ದಾವಣಗೆರೆ ತಾಲೂಕಿನ ಎಚ್. ಕಲ್ಪನಹಳ್ಳಿ ಗ್ರಾಮದ ಅಡಿಕೆ ತೋಟದಲ್ಲಿರುವ ಗೋದಾಮಿನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 8ಕ್ಕೂ ಹೆಚ್ಚು ಸಿಲಿಂಡರ್‌ಗಳು ಸ್ಫೋಟಗೊಂಡು ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ದೊಗ್ಗಳ್ಳಿ ಶಿವಕುಮಾರ್ ಅವರಿಗೆ ಸೇರಿದ ಅಡಿಕೆ ಸಂಸ್ಕರಣಾ ಗೋದಾಮನ್ನು ಖಾಲಿ ಇದ್ದ ಕಾರಣ ಅನಿಲ್ ಎಂಬುವವರಿಗೆ ಬಾಡಿಗೆಗೆ ನೀಡಲಾಗಿತ್ತು.

ದಾವಣಗೆರೆ ಹೊರವಲಯದ ಕಲ್ಪನಹಳ್ಳಿಯ ತೋಟದ ಗೋದಾಮೊಂದರಲ್ಲಿ ಸಿಲಿಂಡರ್‌ಗಳನ್ನು ಸಂಗ್ರಹಿಸಿಡಲಾಗಿದ್ದು, ಅವಘಡ ಸಂಭವಿಸಿದ ವೇಳೆ ಅನಿಲ್ ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗೋದಾಮಿನಲ್ಲಿದ್ದ ಸುಮಾರು 20ರಿಂದ 25 ಸಿಲಿಂಡರ್‌ಗಳ ಪೈಕಿ 8ಕ್ಕೂ ಹೆಚ್ಚು ಸಿಲಿಂಡರ್‌ಗಳು ಭೀಕರವಾಗಿ ಸ್ಫೋಟಗೊಂಡಿವೆ.

ಸ್ಫೋಟದ ತೀವ್ರತೆಗೆ ಕೆಲವು ಸಿಲಿಂಡರ್‌ಗಳು 100ರಿಂದ 200 ಮೀಟರ್ ದೂರದವರೆಗೆ ಹಾರಿ ಬಿದ್ದಿವೆ. ಸ್ಫೋಟದ ಸದ್ದು ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕ ಮೂಡಿಸಿತು.
ಪ್ರಾಥಮಿಕ ಮಾಹಿತಿಯ ಪ್ರಕಾರ, ಯಾರೋ ಧೂಮಪಾನ ಮಾಡುತ್ತಿದ್ದ ವೇಳೆ ಸಿಗರೇಟ್‌ನ ಕಿಡಿ ಸಿಲಿಂಡರ್ ಅನಿಲಕ್ಕೆ ತಗುಲಿರುವುದರಿಂದ ಬೆಂಕಿ ಕಾಣಿಸಿಕೊಂಡು ಬಳಿಕ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಯಾವುದೇ ಮುಂಜಾಗ್ರತಾ ಕ್ರಮಗಳು ಹಾಗೂ ಸುರಕ್ಷತಾ ವ್ಯವಸ್ಥೆಗಳಿಲ್ಲದೆ ಕಾನೂನುಬಾಹಿರವಾಗಿ ಸಿಲಿಂಡರ್‌ಗಳನ್ನು ಸಂಗ್ರಹಿಸಿಡಲಾಗಿತ್ತು ಎಂಬ ಆರೋಪಗಳು ಕೇಳಿಬಂದಿವೆ.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದು, ಉಳಿದ ಸಿಲಿಂಡರ್‌ಗಳು ಸ್ಫೋಟಗೊಳ್ಳದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡರು. ಸುತ್ತಮುತ್ತ ಯಾವುದೇ ಜನವಸತಿ ಪ್ರದೇಶ ಇಲ್ಲದ ಕಾರಣ ಭಾರಿ ಪ್ರಮಾಣದ ಪ್ರಾಣಹಾನಿ ತಪ್ಪಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಎಸ್‌ಐಆರ್ ಪ್ರಜಾತಂತ್ರ, ಸಂವಿಧಾನದ ಆಶಯಗಳ ವಿರೋಧಿ: ಜನಪರ ಸಂಘಟನೆಗಳು ಧರಣಿ
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ. ಶೇಖರ್ ಹಾಗೂ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅವಘಡಕ್ಕೆ ನಿಖರ ಕಾರಣ ಹಾಗೂ ಸಿಲಿಂಡರ್ ಸಂಗ್ರಹದ ಕಾನೂನುಬದ್ಧತೆ ಕುರಿತು ತನಿಖೆ ಮುಂದುವರಿದಿದೆ.





