ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಉತ್ತಮ ಮಳೆಯಾಗದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನೀರು ಹಾಗೂ ಮೇವಿನ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ ರೈತರು ಮುಂಜಾಗ್ರತಾ ಕ್ರಮವಾಗಿ ಮೆಕ್ಕೆಜೋಳದ ಮೇವನ್ನು ಸಂರಕ್ಷಿಸಿಕೊಳ್ಳಬೇಕು” ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಈಗಾಗಲೇ ಹುಬ್ಬಳ್ಳಿ, ಹುಬ್ಬಳ್ಳಿ ನಗರ, ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕುಗಳನ್ನು ರಾಜ್ಯ ಸರಕಾರ ಬರಪೀಡಿತ ತಾಲೂಕು ಎಂದು ಘೋಷಿಸಿದೆ. ಜಿಲ್ಲೆಯಲ್ಲಿ ಸುಮಾರು 38,105 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ (ಗೋವಿನ ಜೋಳ) ಬಿತ್ತನೆಯಾಗಿದ್ದು, ಮಳೆ ಕೊರತೆಯಿಂದ ಇಳುವರಿ ಕುಂಠಿತವಾಗುವ ಸಾಧ್ಯತೆ ಇದ್ದರೂ ಮೇವು ಉತ್ಪಾದನೆಯಾಗುವ ನಿರೀಕ್ಷೆ ಇದೆ. ಹಿಂದಿನ ವರ್ಷಗಳಲ್ಲಿ ಕೆಲ ರೈತರು ತಾವು ಬೆಳೆದ ಮೆಕ್ಕೆಜೋಳದ ಮೇವನ್ನು ಕಟಾವು ಮಾಡಿ ಸಂರಕ್ಷಿಸದೆ ಹೊಲದಲ್ಲಿಯೇ ಗೊಬ್ಬರವಾಗಿ ಕೊಳೆಯಲು ಬಿಟ್ಟಿರುವುದು ಅಥವಾ ಸುಟ್ಟುಹಾಕಿರುವುದು ಕಂಡುಬಂದಿದೆ. ಇದರಿಂದ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವ ಸಾಧ್ಯತೆ ಇದೆ” ಎಂದು ತಿಳಿಸಿದ್ದಾರೆ.
“ಜಾನುವಾರುಗಳ ಹಿತದೃಷ್ಟಿಯಿಂದ ಅಗತ್ಯ ಪರಿಸ್ಥಿತಿ ಎದುರಾದಲ್ಲಿ ಜಿಲ್ಲಾಡಳಿತದಿಂದ ಗೋಶಾಲೆ ಅಥವಾ ಮೇವಿನ ಬ್ಯಾಂಕ್‍ಗಳನ್ನು ಪ್ರಾರಂಭಿಸುವ ಅಗತ್ಯ ಬರಬಹುದು. ಈ ಸಂದರ್ಭದಲ್ಲಿ ರೈತರು ಸಂಗ್ರಹಿಸಿಟ್ಟುಕೊಂಡಿರುವ ಹೆಚ್ಚುವರಿ ಮೇವನ್ನು ಜಿಲ್ಲಾಡಳಿತದ ವತಿಯಿಂದ ಖರೀದಿಸುವ ಸಾಧ್ಯತೆಯೂ ಇದೆ. ಆದ್ದರಿಂದ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಮೆಕ್ಕೆಜೋಳದ ಮೇವನ್ನು ಉತ್ತಮ ರೀತಿಯಲ್ಲಿ ಬಣವೆ ಹಾಕಿ ಅಥವಾ ಅಚ್ಚುಗಳಾಗಿ ಪರಿವರ್ತಿಸಿ ಸಂರಕ್ಷಿಸಿಡಬೇಕು. ಇಳುವರಿ ಕಡಿಮೆ ಆಗುವ ಆತಂಕದಲ್ಲಿರುವ ರೈತರು, ಹಸಿರು ಮೆಕ್ಕೆ ಜೋಳದ ಬೆಳೆಯನ್ನು ಕಟಾವು ಮಾಡಿ ತುಂಡರಿಸಿ, ರಸ ಮೇವಾಗಿ ಸಹ ಪರಿವರ್ತಿಸಬಹುದಾಗಿದೆ. ಈ ರಸ ಮೇವನ್ನು ಬರಗಾಲದಲ್ಲಿ ಅವಶ್ಯಕತೆ ಅನುಗುಣವಾಗಿ ಬಳಸ ಬಹುದಾಗಿರುತ್ತದೆ” ಎಂದು ತಿಳಿಸಿದ್ದಾರೆ.
“ತಮ್ಮಲ್ಲಿರುವ ಹೆಚ್ಚುವರಿ ಮೇವಿನ ಪ್ರಮಾಣದ ವಿವರಗಳನ್ನು ಸಮೀಪದ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಮಳೆ ಕೊರತೆಯಿಂದ ಎದುರಾಗಬಹುದಾದ ಮೇವಿನ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ರೈತರು ಈಗಿನಿಂದಲೇ ಮೇವು ಸಂರಕ್ಷಣೆಗೆ ಆದ್ಯತೆ ನೀಡಬೇಕು” ಎಂದು ಜಿಲ್ಲಾಧಿಕಾರಿ ಸ್ನೇಹಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




