ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಲಭಿಸಿರುವ ಅತ್ಯಂತ ಮಹತ್ವದ ಹಕ್ಕು – ಮತದಾನದ ಹಕ್ಕು. ಆದರೆ, ಮತದಾರರ ಪಟ್ಟಿಯಲ್ಲೇ ಅರ್ಹರ ಹೆಸರು ನಾಪತ್ತೆಯಾದರೆ? ಈಗ ಚುನಾವಣಾ ಆಯೋಗವು ಅಂತಹದ್ದೇ ಕೃತ್ಯಗಳನ್ನು ಎಸಗುತ್ತಿದೆ. ಬದುಕಿರುವ ಮತದಾರರನ್ನೂ ಅಕ್ರಮವಾಗಿ ಪಟ್ಟಿಯಿಂದ ಹೊರಹಾಕಲಾಗುತ್ತಿದೆ. ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ‘ಎಸ್ಐಆರ್ ಪ್ರಕ್ರಿಯೆಯಿಂದ ರಾಜ್ಯದ ಯಾವುದೇ ಒಬ್ಬ ಅರ್ಹ ಮತದಾರನೂ ಹೊರಗುಳಿದಿಲ್ಲ’ ಎಂದು ಅಧಿಕೃತ ಹೇಳಿಕೆ ನೀಡಿದ್ದರು. ಆದರೆ, ಕಲಬುರಗಿ ಜಿಲ್ಲೆಯಲ್ಲಿ ನೈಜ ಮತದಾರರ ಹೆಸರುಗಳೇ ಡಿಲೀಟ್ ಆಗಿವೆ.
ಜನರ ಬಳಿ ಅಧಿಕೃತ ಮತದಾರರ ಗುರುತಿನ ಚೀಟಿ ಇದೆ, ಸ್ವಂತ ಮನೆಯಿದೆ, ಅಗತ್ಯವಿರುವ ಎಲ್ಲ ಸರ್ಕಾರಿ ದಾಖಲೆಗಳಿವೆ ಹಾಗೂ ಹಲವು ದಶಕಗಳಿಂದ ಅವರು ಅದೇ ವಿಳಾಸದಲ್ಲಿ ನಿರಂತರವಾಗಿ ವಾಸಿಸುತ್ತಿದ್ದಾರೆ. ಆದಾಗ್ಯೂ ಎಸ್ಐಆರ್ ಅಂತಿಮ ಪಟ್ಟಿಯಲ್ಲಿ ಅವರ ಹೆಸರುಗಳು ಕಾಣಿಸುತ್ತಿಲ್ಲ. ಬಿಎಲ್ಒಗಳಿಂದ ತಮ್ಮ ಮನೆಗೆ ಎನ್ಯೂಮರೇಷನ್ ಫಾರಂ ತಲುಪಲೇ ಇಲ್ಲ ಎಂದು ಕೆಲವರು ಆರೋಪಿಸುತ್ತಿದ್ದರೆ, ಭರ್ತಿ ಮಾಡಿ ನೀಡಿದ ಫಾರಂಗಳನ್ನು ಅಧಿಕಾರಿಗಳು ಸ್ವೀಕರಿಸದೇ ನಿರ್ಲಕ್ಷಿಸಿದ್ದಾರೆ ಎಂದು ಮತ್ತೆ ಕೆಲವರು ದೂರಿದ್ದಾರೆ. ಇನ್ನು ಕೆಲವರಂತೂ ಅದೇ ಮನೆಯಲ್ಲಿ ವಾಸವಿದ್ದರೂ ಅವರನ್ನು ‘ಶಾಶ್ವತವಾಗಿ ಸ್ಥಳಾಂತರಗೊಂಡವರು’ ಎಂದು ತಪ್ಪಾಗಿ ದಾಖಲಿಸಿ ಪಟ್ಟಿಯಿಂದಲೇ ಹೊರಹಾಕಲಾಗಿದೆ.
