ಗದಗ ಜಿಲ್ಲೆಯಲ್ಲಿ ಸಚಿವ ಸ್ಥಾನಕ್ಕಾಗಿ ನಡೆದ ಪೈಪೋಟಿಗೆ ಈಗ ತೆರೆಬಿದ್ದಿದೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಶಾಸಕ ಜಿ.ಎಸ್. ಪಾಟೀಲ್ (ಗುರುಪಾದಗೌಡ ಸಂಗನಗೌಡ ಪಾಟೀಲ್) ಅವರಿಗೆ ವಿಧಾನಸಭೆಯನ್ನು ಮುನ್ನಡೆಸುವ ಅವಕಾಶ ಒದಗಿಬಂದಿದೆ. ಎರಡನೇ ಸಚಿವ ಸಂಪುಟ ವಿಸ್ತರಣೆಯಲ್ಲಿ ಪಾಟೀಲ್ ಸ್ಪೀಕರ್ ಸ್ಥಾನಕ್ಕೇರಿದ್ದಾರೆ.
ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿದ್ದು, ಅದರಲ್ಲಿ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ರೋಣ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಹಾಗೂ ಗದಗ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವ, ಶಾಸಕ ಎಚ್.ಕೆ ಪಾಟೀಲ್ ಇದ್ದಾರೆ. ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಮೊದಲ ಹಂತದ ಸಚಿವ ಸಂಪುಟದಲ್ಲಿಯೇ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ಸಿಗುವ ಮಾತು ಕೇಳಿಬಂದಿತ್ತು. ಆದರೆ ಮೊದಲ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಇಬ್ಬರಿಗೂ ಸಚಿವ ಸ್ಥಾನ ಸಿಗದೇ ಇದ್ದುದರಿಂದ ಎರಡು ವಿಧಾನಸಭಾ ಕ್ಷೇತ್ರಗಳ, ಎರಡು ಬಣಗಳ ಮುಖಂಡರು ಮತ್ತು ಅಭಿಮಾನಿಗಳು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಎರಡನೇ ಹಂತದ ಸಚಿವ ಸಂಪುಟ ರಚನೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗುತ್ತಲೇ ಎರಡು ಬಣದವರು ತಮ್ಮ ತಮ್ಮ ನಾಯಕರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಜಿಲ್ಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಕಾಂಗ್ರೆಸ್ ಹೈಕಮಾಂಡ್‌ನ ಗಮನ ಸೆಳೆಯಲು ಯತ್ನಿಸಿದ್ದರು. ಶಾಸಕ ಜಿ.ಎಸ್. ಪಾಟೀಲ್ ಬಣದ ಮುಖಂಡರು ಪಾದಯಾತ್ರೆ ಮಾಡಿ ಈ ಬಾರಿ ಸಚಿವ ಸ್ಥಾನ ಜಿ.ಎಸ್. ಪಾಟೀಲ್‌ರಿಗೆ ಸಿಗಲೇಬೇಕು ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಡ ಹೇರಿದ್ದರು.
ಈ ಮೊದಲು ಎರಡು ಕ್ಷೇತ್ರಗಳಲ್ಲಿ ಜಿ.ಎಸ್. ಪಾಟೀಲ್‌ರಿಗೆ ಸಚಿವ ಸ್ಥಾನ, ಎಚ್.ಕೆ. ಪಾಟೀಲ್ ಅವರಿಗೆ ಸ್ಪೀಕರ್ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರ ಕ್ಷೇತ್ರದಲ್ಲಿ ಹರಿದಾಡಿತ್ತು. ಆದರೆ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಜಿ.ಎಸ್. ಪಾಟೀಲ್‌ಗೆ ಸ್ಪೀಕರ್ ಸ್ಥಾನ ಲಭಿಸಿದ್ದು, ಎಚ್.ಕೆ. ಪಾಟೀಲ್‌ರಿಗೆ ಸಚಿವ ಸ್ಥಾನ ಕೈತಪ್ಪಿದ್ದು, ಕ್ಷೇತ್ರಗಳಲ್ಲಿದ್ದ ಲೆಕ್ಕಾಚಾರ ಉಲ್ಟಾ-ಪಲ್ಟಾ ಆಗಿದೆ.
