ಹರಿಹರ ಪಂಚಮಸಾಲಿ ಪೀಠದಲ್ಲಿ ಏ.24ರ ಮಧ್ಯಾಹ್ನ 3ಕ್ಕೆ ಬಸವೋತ್ಸವವನ್ನು ಆಚರಿಸಿದರೆ ಪೀಠದ ಆಸ್ತಿಗಳಿಗೆ ಧಕ್ಕೆಯಾಗಿ, ಸಮಾಜದವರು ಪರ-ವಿರೋಧ ಗುಂಪಾಗಿ, ಗಲಾಟೆಯ ಸಾಧ್ಯತೆ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ದಾವಣಗೆರೆ ಜಿಲ್ಲೆ ಹರಿಹರ ಪಂಚಮಸಾಲಿ ಶ್ರೀಪೀಠದ ಪ್ರಧಾನ ಧರ್ಮದರ್ಶಿ ಹಾಗೂ ಟ್ರಸ್ಟಿಗಳು ಹರಿಹರ ಗ್ರಾಮಾಂತರ ವೃತ್ತ ನಿರೀಕ್ಷಕರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಟ್ರಸ್ಟಿ ಜ್ಯೋತಿಪ್ರಕಾಶ ಹರಿಹರ ನಗರದ ವೃತ್ತ ನಿರೀಕ್ಷಕರಿಗೆ ನೀಡಿರುವ ಮನವಿಯಲ್ಲಿ (ದೂರು)
“ಪಂಚಮಸಾಲಿ ಪೀಠದ ಟ್ರಸ್ಟ್‌ನಿಂದಲೇ ಮುಂದಿನ ದಿನಗಳಲ್ಲಿ ಬಸವ ಜಯಂತಿ ಆಚರಣೆಗೆ ದಿನಾಂಕ ನಿಗದಿಪಡಿಸಿದ್ದು, ಶ್ರೀಪೀಠದ ಟ್ರಸ್ಟಿಗಳು ಹಾಗೂ ಸಮಾಜ ಬಾಂಧವರು ತೀರ್ಮಾನಿಸಿದ್ದೇವೆ, ಹಾಗಾಗಿ ಏ.24ರಂದು ಶ್ರೀಪೀಠದಲ್ಲಿ ಯಾವುದೇ ಸಭೆ ನಡೆಸಲು ಅವಕಾಶ ಮಾಡಿಕೊಡಬಾರದು” ಎಂದು ಪೊಲೀಸ್ ಇಲಾಖೆಗೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
“ಪಂಚಮಸಾಲಿ ಶ್ರೀ ಪೀಠದ ಉಚ್ಛಾಟಿತ ವಚನಾನಂದ ಶ್ರೀಗಳ ಭಾವಚಿತ್ರವನ್ನು ಹಾಕಿಕೊಂಡು ಪೀಠದಲ್ಲಿ ಏ.24ರ ಮಧ್ಯಾಹ್ನ 3ರಿಂದ ಶ್ರೀಪೀಠದ ಭಕ್ತರ ಹಾಗೂ ಸಮಾಜ ಬಾಂಧವರ ಬಸವೋತ್ಸವ ಹಾಗೂ
ಬೃಹತ್ ರಾಜ್ಯ ಸಮಾವೇಶ ಮಾಡುವುದಾಗಿ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಪ್ರಕಟಣೆ ಹೊರಡಿಸಿದ್ದಾರೆ. ಪ್ರಕಟಣೆಯಲ್ಲಿ ಆಡಳಿತಾಧಿಕಾರಿ ಡಾ.ರಾಜಕುಮಾರ ಮತ್ತು ಪರಮೇಶ್ವರ ಗೌಡ್ರು, ಅಧ್ಯಕ್ಷರು, ಲೆಕ್ಕ ಕೊಡು ಚಳುವಳಿ ಹೋರಾಟ ಸಮಿತಿಯೆಂಬುದಾಗಿ ನಮೂದಿಸಿದ್ದಾರೆ” ಎಂದು ತಿಳಿಸಿದ್ದಾರೆ.
“ಈ ಹಿಂದಿನ ಆಡಳಿತಾಧಿಕಾರಿ ಡಾ.ರಾಜಕುಮಾರರನ್ನು ಏ.17ರಂದು ಟ್ರಸ್ಟ್‌ನ ತುರ್ತು ಸಭೆಯಲ್ಲಿ ಶ್ರೀ ಪೀಠದ ಆಡಳಿತಾಧಿಕಾರಿ ಸ್ಥಾನದಿಂದ ಅಮಾನತುಗೊಳಿಸಿ, ಪತ್ರದ ಮೂಲಕ ಅಮಾನತುಗೊಳಿಸಿದ ವಿಷಯವನ್ನೂ ಅವರಿಗೆ ತಿಳಿಸಿದ್ದೇವೆ. ಟ್ರಸ್ಟಿನ ಏ.13ರ ಸಭೆಯಲ್ಲಿ ವಚನಾನಂದ ಶ್ರೀಗೆ ಪೀಠದಿಂದ ವಿಮುಕ್ತಿಗೊಳಿಸಿ, ಗೌರವ ಪೂರ್ವಕವಾಗಿ ಪೀಠದಿಂದ ಹೊರ ಹೋಗಲು ತಿಳಿಸಿದ್ದೇವೆ. ಇನ್ನು ಪರಮೇಶ್ವರಗೌಡ್ರು ಹೊಳೆ ಸಿರಿಗೆರೆಯವರು ನಮ್ಮ ಯಾವುದೇ ಟ್ರಸ್ಟಿನಲ್ಲಾಗಲೀ, ರಾಜ್ಯ ಸಂಘ, ಜಿಲ್ಲಾ ಸಂಘ, ತಾಲೂಕು ಸಂಘದಲ್ಲಾಗಲೀ ಯಾವುದೇ ಪದವಿಯಲ್ಲೂ ಇಲ್ಲ. ತಾವೇ ಬಂದು ಕಾನೂನು ಬಾಹಿರ ಸಂಘವನ್ನು ಸ್ವಯಂ ಘೋಷಿಸಿಕೊಂಡು, ತಾವೇ ಆ ಸಂಘದ ಅಧ್ಯಕ್ಷರೆಂದು ಬರೆದುಕೊಂಡಿದ್ದಾರೆ” ಎಂದು ಟ್ರಸ್ಟಿಗಳು ಇಲಾಖೆಗೆ ಮಾಹಿತಿ ನೀಡಿದ್ದಾರೆ.
