2026, ಆಗಸ್ಟ್ 21-23 ರವರೆಗೆ ವಿಶೇಷ ಲೋಕ
ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಸರ್ವೋಚ್ಚ ನ್ಯಾಯಾಲಯ (ಸುಪ್ರೀಂ ಕೋರ್ಟ್) ದಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಕಕ್ಷಿದಾರರು ಮುಂದಾಗಬೇಕು ಹಾಗೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ದಾವಣಗೆರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ ಕರೆಣ್ಣನವರ ಅವರು ಸಲಹೆ ನೀಡಿದರು.
ಹಳೆಯ ನ್ಯಾಯಾಲಯ ಕಟ್ಟಡದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ
ಗುರುವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, “ಅನೇಕ ಪ್ರಕರಣಗಳು ಕಕ್ಷಿದಾರರ ಅಹಂನಿಂದಾಗಿ
ವರ್ಷಗಟ್ಟಲೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿವೆ. ಇದರಿಂದ ಕೇವಲ ಸಮಯ ಮತ್ತು ಹಣ
ವ್ಯರ್ಥವಾಗುವುದಲ್ಲದೆ ಮನಸ್ತಾಪಗಳು ಹೆಚ್ಚಾಗುತ್ತವೆ. ವಕೀಲರು, ಕಕ್ಷಿದಾರರು ಹಾಗೂ ವಿಮಾ ಕಂಪನಿಗಳು
ಸಹಕರಿಸಿ ಪ್ರಕರಣಗಳನ್ನು ಶೀಘ್ರವಾಗಿ ಬಗೆಹರಿಸಿಕೊಳ್ಳುವ ಮೂಲಕ ನೆಮ್ಮದಿಯ ಜೀವನ ನಡೆಸಲು ಮುಂದಾಗಬೇಕು” ಎಂದು ಕರೆ ನೀಡಿದರು.
“ವಿಶೇಷ ಲೋಕ ಅದಾಲತ್‌ನಲ್ಲಿ ಚೆಕ್ ಅಮಾನ್ಯ ಪ್ರಕರಣಗಳು, ಭೂಸ್ವಾಧೀನ ದಾವೆಗಳು, ಬ್ಯಾಂಕ್ ವಸೂಲಾತಿ, ಜೀವನಾಂಶ, ವಿಚ್ಛೇದನ ಸೇರಿದಂತೆ ವೈವಾಹಿಕ ಪ್ರಕರಣಗಳು, ಕಾರ್ಮಿಕ ವಿವಾದಗಳು, ಕೈಗಾರಿಕಾ ಕಾರ್ಮಿಕರ ವೇತನ ಕ್ಲೇಮುಗಳು, ವಿದ್ಯುತ್ ಮತ್ತು ನೀರಿನ ಶುಲ್ಕದ ಬಾಕಿ ಹಾಗೂ ರಾಜೀಯಾಗಬಲ್ಲ ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ವಿಶೇಷವಾಗಿ ಅಪಘಾತದ ಪ್ರಕರಣಗಳಲ್ಲಿ ಇಲ್ಲಿ ಶೀಘ್ರ ಪರಿಹಾರ ಲಭ್ಯವಾಗಲಿದೆ”ಎಂದು ಮಾಹಿತಿ
ನೀಡಿದರು.
“ಗಂಭೀರ ಸ್ವರೂಪದ ಕ್ರಿಮಿನಲ್ ಕೇಸ್‌ಗಳು, ಜಾತಿನಿಂದನೆ ಪ್ರಕರಣಗಳು ಹಾಗೂ ಪೋಕ್ಸೊ
(POCSO) ಕಾಯ್ದೆಯಡಿಯ ಪ್ರಕರಣಗಳನ್ನು ಈ ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ” ಎಂದು ಸ್ಪಷ್ಟಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದಸಂಸ ಘಟಕ ಉದ್ಘಾಟನೆ ಹಾಗೂ 135ನೇ ಡಾ. ಅಂಬೇಡ್ಕರ್ ಜಯಂತಿ
“ರಾಜ್ಯಾದ್ಯಂತ ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 4,328 ಪ್ರಕರಣಗಳು ಬಾಕಿ ಇದ್ದು, ಅದರಲ್ಲಿ ಜಿಲ್ಲೆಯ
36 ಪ್ರಕರಣಗಳಿವೆ. ಈ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದ್ದು, ಇದಕ್ಕೆ ವಿವಿಧ
ಇಲಾಖೆಗಳ ಸಹಕಾರ ಅಗತ್ಯವಿದೆ. ಸಾರ್ವಜನಿಕರು ಆನ್‌ಲೈನ್ ಮೂಲಕವೂ ತಮ್ಮ ಸಮಸ್ಯೆಗಳನ್ನು ನೋಂದಾಯಿಸಿಕೊಳ್ಳಲು http://forms.gle/iqxefqF4BCWzukoP6 ಲಿಂಕ್ ಬಳಸಬಹುದಾಗಿದೆ” ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಉಪ ಮುಖ್ಯ ಕಾನೂನು ಅಧೀಕ್ಷಕರಾದ ವೆಂಕಟೇಶ್ ಹಾಗೂ ವಕೀಲರಾದ ವನ್ಯಶ್ರೀ ಉಪಸ್ಥಿತರಿದ್ದರು.