ಜಿ.ಎಸ್. ಪಾಟೀಲ್ ಹಿನ್ನೆಲೆ: ರೋಣದ ಪ್ರತಿಷ್ಠಿತ ಪಾಟೀಲ್ ಕುಟುಂಬದಲ್ಲಿ ಸಂಗನಗೌಡ ಹಾಗೂ ಬಸಮ್ಮ ದಂಪತಿಗಳ ಮಗನಾಗಿ 1948 ಏಪ್ರಿಲ್ 10ರಂದು ಜಿ.ಎಸ್. ಪಾಟೀಲ್ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಧಾರವಾಡದ ಸೇಂಟ್ ಜೋಸೆಫ್ ಶಾಲೆಯಲ್ಲಿ ಆರಂಭಿಸಿ, ಕೆಸಿಡಿ ಮಹಾವಿದ್ಯಾಲಯದಲ್ಲಿ ಪದವಿ ಪಡೆದ ಅವರು 1974ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಜಿ.ಎಸ್. ಪಾಟೀಲ್ ಅವರು 1983ರಲ್ಲಿ ರೋಣ ಪಟ್ಟಣ ಪಂಚಾಯಿತಿಯಲ್ಲಿ ಗೆಲುವು ಸಾಧಿಸುವ ಮೂಲಕ ರಾಜಕೀಯ ರಂಗಕ್ಕೆ ಪ್ರವೇಶ ಮಾಡಿದರು. 1989ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರೋಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜಯಗಳಿಸಿ ಮೊದಲ ಬಾರಿಗೆ ಶಾಸಕರಾಗಿ ವಿಧಾನಸೌಧ ಮೆಟ್ಟಿಲೇರಿದರು. ನಂತರ 1999, 2013 ಮತ್ತು 2023ರಲ್ಲಿ ರೋಣ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸಿ ಒಟ್ಟು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಜಿ.ಎಸ್. ಪಾಟೀಲ್ ಅವರು 2023ರ ಚುನಾವಣೆಯಲ್ಲಿ ಬಿಜೆಪಿಯ ಕಳಕಪ್ಪ ಬಂಡಿ ಅವರನ್ನು 24,688 ಮತಗಳ ಅಂತರದಿಂದ ಸೋಲಿಸಿದ್ದರು.
ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದಿದ್ದ ಜಿ.ಎಸ್. ಪಾಟೀಲ್ ಅವರ ತಂದೆ ಸಂಗನಗೌಡ ಬಸನಗೌಡ ಪಾಟೀಲ್ ಬಿಜಾಪುರ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಮಾಜಿ ಸಂಸದರಾಗಿದ್ದರು. ಅವರ ಹಿರಿಯ ಸಹೋದರ ಆರ್.ಎಸ್. ಪಾಟೀಲ್ ಅವರು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾಗಿ ಸೇವೆ ಸಲ್ಲಿಸಿದ್ದು, ಅವರ ರಾಜಕೀಯ ಪ್ರಭಾವ ಜಿ.ಎಸ್. ಪಾಟೀಲ್‌ರ ಮೇಲೂ ಆಗಿದೆ.
ರಾಜಕೀಯ ಜೀವನದಲ್ಲಿ ಸೋಲು-ಗೆಲುವುಗಳನ್ನು ಅನುಭವಿಸಿದ ಜಿ.ಎಸ್. ಪಾಟೀಲ್ ಅವರು ರೋಣ ತಾಲೂಕಿನಲ್ಲಿ ಕೆರೆಗಳ ನಿರ್ಮಾಣ, ಜಿಟಿಟಿಸಿ ಹಾಗೂ ಪಾಲಿಟೆಕ್ನಿಕ್ ಕಾಲೇಜು ಮಂಜೂರಾತಿ, ಚೋಳಚಗುಡ್ಡದ ಬಳಿ ಬ್ಯಾರೇಜ್ ನಿರ್ಮಾಣ, ಉಗ್ರಾಣ ಘಟಕ, ಶೀತಲೀಕರಣ ಘಟಕ ಮಂಜೂರಾತಿ, ಅಗ್ನಿಶಾಮಕ ಠಾಣೆ ಮಂಜೂರಾತಿ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದಾರೆ.
ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ಆಗಿದ್ದರೂ ಇನ್ನೂ ಸಾಕಷ್ಟು ಅಭಿವೃದ್ಧಿ ಆಗಬೇಕಿದೆ. ಕ್ಷೇತ್ರದ ಕೆಲವು ಗ್ರಾಮಗಳ ರಸ್ತೆಗಳು ಹದಗೆಟ್ಟಿದ್ದು, ಅವುಗಳನ್ನು ಸರಿಪಡಿಸುವ ಕೆಲಸಗಳಾಗಬೇಕಿದೆ. ತಾಲೂಕಿನಲ್ಲಿ ಸರ್ಕಾರಿ ಪದವಿ ಕಾಲೇಜು ಇಲ್ಲದೇ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಪದವಿ ಕಲಿಯಲು ದೂರದ ನರಗುಂದ, ಗದಗ, ನರೇಗಲ್, ಗಜೇಂದ್ರಗಡ ಪಟ್ಟಣಗಳಿಗೆ ಹೋಗುವ ಪರಿಸ್ಥಿತಿ ಎದುರಾಗಿದ್ದು, ರೋಣ ತಾಲೂಕಿನ ಜನರು ಸರ್ಕಾರಿ ಪದವಿ ಕಾಲೇಜು ಮಂಜೂರಾತಿಗಾಗಿ ಕಾಯುತ್ತಿದ್ದಾರೆ.
ಉತ್ತರ ಕರ್ನಾಟಕ ಭಾಗದ ಲಿಂಗಾಯತ ಸಮುದಾಯದ ಪ್ರಭಾವಿ, ಸೌಮ್ಯ ಸ್ವಭಾವದ ನಾಯಕರಾಗಿ ಜಿ.ಎಸ್. ಪಾಟೀಲ್ ಗುರುತಿಸಿಕೊಂಡಿದ್ದು, ನೂತನ ವಿಧಾನಸಭೆಯ ಸ್ಪೀಕರ್ ಆಗಿ ಮುನ್ನಡೆಸಲಿದ್ದಾರೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.



