“ಗುರು ಶಿಷ್ಯ ಪರಂಪರೆ ಮತ್ತು ಭಾವೈಕ್ಯತೆಗೆ ಹೆಸರಾಗಿರುವ ಶ್ರೀ ಶರೀಫ ಶಿವಯೋಗಿ ಮತ್ತು ಗುರು ಗೋವಿಂದಭಟ್ಟರ ಅಧ್ಯಯನ ಪೀಠವನ್ನು ವಿಶ್ವವಿದ್ಯಾಲಯದ ಅಕಾಡೆಮಿಕ್ ಸಭೆಯಲ್ಲಿ ಚರ್ಚಿಸಿ ಅಧ್ಯಯನ ಪೀಠವನ್ನು ಆರಂಭಿಸಲು ಪ್ರಯತ್ನಿಸುವೆ” ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಂ.ಖಾನ್ ಭರವಸೆ ನೀಡಿದರು.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಶಿಶುವಿನಹಾಳ ಗ್ರಾಮದದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಹಾವೇರಿ ವಿಶ್ವವಿದ್ಯಾಲಯ ಹಾವೇರಿ, ರಾಷ್ಟ್ರೀಯ ಸೇವಾ ಯೋಜನಾ ಕೋಶ, ಸರಕಾರಿ ಪ್ರಥಮ ದರ್ಜೆ ಕಾಲೇಜು ಗುಡಗೇರಿ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಶಿಗ್ಗಾವಿ ಹಾಗೂ ಶ್ರೀ ಶರೀಫ ಶಿವಯೋಗಿ ಮತ್ತು ಗುರು ಗೋವಿಂದ ಶಿವಯೋಗಿ ಪಂಚಾಗ್ನಿ ಮಠ ಟ್ರಸ್ಟ್ ಶಿಶುವಿನಹಾಳ ಇವರ ಸಂಯುಕ್ತ ಆಶ್ರಯದಲ್ಲಿ ಅಂತರ್ ವಿಶ್ವವಿದ್ಯಾಲಯ ಮಟ್ಟದ ನಾಯಕತ್ವ ತರಬೇತಿ ಹಾಗೂ ಭಾವೈಕ್ಯತಾ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುಡಗೇರಿಯ ಎಲ್ಲಾ ಸಿಬ್ಬಂದಿಗಳು, ಶ್ರೀ ಶರೀಫಗಿರಿ ಟ್ರಸ್ಟ್ ಎಲ್ಲಾ ಸದಸ್ಯರು ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳು ಹಾಗೂ ಸಂಯೋಜಕರು ಸೇರಿ ಕುಲಪತಿಗಳಿಗೆ ಅಧ್ಯಯನ ಪೀಠ ಸ್ಥಾಪಿಸಲು ಪ್ರಸ್ತಾವನೆಯನ್ನು ಸಲ್ಲಿಸಿದಾಗ ಕುಲಪತಿ ಅವರು ಪ್ರತಿಕ್ರಯೆ ನೀಡಿ, “ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹಲವಾರು ಅಧ್ಯಯನ ಪೀಠಗಳಿವೆ. ಆದರೆ ಈವರೆಗೂ ಯಾಕೆ ಶರೀಫರ ಮತ್ತು ಗುರು ಗೋವಿಂದಭಟ್ಟರ ಅಧ್ಯಯನ ಪೀಠವನ್ನು ಆರಂಭಿಸಿಲ್ಲ ಎಂಬುದು ಚಿಂತನೆಯ ವಿಷಯವಾಗಿದೆ. ಆದ್ದರಿಂದ ಗುರು ಶಿಷ್ಯ ಪರಂಪರೆ ಮತ್ತು ಭಾವೈಕ್ಯತೆಯ ಉದ್ದೇಶದಿಂದ ಈ ಪೀಠವನ್ನು ಆರಂಭಿಸುವುದು ಅಗತ್ಯವಾಗಿದೆ. ಈ ದಿಸೆಯಲ್ಲಿ ನಾನು ಪ್ರಾಮಾಣಿಕವಾಗಿ ಪ್ರಯತ್ನಿಸಿ ಪೀಠ ಆರಂಭಿಸುವೆ” ಎಂದು ಭರವಸೆ ನೀಡಿದರು.
ಎನ್ಎಸ್ಎಸ್ ನ ಎಲ್ಲಾ ಸ್ವಯಂಸೇವಕ ಸೇವಕಿಯರು ಕೇವಲ ನೈಸರ್ಗಿಕ ಸ್ವಚ್ಛತೆಯನ್ನು ಮಾತ್ರ ಕಾಪಾಡಿಕೊಳ್ಳದೆ, ನಮ್ಮ ದೇಹ ಮನಸ್ಸಿನ ಶುದ್ಧತೆಯನ್ನು ಕಾಪಾಡಿಕೊಳ್ಳಲು ಶಿಶುವಿನಹಾಳಾದಂತಹ ಭಾವೈಕ್ಯತಾ ಸ್ಥಳಗಳು ತುಂಬಾ ಮುಖ್ಯವಾಗಿವೆ. ಇದನ್ನು ನಾವೆಲ್ಲರೂ ಪಾಲಿಸುವುದು ಇಂದಿನ ಅಗತ್ಯವಾಗಿದೆ” ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತುಗಳನ್ನು ಹೇಳಿದರು.