“ಉಚ್ಛಾಟಿಸಿರುವ ವಚನಾನಂದ ಶ್ರೀಗೆ, ಡಾ.ರಾಜಕುಮಾರ, ಪರಮೇಶ್ವರ ಗೌಡ್ರು ಈ ಮೂವರಿಗೂ ಪಂಚಮಸಾಲಿ ಪೀಠದ ಆವರಣದಲ್ಲಿ ಯಾವುದೇ ಸಭೆ, ಸಮಾರಂಭ, ಪತ್ರಿಕಾಗೋಷ್ಟಿ ನಡೆಸುವ ನೈತಿಕ ಹಕ್ಕು ಹಾಗೂ ಅಧಿಕಾರವಿಲ್ಲ. ಇವರು ಹೊರಡಿಸಿದ ಪ್ರಕಟಣೆಯಲ್ಲಿ ಶ್ರೀಪೀಠದ ನಿಷ್ಟಾವಂತ ಭಕ್ತರು ಬರಬೇಕೆಂದು ನಮೂದಿಸಿ, ಸಮಾಜದಲ್ಲಿ ಗೊಂದಲ ಉಂಟು ಮಾಡಿ, ಪರ-ವಿರುದ್ಧದ ಗುಂಪುಗಳನ್ನಾಗಿಸಿ, ಸಮಾಜ ಒಡೆಯುವ ಹುನ್ನಾರ ಮಾಡಿಕೊಂಡು, ಗಲಾಟೆಗೆ, ಗದ್ದಲಕ್ಕೆ ದಾರಿ ಮಾಡಿಕೊಟ್ಟು, ಅಶಾಂತಿ ಸೃಷ್ಟಿಸುವ ಪ್ರಯತ್ನದಲ್ಲಿರುವ ಯತ್ನ ನಮಗೆ ಕಂಡು ಬಂದಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಪಂಚಮಸಾಲಿ ಪೀಠದಿಂದ ಉಚ್ಛಾಟನೆಗೊಂಡ ವಚನಾನಂದ ಶ್ರೀ, ಅಮಾನತು ಮಾಡಿದ ಆಡಳಿತಾಧಿಕಾರಿ ಡಾ. ರಾಜಕುಮಾರ ಹಾಗೂ ಪರಮೇಶ್ವರ ಗೌಡ್ರು ಅವರಿಂದ ಸಮಾಜದಲ್ಲಿ ಗೊಂದಲ ಉಂಟಾಗುತ್ತಿರುವುದು ಹಾಗೂ ಪಂಚಮಸಾಲಿ ಶ್ರೀಪೀಠದ ಆಸ್ತಿಗೆ ಹಾನಿಯ ಸಾಧ್ಯತೆ ಇರುವುದಾಗಿ ಇಲಾಖೆ ಗಮನಕ್ಕೆ ತರಲಾಗಿದೆ. ಆದ್ದರಿಂದ ಏಪ್ರಿಲ್ 24ರಂದು ಯಾವುದೇ ಸಭೆ ಅಥವಾ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು” ಎಂದು ಮನವಿ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? http://ದಾವಣಗೆರೆ ಮಾದರಿ ರಾಜಕಾರಣ; ಎಚ್ಚರಿಕೆ ಕಾಂಗ್ರೆಸಿಗೋ, ಮುಸ್ಲಿಂರಿಗೋ? ಮುಸ್ಲಿಂರ ಮುಂದಿನ ನಡೆಯೇನು?
“ಪಂಚಮಸಾಲಿ ಟ್ರಸ್ಟ್ ಈಗಾಗಲೇ ಬಸವ ಜಯಂತಿ ಆಚರಣೆಗೆ ದಿನಾಂಕ ನಿಗದಿ ಮಾಡಿಕೊಂಡಿದ್ದು, ನಿಗದಿತ ದಿನದಂದು ಟ್ರಸ್ಟ್ ಮತ್ತು ಸಮಾಜದವರೊಂದಿಗೆ ಸೇರಿ ಆಚರಿಸಲಾಗುವುದು, ಆದ್ದರಿಂದ ಸೂಕ್ತ ಬಂದೋಬಸ್ತ್ ಗೆ ಕ್ರಮ ಕೈಗೊಳ್ಳಬೇಕು” ಎಂದು ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಹಾಗೂ ಕಾರ್ಯದರ್ಶಿ ಜ್ಯೋತಿಪ್ರಕಾಶ ತಿಳಿಸಿದ್ದುಎಂದು ಹರಿಹರ ಗ್ರಾಮಾಂತರ ವೃತ್ತ ನಿರೀಕ್ಷಕರಿಗೆ ಸಲ್ಲಿಸಿದ ಮನವಿಯಲ್ಲಿ ಸ್ಪಷ್ಟಪಡಿಸಿದ್ದಾರೆ.