ಇದು ಕೇವಲ ತಾಂತ್ರಿಕ ಲೋಪವೇ ಅಥವಾ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ನಿರತರಾಗಿದ್ದ ಅಧಿಕಾರಿಗಳ ಬೇಜವಾಬ್ದಾರಿತನವೇ ಎಂಬ ಪ್ರಶ್ನೆ ಮೂಡಿದ್ದು, ಅರ್ಹ ಮತದಾರರು ತಮ್ಮ ಸಂವಿಧಾನಬದ್ಧ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಯಾರ ಮುಂದೆ ಅಳಲು ತೋಡಿಕೊಳ್ಳಬೇಕು ಎಂಬ ದಿಕ್ಕು ಕಾಣದಂತಾಗಿದ್ದಾರೆ.
ಮರತೂರಿನ ಅಂಬಾರಾಯ: ಹೆಂಡತಿ, ಮಗನ ಹೆಸರು ಇದೆ; ನನ್ನ ಹೆಸರೇಕೆ ಇಲ್ಲ?
ಕಲಬುರಗಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮರತೂರು ಗ್ರಾಮದ ನಿವಾಸಿ ಅಂಬಾರಾಯ ಎಂಬ ವೃದ್ಧರ ಅಳಲು ಈ ಇಡೀ ವ್ಯವಸ್ಥೆಯಲ್ಲಿರುವ ಭ್ರಷ್ಟತೆ ಮತ್ತು ಲೋಪಗಳಿಗೆ ಸಾಕ್ಷಿಯಾಗಿದೆ. ಹಲವು ವರ್ಷಗಳಿಂದ ಅದೇ ಗ್ರಾಮದಲ್ಲಿ ವಾಸವಿದ್ದು, ನಿರಂತರವಾಗಿ ಮತದಾನ ಮಾಡುತ್ತಾ ಬಂದಿರುವ ಅವರ ಕುಟುಂಬಕ್ಕೆ ಎಸ್ಐಆರ್ ಪ್ರಕ್ರಿಯೆಯಲ್ಲಾದ ಅನುಭವ ಆಘಾತಕಾರಿಯಾಗಿದೆ. ಅಂಬಾರಾಯ ಅವರ ಪತ್ನಿ ಮತ್ತು ಮಗನಿಗೆ ಎನ್ಯೂಮರೇಷನ್ ಫಾರಂ ನೀಡಿದ್ದ ಬಿಎಲ್ಒಗಳು, ಅಂಬಾರಾಯ ಅವರ ಹೆಸರಿನ ಫಾರಂ ಮಾತ್ರ ಬಂದಿಲ್ಲ ಎಂದು ಹೇಳಿದ್ದಾರೆ.

ತಮ್ಮ ಬಳಿ SMC6322754 ಸಂಖ್ಯೆಯ ಎಪಿಕ್ ಕಾರ್ಡ್ ಇದ್ದರೂ, ತಾವಿನ್ನೂ ಜೀವಂತವಾಗಿದ್ದರೂ ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. “ನಾವು ಅವಿದ್ಯಾವಂತರು, ವಯಸ್ಸಾಗಿದೆ, ಮಗ ಬೆಂಗಳೂರಿನಲ್ಲಿದ್ದಾನೆ. ನಮಗೆ ಯಾರು ಸರಿಯಾದ ಮಾಹಿತಿ ನೀಡಬೇಕು? ಕಚೇರಿಗಳಿಗೆ ಅಲೆದಾಡುವ ಶಕ್ತಿಯೂ ನಮಗಿಲ್ಲ, ಬದುಕಿದ್ದರೂ ನಮ್ಮನ್ನು ಸತ್ತವರಂತೆ ಮಾಡಿರುವುದು ಯಾವ ನ್ಯಾಯ?” ಎಂದು ಅವರು ತಮ್ಮ ಅಸಹಾಯತೆಯನ್ನು ವ್ಯಕ್ತಪಡಿಸಿದ್ದಾರೆ.
ಎಂ.ಡಿ. ಅತೀಕ್ ದರ್ಜಿ: ದಾಖಲೆಗಳಿವೆ, ಆದರೆ ಆನ್ಲೈನ್ನಲ್ಲಿ ಮಾಹಿತಿ ಇಲ್ಲ!
