ಲಕ್ಷ್ಮೇಶ್ವರ ಪ್ರದೇಶದ ಬಡ ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕೆಂದು ಸರ್ಕಾರ ಪ್ರತ್ಯೇಕವಾಗಿ ಹಾಸ್ಟೆಲ್‌ಗಳನ್ನು ತೆರೆಯುತ್ತಾರೆ. ಈ ವಸತಿ ನಿಲಯಗಳನ್ನು ನಿರ್ವಹಿಸುವಲ್ಲಿ ಉದಾಸೀನ ತೋರುತ್ತಾರೆ. ಹೀಗೆ ಸರ್ಕಾರದ ನಿರ್ಲಕ್ಷಕ್ಕೆ ಒಳಗಾಗಿದೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರು ಗ್ರಾಮದಲ್ಲಿರುವ ಕರ್ನಾಟಕ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ.
ಈ ವಿದ್ಯಾಲಯಕ್ಕೆ ಸ್ವಂತ ಕಟ್ಟಡವಿಲ್ಲ. ಸರ್ಕಾರಿ ಪ್ರಾಥಮಿಕ ಶಾಲೆಯ ಮೂರು ಕೊಠಡಿಗಳಲ್ಲಿ 89 ವಿದ್ಯಾರ್ಥಿನಿಯರು ಇದ್ದು, ಜೈಲಿನಲ್ಲಿರುವಂತೆ ಈ ಮಕ್ಕಳು ಇಕ್ಕಟ್ಟಾದ ಸ್ಥಳದಲ್ಲಿ ವಾಸಿಸುತ್ತಿದ್ದಾರೆ. ಆದರೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಶಿಕ್ಷಣಾದಿಕಾರಿಗಳು ಒಮ್ಮೆಯೂ ಇತ್ತ ಗಮನಹರಿಸಿಲ್ಲ.
ಕರ್ನಾಟಕ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದ ವಿದ್ಯಾರ್ಥಿನಿಯರು ಮೂಲಭೂತ ಸೌಕರ್ಯಗಳು ಇಲ್ಲದೇ ಮಕ್ಕಳು ದಿನ ನಿತ್ಯವು ನರಕಯಾತನೆ ಅನುಭವಿಸುತ್ತಿದ್ದಾರೆ. ವಿದ್ಯಾಲಯವು 2012ರಲ್ಲಿ ಸ್ವಂತ ಕಟ್ಟಡ ಇಲ್ಲದೇಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಗಳಲ್ಲಿಯೇ ಆರಂಭೀಸಲಾಗಿದೆ. ವಸತಿ ಶಾಲೆಯಲ್ಲಿ ಆರನೇ ತರಗತಿಯಿಂದ ಹತ್ತನೇ ತರಗತಿ ವರೆಗಿನ ವಿದ್ಯಾರ್ಥಿನಿಯರು ಇದ್ದಾರೆ.
ಇಲ್ಲಿರುವ 89 ವಿದ್ಯಾರ್ಥಿನಿಯರಿಗೆ ಸರಿಯಾದ ಶೌಚಾಲಯ ಇಲ್ಲ, ಸ್ನಾನಗೃಹ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಇದೆ. ಆಟದ ಮೈದಾನವಿಲ್ಲ, ಸ್ವಂತ ಕಟ್ಟಡ ಇಲ್ಲದೇ ಮೂರೆ ಮೂರು ಕೊಠಡಿಗಳಲ್ಲಿ ವಿದ್ಯಾರ್ಥಿನಿಯರು ಇದ್ದಾರೆ.
