ದಾರೆ.