ಅದೇ ರೀತಿ, ಎಂ.ಡಿ. ಅತೀಕ್ ದರ್ಜಿ ಎಂಬುವವರ ಕುಟುಂಬದಲ್ಲೂ ಇಂತಹದ್ದೇ ಗೊಂದಲ ಸೃಷ್ಟಿಯಾಗಿದೆ. ದೇಶದ ಸದ್ಪ್ರಜೆಯಾಗಿ ಅಗತ್ಯ ದಾಖಲೆಗಳಿದ್ದರೂ ಎನ್ಯೂಮರೇಷನ್ ಫಾರಂ ನೀಡುವ ಮತ್ತು ಸಂಗ್ರಹಿಸುವಲ್ಲಿ ಬಿಎಲ್ಒಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಅವರು ಪ್ರಕ್ರಿಯೆಯಿಂದ ಹೊರಗುಳಿಯುವಂತಾಗಿದೆ. ಅವರ ತಂದೆ ಗುಲಾಮ್ ದಸ್ತಗಿರ (ಎಪಿಕ್ ಸಂಖ್ಯೆ SMH3147931) ಅವರ ಹೆಸರನ್ನು ಆನ್ಲೈನ್ನಲ್ಲಿ ಪರಿಶೀಲಿಸಿದಾಗ ‘ಡೇಟಾ ನಾಟ್ ಅವೈಲಬಲ್’ (Data Not Available) ಎಂದು ತೋರಿಸುತ್ತಿದ್ದು, ತಾಂತ್ರಿಕ ಅಜ್ಞಾನಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಾದ ಆಯೋಗವು ಯಾವುದೇ ಮಾಹಿತಿ ನೀಡದೆ ಕತ್ತಲಲ್ಲಿಟ್ಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

40 ವರ್ಷಗಳ ವಾಸಕ್ಕೂ ಬೆಲೆ ಇಲ್ಲವೇ? ವೈದ್ಯರನ್ನೇ ‘ಪರ್ಮನೆಂಟ್ ಶಿಫ್ಟೆಡ್’ ಎಂದು ಗುರುತಿಸಿದರೇ?
ಇನ್ನು ಎಸ್ಐಆರ್ ಪ್ರಕ್ರಿಯೆಯಲ್ಲಾದ ಅತ್ಯಂತ ಭೀಕರ ಮತ್ತು ಗಂಭೀರ ಲೋಪಕ್ಕೆ ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಹಾವೀರ ನಗರದ ಉದಾಹರಣೆಯೇ ಸಾಕ್ಷಿ. ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸುಮಾರು 30 ರಿಂದ 35 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿರುವ ಡಾ. ಸಂಪತ್ರಾವ್ ಅವರ ಹೆಸರೇ ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದೆ.
ಕಳೆದ 40 ವರ್ಷಗಳಿಂದ ಕಲಬುರಗಿಯ ಮಹಾವೀರ ನಗರದಲ್ಲೇ ಸ್ವಂತ ಮನೆಯಲ್ಲಿ ವಾಸಿಸುತ್ತಿರುವ ಸಂಪತ್ರಾವ್ ಅವರು, ಸರ್ಕಾರಿ ಐಟಿಐ ಕಾಲೇಜಿನ ಮತಗಟ್ಟೆಯಲ್ಲಿ ನಿರಂತರವಾಗಿ ಮತ ಚಲಾಯಿಸುತ್ತಿದ್ದರು. ವಿದೇಶದಲ್ಲಿರುವ ಮಗಳ ಬಳಿಗೆ ತೆರಳುವ ಮುನ್ನ ಬಿಎಲ್ಒ ಕೊಟ್ಟಿದ್ದ ಎನ್ಯೂಮರೇಷನ್ ಫಾರಂ ಅನ್ನು ಭರ್ತಿ ಮಾಡಿ ಮನೆಯ ಸಹಾಯಕರ ಕೈಯಲ್ಲಿ ಕೊಟ್ಟು, ಅದನ್ನು ಬಂದು ಪಡೆದುಕೊಳ್ಳುವಂತೆ ಬಿಎಲ್ಒಗೆ ಸೂಚಿಸಿದ್ದರು. ಆದರೆ ಬಿಎಲ್ಒ ಆ ಫಾರಂ ಅನ್ನು ಸಂಗ್ರಹಿಸದೇ ನಿರ್ಲಕ್ಷಿಸಿ, 40 ವರ್ಷಗಳಿಂದ ಒಂದೇ ಮನೆಯಲ್ಲಿರುವ ಪ್ರತಿಷ್ಠಿತ ವೈದ್ಯರನ್ನೇ ‘ಪರ್ಮನೆಂಟ್ ಶಿಫ್ಟೆಡ್’ ಎಂದು ತಪ್ಪಾಗಿ ಗುರುತಿಸಿ ಪಟ್ಟಿಯಿಂದ ಕೈಬಿಟ್ಟಿದ್ದಾರೆ.

