“ಅವಮಾನ ಕೀಳರಿಮೆ ಸಂಕೋಚ ಸ್ವಭಾವ ಎಲ್ಲವನ್ನು ನೀಗುವ ಶಕ್ತಿ ಪುಸ್ತಕಗಳಲ್ಲಿದೆ. ಜಗತ್ತಿಗೆ ಅಂಬೇಡ್ಕರ್, ಚರ್ಚಿಲ್, ಅಬ್ದುಲ್ ಕಲಾಂರಂತಹ ವ್ಯಕ್ತಿತ್ವಗಳನ್ನು ಪರಿಚಯಿಸಿದ್ದು ಪುಸ್ತಕಗಳೇ. ಆದ್ದರಿಂದ ವಿದ್ಯಾರ್ಥಿಗಳು ಬೇಡಿದ್ದನ್ನು ಕೊಡುವ ಏಕೈಕ ಕಾಮಧೇನುವೆಂದರೆ ಅದು ಪುಸ್ತಕವೇ” ಎಂದು ಡಾ. ಮಹಾಂತೇಶ ಪಾಟೀಲ್ ಹೇಳಿದರು.
ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಮಹಾಂತೇಶ ಪಾಟೀಲ ಅವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹೊನ್ನಾಳಿ ನ್ಯಾಮತಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಶಾಂತನಗೌಡ ಪಾಟೀಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಇಡೀ ದೇಶದಲ್ಲಿಯೇ ಅತಿ ಹೆಚ್ಚು ಶಿಕ್ಷಕರನ್ನು ನೇಮಿಸಿಕೊಂಡ ಗೋವಿಂದೇಗೌಡರನ್ನು ಸ್ಮರಿಸುತ್ತಾ ದೇಶದಲ್ಲಿಯೇ ಅತ್ಯುತ್ತಮವಾದ ಪ್ರಗತಿ ಕಾಣಲು ಶಿಕ್ಷಣವು ಸಹಕಾರಿಯಾಗಿದೆ. ಆದ್ದರಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉತ್ತಮವಾಗಿ ಓದಿ ಬದುಕನ್ನು ಕಟ್ಟಿಕೊಳ್ಳಿ ” ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಕೇಳಿದ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರು ಶಿವಕುಮಾರ ಡಿ ಇವರು ಮಾತನಾಡಿ, “ವಿದ್ಯಾರ್ಥಿಕೇಂದ್ರಿತ ಕಾರ್ಯಕ್ರಮಗಳು ಬಹು ಮುಖ್ಯವಾಗಿದ್ದು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಬೇಕಾದ ಸಕಲ ಸೌಲಭ್ಯಗಳನ್ನು ನೀಡುವಲ್ಲಿ ಮಾನ್ಯ ಶಾಸಕರು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಮತ್ತು ಬೋಧಕ ಬೋಧಕೇತರ ಸಿಬ್ಬಂದಿಯ ಸಹಕಾರ ನೀಡಿರುವರು” ಎಂದು ಸ್ಮರಿಸಿ, “ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ರೂಡಿಸಿಕೊಳ್ಳಲು ಅಗತ್ಯವಾದ ಅಂಶಗಳ ಕುರಿತು ಮಾತನಾಡಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾನ್ಯ ಶಾಸಕರು ಮತ್ತು ಗಣ್ಯರು ನೆರವೇರಿಸಿದರು. ವರ್ಗದ ಪ್ರತಿನಿಧಿಗಳನ್ನು ನೇಮಿಸಿ ಅವರಿಗೆ ಶಾಲಾ ಅಭಿವೃದ್ಧಿಗಾಗಿ ಶ್ರಮಿಸುವಂತೆ ಪ್ರತಿಜ್ಞೆಯನ್ನು ಬೋಧಿಸಲಾಯಿತು.
ಕಾಲೇಜಿನ ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರು ಬೋಧಕ ಬೋಧಕ ಸಿಬ್ಬಂದಿಗಳು ಉಪಸ್ಥಿತರಿದ್ದರು. ಡಾ. ಜ್ಯೋತಿ ಎನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಎಂ.ಬಿ. ರೇವಣಸಿದ್ದಪ್ಪ ನಿರೂಪಣೆ ಮಾಡಿದರು. ಡಾ. ಜಿ.ಆರ್. ರಾಜಶೇಖರ ಸ್ವಾಗತಿಸಿದರು. ಶ್ರೀ ಎಸ್.ಎಚ್. ಚಂದ್ರಪ್ಪ ವಂದನಾರ್ಪಣೆ ಸಲ್ಲಿಸಿದರು.