ಅನಾರೋಗ್ಯದ ಸಮಸ್ಯೆ ಎದುರಿಸುತ್ತಿರುವ ಮಕ್ಕಳು
ಸರಕಾರಿ ಪ್ರಾಥಮಿಕ ಶಾಲೆಯ ಮೂರು ಕೊಠಡಿಗಳನ್ನು ಕಸ್ತೂರಿಬಾ ಗಾಂಧಿ ವಸತಿ ನಿಲಯಕ್ಕೆ ನೀಡಿದ್ದು, ಒಂದೊಂದು ಕೊಠಡಿಯಲ್ಲಿ ಮೂವತೈದರಿಂದ ನಲವತ್ತು ವಿದ್ಯಾರ್ಥಿನಿಯರನ್ನು ಕುರಿಹಿಂಡಿನ ಹಾಗೆ ಇರಿಸಲಾಗಿದೆ. ವಿದ್ಯಾರ್ಥಿನಿಯರಿಗೆ ಓದಲು, ಬರೆದುಕೊಳ್ಳಲು ನಿತ್ಯವು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಜಾಗದ ಅಭಾವದಿಂದ ಒಬ್ಬರಿಗೊಬ್ಬರು ಹತ್ತಿಕೊಂಡು ಮಲಗುವಂತ ಪರಿಸ್ಥಿತಿ ಇದ್ದು, ಇದರಿಂದ ವಿದ್ಯಾರ್ಥಿನಿಯರಲ್ಲಿ ಚರ್ಮದ ಸಮಸ್ಯೆಗಳು, ತುರಿಕೆ, ಗುಳ್ಳೆ, ಡೆಂಗ್ಯೂ ಜ್ವರ ಕಂಡು ಬಂದಿದ್ದು ನಿತ್ಯವು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮಳೆ ಬಂದರೆ ಕೊಠಡಿಗಳು ಸೋರುವುದರಿಂದ ಇದರಲ್ಲಿಯೇ ಇರಬೇಕಾದ ಅನಿವಾರ್ಯತೆ ಮಕ್ಕಳದ್ದಾಗಿದೆ.
ಹಗಲು ಕನ್ನಡ ಶಾಲೆಯ ಮೂರು ನಾಲ್ಕನೇ ತರಗತಿಯ ವರ್ಗಗಳು ನಡೆಯುತ್ತಿದ್ದು, ಅದರ ಅರ್ಧ ಭಾಗದಲ್ಲಿ ವಿದ್ಯಾರ್ಥಿನಿಯರಿಗೆ ವಸತಿ ಕಲ್ಲಿಸಲಾಗಿದೆ. ಇದರಿಂದ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಇನ್ನಷ್ಟು ಕಷ್ಟವಾಗಿದೆ. ಒಂದೇ ಕೊಠಡಿಯಲ್ಲಿ ಕಛೇರಿ ಹಾಗೂ ಅಡುಗೆ ಕೊಠಡಿ ಇದ್ದು, ವಾರ್ಡನ್ ಇದೇ ಕೊಠಡಿಯಲ್ಲಿ ವಾಸಮಾಡುತ್ತಿದ್ದಾರೆ.
ಶೌಚಾಲಯ, ಸ್ನಾನದ ಸಮಸ್ಯೆ
ಈ ಕಸ್ತೂರಬಾ ಗಾಂಧಿ ಬಾಲಿಕಾ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಇರುವುದು ಮೂರೇ ಶೌಚಾಲಯ, ಸ್ನಾನಗೃಹ. ಇದರಿಂದ ವಿದ್ಯಾರ್ಥಿನಿಯರು ಬೆಳೆಗ್ಗೆ ಬೇಗ ಎದ್ದರು ನಿತ್ಯ ಕರ್ಮಗಳು ತೆವಾಗುವುದರಿಂದ ಮಕ್ಕಳು ಶಾಲೆಗೆ ಪ್ರತೀ ನಿತ್ಯ ತಡವಾಗಿ ಹೋಗುತ್ತಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ
ಶುದ್ಧ ಕುಡಿಯುವ ನೀರಿನ ಘಟಕ ಇದ್ದು ಸುಮಾರು ಎಳೆಂಟ ತಿಂಗಳಿಂದ ಕೆಟ್ಟು ನಿಂತಿದೆ. ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಶುದ್ದ ನೀರು ಕುಡಿಯದೇ ಇರುವುದರಿಂದ ವಿದ್ಯಾರ್ಥಿನಿಯರಲ್ಲಿ ಆರೋಗ್ಯದ ಸಮಸ್ಯೆ ಕಾಡುತ್ತಿವೆ.