ಜನಸಾಮಾನ್ಯರ ಈ ಸರಣಿ ದೂರುಗಳ ನಡುವೆ, ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಎಸ್ಐಆರ್ ಪ್ರಕ್ರಿಯೆಯ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿದೆ. ಸಿಪಿಐ ಜಿಲ್ಲಾ ಕಾರ್ಯದರ್ಶಿ ಡಾ. ಮಹೇಶಕುಮಾರ ರಾಠೋಡ್ ಅವರು, “ಕಲಬುರಗಿ ಜಿಲ್ಲೆಯೊಂದರಲ್ಲೇ ಬರೋಬ್ಬರಿ 4.77 ಲಕ್ಷ ನೈಜ ಮತದಾರನ್ನು ಪಟ್ಟಿಯಿಂದ ಹೊರಹಾಕಲಾಗಿದೆ” ಎಂದು ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“2026ರ ಅಂದಾಜಿನ ಪ್ರಕಾರ ಕರ್ನಾಟಕದ ಒಟ್ಟು ಜನಸಂಖ್ಯೆ 6.89 ಕೋಟಿ ಇದ್ದು, ಅದರಲ್ಲಿ 18 ವರ್ಷ ಮೇಲ್ಪಟ್ಟ ಪ್ರೌಢ ಮತದಾರರ ಸಂಖ್ಯೆ 5.19 ಕೋಟಿ ಇದೆ. ಈ ಹಿಂದೆ ರಾಜ್ಯದಲ್ಲಿ 5.54 ಕೋಟಿ ನೋಂದಾಯಿತ ಮತದಾರರಿದ್ದರು. ಆದರೆ, ಎಸ್ಐಆರ್ ನಂತರ ಪ್ರಕಟಿಸಲಾಗಿರುವ ಅಂತಿಮ ಪಟ್ಟಿಯಲ್ಲಿ ಕೇವಲ 4.55 ಕೋಟಿ ಮತದಾರರಷ್ಟೇ ದಾಖಲಾಗಿದ್ದಾರೆ. ಹಾಗಾದರೆ ನಾಪತ್ತೆಯಾಗಿರುವ ಆ ಬೃಹತ್ ಪ್ರಮಾಣದ ಮತದಾರರು ಎಲ್ಲಿ ಹೋದರು ಎಂಬುದನ್ನು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಗಡಿಯಲ್ಲಿ ಚೀನಾ ಅತಿಕ್ರಮಣ; ಮೌನಕ್ಕೆ ಸರಿದ 56 ಇಂಚಿನ ಎದೆಯ ಮೋದಿ!
