ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರು ಇಂದು ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ(ಅಹಿಂದ) ಸಮುದಾಯದ ನಾಯಕರಾಗಿ ಉಳಿದಿಲ್ಲ. ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಶಾಮನೂರು ಕುಟುಂಬಕ್ಕೆ ಅವರು ಮಾರಾಟವಾಗಿದ್ದಾರೆ ಎಂದು ಇನ್ಸೈಟ್ ಐಎಎಸ್ ಸಂಸ್ಥಾಪಕ, ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ ಬಿ ವಿನಯ್‌ಕುಮಾರ್ ಟೀಕಿಸಿದರು.
ದಾವಣಗೆರೆ ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ಮಾಡಿದ ಅವರು “2013ರಲ್ಲಿ ಸಿದ್ದರಾಮಯ್ಯ ಅವರ ಆಡಳಿತದಿಂದ ಪ್ರೇರಿತವಾಗಿ ತಾವು ಸೇರಿದಂತೆ ಅನೇಕ ಯುವಜನರು ರಾಜಕಾರಣಕ್ಕೆ ಬಂದಿದ್ದೆವು. ಈಗ ಅವರಿಗೆ ಅಂದಿನ ಸಿದ್ಧಾಂತ ಮತ್ತು ಬದ್ಧತೆ ಇಲ್ಲ” ಎಂದು ದೂರಿದರು.
“ದೇವರಾಜ ಅರಸು ಸಣ್ಣ ಸಮುದಾಯದ ನಾಯಕರನ್ನು ಬೆಳೆಸಿದರೆ, ಸಿದ್ದರಾಮಯ್ಯ ಅದಕ್ಕೆ ವಿರುದ್ಧವಾಗಿ ಬಡ ಯುವಕರ ರಾಜಕೀಯ ಬೆಳವಣಿಗೆಯನ್ನು ಮುಗಿಸಿಬಿಡುತ್ತಾರೆ” ಎಂದು ವಾಗ್ದಾಳಿ ನಡೆಸಿದರು.
“ಬಿಜೆಪಿ ಅಭ್ಯರ್ಥಿಯಾಗಿರುವ ಹಿನ್ನೆಲೆಯಲ್ಲಿ ಶ್ರೀನಿವಾಸ ದಾಸಕರಿಯಪ್ಪ ಪರವಾಗಿ ಕೆಲಸ ಮಾಡುತ್ತಿದ್ದು, ಏಪ್ರಿಲ್ 3ರಿಂದ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಸುತ್ತೇನೆ. ಬಿಜೆಪಿ ಗೆದ್ದರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ದೊಡ್ಡ ಸಂದೇಶ ಹೋಗುತ್ತದೆ” ಎಂದು ಹೇಳಿದರು.
ಇದನ್ನೂ ಓದಿದ್ದೀರಾ? ರಂಗೇರುತ್ತಿರುವ ಬಾಗಲಕೋಟೆ ಉಪಚುನಾವಣೆ ಕಣ: ಕಡುಬಿಸಿಲಿನ ನಡುವೆಯೂ ಭರ್ಜರಿ ಪ್ರಚಾರ
“ತಾವು ಮಾನಸಿಕವಾಗಿ ಬಿಜೆಪಿಯೊಂದಿಗಿದ್ದು, ಶೀಘ್ರದಲ್ಲೇ ಸೇರ್ಪಡೆಯಾಗುವೆ. ಕಾಂಗ್ರೆಸ್‌ನಲ್ಲಿ ಬಡವರ ಮಕ್ಕಳಿಗೆ ಅವಕಾಶವಿಲ್ಲ. ಕಾಂಗ್ರೆಸ್ ಜಾತ್ಯತೀತ ಎನ್ನುವುದು ಸುಳ್ಳು, ಕುಟುಂಬ ರಾಜಕಾರಣಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಂದೇ ಕುಟುಂಬಕ್ಕೆ ಹೆಚ್ಚು ಅಧಿಕಾರ ಸಿಕ್ಕಿದ್ದು, ತಮ್ಮ ಉದ್ಯಮದ ಹಿತಾಸಕ್ತಿಗಾಗಿ ರಾಜಕಾರಣ ಬಳಸಲಾಗುತ್ತಿದೆಯೇ ಹೊರತು, ಜನಸೇವೆಗಾಗಿ ಅಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಸಚಿವ ಶಿವನಗೌಡ ನಾಯಕ, ಬಿಜೆಪಿ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್, ಶರತ್, ಹೇಮಂತ್ ಹಾಗೂ ಇತರರು ಇದ್ದರು.