ಸೌಲಭ್ಯಗಳ ಕೊರತೆ
ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ನಿಲಯದಲ್ಲಿ ಕಂಪ್ಯೂಟರ್‌ಗಳ ಕೊರತೆ ಇದೆ. ಇದರಿಂದ ವಿದ್ಯಾರ್ಥಿನಿಯರ ಕಲಿಕೆಯಲ್ಲಿ ಹಿನ್ನಡೆಯಾಗುತ್ತಿದೆ. ಅಧಿಕಾರಿಗಳು ಭೇಟಿ ನೀಡಿದಾಗ ಕಂಪ್ಯೂಟರ್ ಕೊಡಿಸಿ ಎಂದು ಮಕ್ಕಳು ಕೇಳಿದ್ದಾರೆ ಇದಕ್ಕೆ ಅಧಿಕಾರಿಗಳು ಹಾರಿಕೆಯ ಉತ್ತರ ನೀಡುತ್ತಾರೆ. ಪ್ರವಾಸಕ್ಕೆ ಕರೆದುಕೊಂಡು ಹೋಗಿ ಎಂದು ಮಕ್ಕಳು ಕೇಳಿದ್ದಾರೆ ಈ ಯಾವುದೇ ಸೌಲಭ್ಯವಿಲ್ಲ ಎಂದು ಬೇಜವಬ್ದಾರಿಯ ಮಾತುಗಳನ್ನಾಡಿದ್ದಾರೆ ಎಂದು ಮಕ್ಕಳು ಆರೋಪಿಸುತ್ತಾರೆ.
ಈ ವಸತಿ ನಿಲಯದ ಮಹಿಳಾ ವಾರ್ಡನ್ ಗುತ್ತಿಗೆ ಆಧಾರದ ಮೇಲೆ ಸುಮಾರು ಹನ್ನೆರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರು, ಕೇವಲ ನಾಲ್ಕು ಸಾವಿರ ರೂ. ಸಂಬಳ ಕೊಡುತ್ತಿದ್ದಾರೆ. ಇವರಿಗೆ ಯಾವುದೇ ಇಫ್, ಪಿಎಫ್ ಸೌಲಭ್ಯಗಳಿಲ್ಲದೆ ಆರ್ಥಿಕ ಅಭದ್ರತೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ ಕುರಿತು ಈದಿನ.ಕಾಮ್ ನೊಂದಿಗೆ ಮಾತನಾಡಿದ ವಿದ್ಯಾರ್ಥಿಗಳು, “ಸ್ವಂತ ಕಟ್ಟಡ ಇಲ್ಲದೆ ಇಕ್ಕಟ್ಟಾದ ಜಾಗದಲ್ಲಿ ಕಲಿತಿದ್ದಿವಿ, ಒಬ್ಬರಿಗೊಬ್ಬರು ಹತ್ತಿ ಮಲ್ಕೊಂತಿವಿ, ಇದರಿಂದ ಮೈಯ್ಯಾಗೆಲ್ಲ ಹುರುಕು, ತಿಂಡಿ ಬಿಡುತ್ತದೆ, ಜ್ವರ ಕಾಡುತ್ತಿವೆ. ನಮಗೆ ಸ್ವಂತ ಕಟ್ಟಡ ಆದರೆ, ಈ ಎಲ್ಲ ಸಮಸ್ಯೆ ಬಗಿಹರಿತ್ತವೆ,” ಎನ್ನುತ್ತಾರೆ.
ಪಾಲಕರಾದ ಸಕ್ಕೂಭಾಯಿ ಲಮಾಣಿ ಈ ದಿನ. ಕಾಮ್ ನೊಂದಿಗೆ ಮಾತನಾಡಿ, “ನಮ್ಮ ಮಕ್ಕಳಿಗೆ ಚೆನ್ನಾಗಿ ಶಿಕ್ಷಣ ಕೊಡುತ್ತಾರೆ, ಇಲ್ಲಿ ಅವರ ಆರೋಗ್ಯ ಚನ್ನಾಗಿ ಇರುತ್ತದೆ ಎಂದು ಇರಿಸಿದ್ದೀವಿ. ನಾವು ಕೆಲಸಕ್ಕಾಗಿ ಬೇರೆ ಬೇರೆ ಜಿಲ್ಲೆಗಳಿಗೆ ಹೋಗುತ್ತೇವೆ. ಆದರೆ, ಇಲ್ಲಿ ಅನಾರೋಗ್ಯದಿಂದ ನಮ್ಮ ಮಕ್ಕಳು ಪದೆ ಪದೇ ನಮಗೆ ಪೋನ್ ಮಾಡಿ ಸಮಸ್ಯೆ ಆಗುತ್ತಿದೆ ಎಂದು ಹೇಳುತ್ತಾರೆ. ಈ ರೀತಿ ಆದರೆ ನಮ್ಮ ಮಕ್ಕಳ ಆರೋಗ್ಯದ ಗತಿ ಏನಾಗುತ್ತದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ನಮ್ಮ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ,” ಎಂದು ಬೇಸರ ವ್ಯಕ್ತಪಡಿಸಿದರು.