ನಿಯಮಾನುಸಾರ ಹಿಂದೆ ಪಟ್ಟಿಯಲ್ಲಿದ್ದು ಈಗ ಕಾರಣಾಂತರಗಳಿಂದ ಹೊರಗುಳಿದಿರುವವರನ್ನು ‘ಹೊಸ ಮತದಾರರು’ ಎಂದು ಪರಿಗಣಿಸದೆ, ಮರು ಸೇರ್ಪಡೆಗೊಳಿಸಲು ತಕ್ಷಣವೇ ವಿಶೇಷ ಅಭಿಯಾನ ನಡೆಸಬೇಕು. ಪ್ರಸ್ತುತ ಪ್ರಕಟವಾಗಿರುವ ಅಂತಿಮ ಪಟ್ಟಿಯನ್ನು ಮರುಪರಿಶೀಲಿಸಿ ಅರ್ಹರ ಹೆಸರುಗಳನ್ನು ತಕ್ಷಣವೇ ಸೇರಿಸಬೇಕು. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತಕ್ಷಣವೇ ವಜಾಗೊಳಿಸಬೇಕು ಹಾಗೂ ಪ್ರಸ್ತುತ ಎಸ್ಐಆರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ಅಕ್ರಮವಾಗಿ ಹೊರಹಾಕಲ್ಪಟ್ಟವರ ಮತದಾನದ ಹಕ್ಕನ್ನು ಮರುಸ್ಥಾಪಿಸಬೇಕು. ಆಯೋಗದ ಸ್ವತಂತ್ರ ಕಾರ್ಯನಿರ್ವಹಣೆಗಾಗಿ ಪ್ರಧಾನಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯ ಮೂಲಕವೇ ಚುನಾವಣಾ ಆಯುಕ್ತರ ನೇಮಕಾತಿ ನಡೆಯಬೇಕು. ಕರ್ನಾಟಕದ ಒಟ್ಟು ಒಂದು ಕೋಟಿಗೂ ಹೆಚ್ಚು ಹಾಗೂ ಕಲಬುರಗಿಯ 4.77 ಲಕ್ಷ ಮತದಾರರು ಹೊರಗುಳಿದಿರುವ ಕುರಿತು ಆಯೋಗವು ಪಾರದರ್ಶಕ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಸಿಪಿಐ ಒತ್ತಾಯಿಸಿದೆ.
ಎಸ್ಐಆರ್ ಪ್ರಕ್ರಿಯೆಯು ಮತದಾರರ ಪಟ್ಟಿಯನ್ನು ಶುದ್ಧೀಕರಿಸಿ ನಕಲಿ ಹೆಸರುಗಳನ್ನು ತೆಗೆದುಹಾಕುವ ಸದುದ್ದೇಶವನ್ನು ಹೊಂದಿರಬಹುದು. ಆದರೆ, ಆ ಪ್ರಕ್ರಿಯೆಯ ಅನುಷ್ಠಾನದಲ್ಲಿ ನೈಜ ಹಾಗೂ ಅರ್ಹ ಮತದಾರರೇ ಪಟ್ಟಿಯಿಂದ ಹೊರಬಿದ್ದರೆ ಆ ಮಹಾಪರಾಧದ ಹೊಣೆಗಾರಿಕೆ ಯಾರದ್ದು? ಎನ್ಯೂಮರೇಷನ್ ಫಾರಂ ತಲುಪದಿದ್ದರೆ ಅಥವಾ ಸಲ್ಲಿಸಿದ ಫಾರಂ ಸ್ವೀಕರಿಸದಿದ್ದರೆ ನಾಗರಿಕರು ಯಾರ ಬಳಿ ಹೋಗಬೇಕು? ಆನ್ಲೈನ್ನಲ್ಲಿ ತಾಂತ್ರಿಕ ದೋಷ ಬಂದಾಗ ವಯೋವೃದ್ಧರು, ಅವಿದ್ಯಾವಂತರು ಹಾಗೂ ಗ್ರಾಮೀಣ ಜನರಿಗೆ ನ್ಯಾಯ ಸಿಗುವುದು ಹೇಗೆ? ಚುನಾವಣಾ ಆಯೋಗವು ಕೇವಲ ಅಂಕಿಅಂಶಗಳನ್ನು ತೋರಿಸಿ ಪ್ರಕ್ರಿಯೆ ಯಶಸ್ವಿ ಎಂದು ಹೇಳಿಕೊಳ್ಳುವ ಬದಲು, ಅಹವಾಲು ಹಿಡಿದು ನಿಂತಿರುವ ಅಂಬಾರಾಯ, ಅತೀಕ್ ದರ್ಜಿ ಹಾಗೂ ಡಾ. ಸಂಪತ್ರಾವ್ ಅವರಂತಹ ಲಕ್ಷಾಂತರ ನೈಜ ನಾಗರಿಕರ ದೂರುಗಳನ್ನು ತಕ್ಷಣವೇ ಇತ್ಯರ್ಥಪಡಿಸಿ ಅವರ ಪ್ರಜಾಸತ್ತಾತ್ಮಕ ಧ್ವನಿಗೆ ಬೆಲೆ ನೀಡಬೇಕಿದೆ.




