ಹುಬ್ಬಳ್ಳಿ ನವನಗರದ ನಂದೀಶ್ವರ ನಗರದಲ್ಲಿ ಮನೆ ಎದುರಿನ ರಸ್ತೆಯಲ್ಲಿ ಬೈಕ್‌ನ್ನು ವೇಗವಾಗಿ ಚಲಾಯಿಸಿದ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಉಂಟಾದ ವಿವಾದ ಹಲ್ಲೆ ಹಾಗೂ ಜೀವ ಬೆದರಿಕೆ ಆರೋಪದವರೆಗೆ ತಲುಪಿದೆ. ಘಟನೆಯಲ್ಲಿ ಐವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ನವನಗರ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ನಂದೀಶ್ವರ ನಗರದ ಶಿವಕುಮಾರ ಬಾಂಬೆ, ಭರತ್, ಮಣಿಕಂಠ, ದಿಲೀಪ್, ಅಣ್ಣಪ್ಪ, ನಾಗಪ್ಪ ಹಾಗೂ ಆಸಿಫ್ ವಿರುದ್ಧ ಯಲ್ಲಪ್ಪ ಕೊರವರ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಗಲಾಟೆ ವೇಳೆ ಯಲ್ಲಪ್ಪ ಅವರ ಮೇಲೆ ರಾಡ್‌ನಿಂದ ಹಲ್ಲೆ ನಡೆಸಲಾಗಿದೆ. ಗಾಯಗೊಂಡಿರುವ ಅವರನ್ನು ಕೆಎಂಸಿಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