ಶಿಬಿರದ ಸಂಯೋಜಕರು ಡಾ. ಭೀಮೇಶ ಯರಡೋಣಿ ಪ್ರಾಸ್ತಾವಿಕ ಮಾತಿನಲ್ಲಿ, ಕಾರ್ಯಕ್ರಮವನ್ನು ಶಿಶುವಿನಹಾಳದಲ್ಲಿ ಏಕೆ ನಡೆಸಲಾಯಿತು. ಅದರ ಅಗತ್ಯವೇನು ಎಂಬುದನ್ನು ತಿಳಿಸುತ್ತಾ, ಶ್ರೀ ಶರೀಫ ಶಿವಯೋಗಿಗಳ ಅಧ್ಯಯನ ಪೀಠವು ವರ್ತಮಾನದ ಸಂಕಟಗಳಿಗೆ, ವಿಷ ಬೀಜಗಳಿಗೆ ಹೇಗೆ ಮದ್ದಾಗಿ ಚಿಕಿತ್ಸೆಯನ್ನು ನೀಡುತ್ತದೆವೆಂಬುದನ್ನು ವಿವರಿಸುವುದರ ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯವು ಅಧ್ಯಯನ ಪೀಠವನ್ನು ಸ್ಥಾಪಿಸಬೇಕು. ಮತ್ತು ಸರ್ಕಾರವು ಪ್ರಾಧಿಕಾರವನ್ನು ಸ್ಥಾಪಿಸುವ ಅಗತ್ಯವಿದೆ” ಎಂದು ಒತ್ತಾಯಿಸಿದರು.
ಮುಖ್ಯ ಅತಿಥಿಗಳಾಗಿ ಟ್ರಸ್ಟಿನ ಹಿರಿಯ ಸದಸ್ಯರು ಚನ್ನಬಸಪ್ಪ ಬೆಟದೂರ ಮಾತನಾಡಿ, “ಮನೆಯಲ್ಲಿ ಮಕ್ಕಳಿರಬೇಕು, ಮಠದಲ್ಲಿ ಮಂದಿ ಇರಬೇಕು. ಏಳು ದಿನ ನೀವು ಇಲ್ಲಿ ಇದ್ದದ್ದು ನಮಗೆ ತುಂಬಾ ಸಂತೋಷ ನೀಡಿದೆ. ನಿಮ್ಮ ಕಾರ್ಯವನ್ನು ಭಕ್ತರು ಸಾರ್ವಜನಿಕರು ಮೆಚ್ಚಿದ್ದಾರೆ. ಹಾಗಾಗಿ ನಿಮಗೆಲ್ಲರಿಗೂ ಅಭಿನಂದನೆಗಳು” ಎಂದು ತಿಳಿಸಿದರು.
ಮಠದ ಮತ್ತೋರ್ವ ಹಿರಿಯ ಸದಸ್ಯರು ಬಸವರಾಜ ಮಳಲಿಯವರು ಮಾತನಾಡಿ, “ಶ್ರೀ ಶರೀಫ ಶಿವಯೋಗಿಗಳ ತತ್ವಪದಗಳು ಜನಸಾಮಾನ್ಯರ ಹೃದಯದಿಂದ ಮೂಡಿ ಬಂದಿರುವಂತಹವುಗಳು. ಅವು ಇಂದಿನ ಜನಮಾನಸವನ್ನು ಅರಿಯಲು ಭಕ್ತಿ ಭಾವವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿವೆ” ಎಂದು ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ರಾಷ್ಟ್ರೀಯ ಯೋಜನಾ ಕೋಶದ ಸಂಯೋಜಕರು ಡಾ. ಎಂ.ಬಿ. ದಳಪತಿಯವರು ಮಾತನಾಡಿ, ಕುಲಪತಿಗಳಾದ ಪ್ರೊ. ಎ.ಎಂ. ಖಾನ್ ಅವರು ಪ್ರಸ್ತುತ ನಡೆಯುತ್ತಿರುವ ಉಳವಿ, ಅಂಕೋಲ, ಹಳಿಯಾಳ ಮೊದಲಾದ ನಾಯಕತ್ವ ಶಿಬಿರಗಳಿಗೆ ಭೇಟಿ ನೀಡಿದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರು ಗಂಗಾಧರ ಗುಮ್ಮಗೋಳಮಠ ಅವರು ಮಾತನಾಡಿ, ಈ ಕ್ಷೇತ್ರವು ವಿಶಿಷ್ಟವಾಗಿದೆ. ಈ ನೆಲದ ಸೌಹಾರ್ದತೆಯ ಪರಂಪರೆಯನ್ನು ಕಾಯ್ದುಕೊಳ್ಳಲು ಮತ್ತು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯ ಇರುವುದರಿಂದ ಶಿಶುವಿನಹಾಳದಲ್ಲಿ ಪ್ರತಿ ವರ್ಷವೂ ಈ ರೀತಿಯ ಶಿಬಿರಗಳನ್ನು ಏರ್ಪಡಿಸಬೇಕು” ಎಂದು ಹೇಳಿದರು.
ನಾಯಕತ್ವ ತರಬೇತಿ ಮತ್ತು ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಿದ್ದ ಎರಡು ನೂರು ಜನ ಸ್ವಯಂ ಸೇವಕ ಸೇವಕಿಯರಿಗೆ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆಗಳನ್ನು ವಿತರಿಸಿದರು. ಈ ಸಮಾರಂಭದಲ್ಲಿ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳು ಡಾ. ಆನಂದ ಇಂದೂರ, ಬಿ.ಸಿ.ಅಮಾತಿ, ದೇವರಾಜು, ಎನ್.ಕೆ. ಕಡೆಮನಿ, ಶಂಭುಲಿಂಗ ಬೆನ್ನೂರ, ಡಾ. ಸಂಗಪ್ಪ ಬಸರಕೋಡ ಮೊದಲಾದವರು ಭಾಗವಹಿಸಿದ್ದರು. ಎನ್. ಕೆ. ಕಡೇಮನಿ ಅವರು ನಿರೂಪಿಸಿದರು. ಡಾ. ಆನಂದ ಇಂದೂರ ವಂದಿಸಿದರು.




