- ವಿದ್ಯಾದಾನ ಶಿಕ್ಷಣ ಸಮಿತಿ ಆಡಳಿತ ಮಂಡಳಿಯಿಂದ ಬೆದರಿಕೆ
- ಪತ್ರಿಕಾಗೋಷ್ಠಿಯಲ್ಲಿ ಯೂಸೂಪ್ ಮಜ್ಜಗಿ ಕುಟುಂಬ ಆರೋಪ
ವಿದ್ಯಾದಾನ ಶಿಕ್ಷಣ ಸಮಿತಿ ಮೈದಾನದ ಬಗ್ಗೆ ಎದ್ದಿರುವ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುವಂತೆ ಮಜ್ಜಗಿ ಕುಟುಂಬದ ಸದಸ್ಯ ಯೂಸಫ್ ಮಜ್ಜಗಿ ಒತ್ತಾಯಿಸಿದ್ದಾರೆ.
ಗದಗ ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿ ಕರೆದು ಮಾತನಾಡಿರುವ ಅವರು, “ವಿದ್ಯಾದಾನ ಶಿಕ್ಷಣ ಸಮಿತಿ ಮೈದಾನವು ಮಜ್ಜಗಿ ಕುಟುಂಬಕ್ಕೆ ಸೇರಿದ್ದು, 1946ರಲ್ಲಿ ವಿದ್ಯಾದಾನ ಶಿಕ್ಷಣ ಸಮಿತಿಗೆ ಮಜ್ಜಗಿ ಕುಟುಂಬದವರು 99 ವರ್ಷ ಬಾಡಿಗೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಬಾಡಿಗೆ ಹಣ ನೀಡಿಲ್ಲ, ಬಾಡಿಗೆ ಕೊಟ್ಟ ಸಂದರ್ಭದಲ್ಲಿ ಈ ಜಾಗದಲ್ಲಿ ಯಾವುದೇ ಕಟ್ಟಡ ಕಟ್ಟಬಾರದೆಂದು ಕರಾರು ಪತ್ರದಲ್ಲಿ ಇದ್ದರೂ ವಿವಿಧ ಕಟ್ಟಡಗಳನ್ನು ನಿರ್ಮಿಸಿ, ಕರಾರು ಪತ್ರದ ನಿಯಮಗಳನ್ನು ಉಲ್ಲಂಘಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? : ರಾಮನಗರ | ಗೋ ರಕ್ಷಣೆಯ ಹೆಸರಿನಲ್ಲಿ ಮುಸ್ಲಿಂ ವ್ಯಾಪಾರಿಯ ಕೊಲೆ; ಪುನೀತ್ ಕೆರೆಹಳ್ಳಿ ತಂಡದ ಮೇಲೆ ಎಫ್‌ಐಆರ್
“ಇಷ್ಟು ಮಾತ್ರವಲ್ಲದೆ ಇದೇ ಜಾಗದ ಮೇಲೆ ರೆಡ್ಡಿ ಸಹಕಾರಿ ಬ್ಯಾಂಕಿನಲ್ಲಿ 50 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ ಹಾಗೂ ವಿದ್ಯಾದಾನ ಶಿಕ್ಷಣ ಸಮಿತಿ ಮಂಡಳಿಯ ಆಡಳಿತಕ್ಕೆ ಒಳಪಡುವ ಬಿಇಡಿ ಕಾಲೇಜಿಗೆ 33 ವರ್ಷ ಬಾಡಿಗೆ ಕೊಟ್ಟಿದ್ದು, ಇದ್ಯಾವ ಮಾಹಿತಿಯನ್ನು ಮೂಲ ಮಾಲೀಕರಿಗೆ ತಿಳಿಸದೇ ಬಾಡಿಗೆ ಕರಾರು ಪತ್ರದ ನಿಯಮ ಉಲ್ಲಂಘಿಸಿದ್ದಾರೆ” ಎಂದು ಕಿಡಿ ಕಾರಿದ್ದಾರೆ.
“ವಿದ್ಯಾದಾನ ಶಿಕ್ಷಣ ಸಮಿತಿ ಮೈದಾನ ನಮ್ಮದೆಂದು ಕೇಳಿದರೆ, ರಾಜಕೀಯ ಬಲ, ಅಧಿಕಾರ ಬಲ ಹಾಗೂ ಹಣಬಲ ಇರುವ ಕೆಲವರು ಬೆದರಿಗೆ ಹಾಕುತ್ತಿದ್ದಾರೆ. ಇದರ ವಿರುದ್ಧ ಮಜ್ಜಗಿ ಕುಟುಂಬದವರು ಕೋರ್ಟ್ ಮೊರೆ ಹೋಗಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ದಲಿತ ಕಲಾ ಮಂಡಳಿ ಮುಖಂಡ ಶರೀಪ್ ಬಿಳಿಯಲಿ, ಮಜ್ಜಗಿ ಕುಟುಂಬದ ಸದಸ್ಯರು ಸೇರಿದಂತೆ ಹಲವರು ಹಾಜರಿದ್ದರು.