ಲೋಕಾಯುಕ್ತ ದಾಳಿಯ ಬಳಿಕ ಉಂಟಾದ ಮಾನಸಿಕ ಒತ್ತಡಕ್ಕೆ ಸಿಲುಕಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಹಾಗೂ ಕೊತಬಾಳ ಗ್ರಾಮದ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಕ್ತುಂಹುಸೇನ ಕರಡಿಗುಡ್ಡ (46) ಅವರು ರೋಣ ಪಟ್ಟಣದ ತಾವಿದ್ದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಜೀವನ ಅಂತ್ಯಗೊಳಿಸಿದ ದುರ್ದೈವಿ.
ಮೂಲತಃ ಧಾರವಾಡ ಜಿಲ್ಲೆಯವರಾಗಿದ್ದ ಮಕ್ತುಂಹುಸೇನ ಕರಡಿಗುಡ್ಡ ಅವರು ಕಳೆದ ತಿಂಗಳಷ್ಟೇ ಕೊತಬಾಳ ಪಂಚಾಯತಿಯ ಪಿಡಿಒ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಪಿಡಿಒ ಮಕ್ತುಂಹುಸೇನ್ ಮೇಲೆ 2022-23ನೇ ಸಾಲಿನಲ್ಲಿ ಲೋಕಾಯುಕ್ತ ದಾಳಿ ನಡೆದಿತ್ತು.
ದಾಳಿ ಬಳಿಕ ಪಿಡಿಒ ಅಮಾನತ್ತಾಗಿದ್ದರು. ನಂತರ ಗದಗ ಜಿಲ್ಲೆಗೆ ನಿಯೋಜನೆ ಮಾಡಲಾಗಿತ್ತು. ಲೋಕಾಯುಕ್ತ ದಾಳಿ ಮತ್ತು ವರ್ಗಾವಣೆಯಿಂದಾಗಿ ಮನನೊಂದು, ಮಾನಸಿಕವಾಗಿ ಕುಗ್ಗಿ ಹೋಗಿದ್ದ ಮಕ್ತುಂಹುಸೇನ್ ಗದಗ ಜಿಲ್ಲೆ ರೋಣ ಪಟ್ಟಣದ ಮನೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ಪೋಲಿಸರಿಂದ ಅಂತರರಾಜ್ಯ ಕಳ್ಳರ ಬಂಧನ; ₹1 ಕೋಟಿ 26 ಲಕ್ಷ ಮೌಲ್ಯದ ಆಭರಣ, ವಸ್ತುಗಳು ವಶ
ಮಕ್ತುಂಹುಸೇನ್ ಕಳೆದ ಮಂಗಳವಾರ ರಾತ್ರಿ ತಾವಿದ್ದ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದೆ. ಸತತ ಎರಡು ದಿನಗಳಿಂದ ಇವರು ಪತ್ನಿಯ ಕರೆಗೆ ಸ್ಪಂದಿಸಿರಲಿಲ್ಲ. ಪತಿ ಫೋನ್ ಸ್ವೀಕರಿಸದ ಕಾರಣ ಗಾಬರಿಗೊಂಡ ಪತ್ನಿ, ಬಾಡಿಗೆ ಮನೆಯ ಮಾಲೀಕರಿಗೆ ಕರೆ ಮಾಡಿ ವಿಚಾರಿಸುವಂತೆ ವಿನಂತಿಸಿದ್ದಾರೆ. ಮನೆಯ ಮಾಲೀಕರು ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಘಟನೆ ತಿಳಿದ ತಕ್ಷಣ ರೋಣ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