ವಾರ್ಡನ್ ಎನ್.ಎಸ್. ಗೌಡರ್ ಮಾತನಾಡಿ,”ಕಟ್ಟಡ ನಿರ್ಮಾಣಕ್ಕೆ ಜಾಗ ಇದ್ದು, ಕಾಮಗಾರಿ ಆರಂಭಿಸಿಲ್ಲ. ಸ್ವಂತ ಕಟ್ಟಡ ಇಲ್ಲದೆ ಇಕ್ಕಟ್ಟಾದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಇದ್ದಾರೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಒಂದೇ ಕೊಠಡಿಯಲ್ಲಿ ನಾನು ಇರೋದು, ಅಲ್ಲಿಯೇ ಅಡುಗೆ ಕೋಣೆ ಇದೆ. ಇಲ್ಲಿ ಮೂಲಭೂತ ಸೌಕರ್ಯಗಳಿಲ್ಲ ಶೌಚಾಲಯ, ಸ್ನಾನಗೃಹಗಳ ಸಂಖ್ಯೆ ಹೆಚ್ಚುಮಾಡಬೇಕು. ಕುಡಿಯುವ ನೀರಿನ ಸಮಸ್ಯೆ ಇದೆ ಇದನ್ನು ಆದಷ್ಟು ಬೇಗ ಸರಿ ಪಡಿಸಬೇಕು. ಈ ಕುರಿತು ಅಧಿಕಾರಿಗಳಿಗೆ ಎಷ್ಟೋಸಲ ತಿಳಿಸಿದರೂ ಪ್ರಯೋಜನವಾಗಿಲ್ಲ.” ಎಂದು ಹೇಳಿದರು.
ಈ ವಸತಿ ಶಾಲೆಯ ವಿದ್ಯಾರ್ಥಿನಿಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದನ್ನು ನಾನು ಕಣ್ಣಾರೆ ಕಂಡಿರುವೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ವಿದ್ಯಾರ್ಥಿನಿಯರಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಡಿಸಿ ಕಛೇರಿಯ ಮುಂದೆ ಉಗ್ರ ಪ್ರತಿಭಟಿಸಲಾಗುವುದು ಎಂದು ಕರವೇ ರಾಜ್ಯ ಸಾಮಾಜಿಕ ಜಾಲತಾಣ ಸಂಚಾಲಕ ಚೇತನ ಕಣವಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಈದಿನ.ಕಾಮ್‌ಗೆ ಡಿಡಿಪಿಐ, ಎಂ.ಎ. ರಡ್ಡೇರ ಪ್ರತಿಕ್ರಿಯಿಸಿ, “ಐದು ಎಕರೆ ಭೂಮಿಯನ್ನು ಈಗಾಗಲೇ ಖರೀದಿ ಮಾಡಿದ್ದೇವೆ. ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕೂಡ ಸಲ್ಲಿಸಿದ್ದೇವೆ. ಕೂಡಲೇ ಕಾಮಗಾರಿ ಆರಂಭಿಸಲಾಗುವುದು. ಅಲ್ಲಿಯ ಸಮಸ್ಯೆಗಳನ್ನು ಬಗೆಹರಿಸಲಾಗುವುದು,” ಎಂದಿದ್ದಾರೆ.
ಒಟ್ಟಿನಲ್ಲಿ ತಂದೆ-ತಾಯಿ ತಮ್ಮ ಮಕ್ಕಳು ಒಳ್ಳೆಯ ವಿದ್ಯಾಭಯಾಸ ಮಾಡಲಿ ಒಳ್ಳೆಯ ಆರೋಗ್ಯಹೊಂದಲಿ ಎಂದು ಸರ್ಕಾರಿ ವಸತಿ ನಿಲಯಗಳಿಗೆ ಸೇರಿಸುತ್ತಾರೆ. ಆದರೆ, ಇಲ್ಲಿ ಕಲಿಯುವ ಮಕ್ಕಳು ಪ್ರತೀ ದಿನ ಇಂತಹ ಸವಾಲುಗಳನ್ನು ಎದುರಿಸಬೇಕಾದ ಸ್ಥಿತಿ ಸರ್ಕಾರಿ ಹಾಸ್ಟೇಲ್‌ಗಳದ್ದು. ಇನ್ನಾದರೂ ಈ ಮಕ್ಕಳ ಸಮಸ್ಯೆಗೆ ಪರಿಹಾರ ಸಿಗುವುದೇ ಕಾದುನೋಡಬೇಕು.