ವಿಬಿ-ಜಿ ರಾಮ್ ಜಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ ಗ್ರಾಮೀಣ ವಲಸೆಯನ್ನು ತಗ್ಗಿಸುವುದರ ಜತೆಗೆ, ಕೂಲಿಕಾರರ ಆರ್ಥಿಕ ಸ್ಥಿರತೆ ಹೆಚ್ಚಿಸಿ, ಗ್ರಾಮೀಣ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಯೋಜನೆಯ ಯಶಸ್ಸಿಗೆ ಅಧಿಕಾರಿಗಳ ಬದ್ಧತೆ, ಸಮರ್ಪಕ ಅನುದಾನ ಮತ್ತು ಪಾರದರ್ಶಕ ಅನುಷ್ಠಾನ ಅತ್ಯಗತ್ಯವಾಗಿದೆ.
ಮುಂಗಾರು ಮಳೆ ಕೊರತೆಯಿಂದ ಬೆಳೆ ಉತ್ತಮ ಫಸಲು ನೀಡದಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಕೂಲಿಕಾರರಿಗೆ ಸ್ಥಳೀಯವಾಗಿ ಉದ್ಯೋಗ ಸಿಗದೆ ಕೆಲಸಕ್ಕಾಗಿ ದೂರದ ಊರುಗಳಿಗೆ ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದನ್ನು ತಪ್ಪಿಸಲು ರೋಣ ತಾಲೂಕು ಪಂಚಾಯತ್ ಅಧಿಕಾರಿಗಳು ಗ್ರಾಮೀಣ ಕೂಲಿಕಾರ್ಮಿಕರಿಗೆ ವಿಬಿ-ಜಿ ರಾಮ್ ಜಿ ಅಡಿ ಕೆಲಸ ನೀಡಲು ಮುಂದಾಗಿರುವುದು ಹೊಸ ಭರವಸೆ ಮೂಡಿಸಿದೆ.
ಗದಗ ಜಿಲ್ಲೆಯ ರೋಣ ಹಾಗೂ ಗಜೇಂದ್ರಗಡ ತಾಲೂಕುಗಳಲ್ಲಿ ವಾಡಿಕೆಯಷ್ಟು ಮಳೆಯಾಗದೆ, ಉತ್ತಮ ಬೆಳೆ ನಿರೀಕ್ಷೆ ಕಳೆದುಕೊಳ್ಳುವ ಭೀತಿ ರೈತರಲ್ಲಿ ಉಂಟಾಗಿದೆ. ಉತ್ತಮ ಮಳೆಯಾದರೆ ಸ್ಥಳೀಯ ಮಟ್ಟದಲ್ಲಿ ಕೂಲಿಕಾರ್ಮಿಕರಿಗೆ ಸಾಕಷ್ಟು ಉದ್ಯೋಗಾವಕಾಶ ದೊರೆಯುತ್ತಿದ್ದವು. ಆದರೆ ಮಳೆ ಕೊರತೆಯಿಂದ ಕೂಲಿಕಾರ್ಮಿಕರು ಉದ್ಯೋಗಕ್ಕಾಗಿ ಗುಳೆ ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ಕೂಲಿಕಾರರು ಗುಳೆ ಹೋಗುವುದನ್ನು ತಪ್ಪಿಸಲು ಗ್ರಾಮೀಣ ಕುಟುಂಬಗಳಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ರೋಣ ಹಾಗೂ ಗಜೇಂದ್ರಗಡ ತಾಲೂಕಿನಲ್ಲಿ ಸಿದ್ಧತೆಗಳು ವೇಗ ಪಡೆದುಕೊಂಡಿವೆ.
ದಿನಕ್ಕೆ ₹382 ಕೂಲಿ, 125 ದಿನ ಉದ್ಯೋಗ ಖಾತರಿ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ(ಮನರೇಗಾ) ಕಾಯಿದೆಯ ಬದಲಿಗೆ ಜಾರಿಗೆ ಬಂದಿರುವ ಈ ಯೋಜನೆಯಡಿ ದಿನಕ್ಕೆ ₹382 ಕೂಲಿ ನಿಗದಿಯಾಗಿದ್ದು, ಅರ್ಹ ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ 125 ದಿನಗಳ ಕೌಶಲರಹಿತ ಉದ್ಯೋಗ ಖಾತರಿ ನೀಡಲಾಗುತ್ತಿದೆ.
ಈ ವರ್ಷ ಮುಂಗಾರು ನಿರೀಕ್ಷೆಯಂತೆ ಆರಂಭವಾಗದ ಕಾರಣ ರೋಣ ಹಾಗೂ ಗಜೇಂದ್ರಗಡ ತಾಲೂಕುಗಳ ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಕೂಲಿಕಾರರಿಗೆ ಸ್ಥಳೀಯವಾಗಿ ಉದ್ಯೋಗದ ಅವಕಾಶ ಕಲ್ಪಿಸುವ ಯೋಜನೆಗೆ ಹೆಚ್ಚಿನ ಮಹತ್ವ ಬಂದಿದೆ. ಕೃಷಿ ಕೆಲಸವಿಲ್ಲದ ಅವಧಿಯಲ್ಲಿ ಕುಟುಂಬಗಳ ಆದಾಯಕ್ಕೆ ಆಸರೆಯಾಗಲಿದೆ ಎಂಬ ನಿರೀಕ್ಷೆ ಕೂಲಿಕಾರರಲ್ಲಿ ಮೂಡಿದೆ.
ಯೋಜನೆಯ ಆರಂಭಿಕ ಹಂತದಲ್ಲಿ ಈಗಾಗಲೇ ಇ-ಕೆವೈಸಿ ಪೂರ್ಣಗೊಳಿಸಿರುವ ಹಳೆಯ ಮನರೇಗಾ ಜಾಬ್ ಕಾರ್ಡ್‌ಗಳನ್ನೇ ಮಾನ್ಯಗೊಳಿಸಿ ಕೆಲಸ ನೀಡಲಾಗುತ್ತದೆ. ಇದರಿಂದ ಹೊಸ ಕಾರ್ಡ್‌ಗಾಗಿ ಕಾಯಬೇಕಾದ ಅಗತ್ಯ ಇರುವುದಿಲ್ಲ. ನಂತರ ಹಂತ ಹಂತವಾಗಿ ಎಲ್ಲ ಅರ್ಹ ಕುಟುಂಬಗಳಿಗೆ ಗ್ರಾಮೀಣ ರೋಜ್‌ಗಾರ್ ಗ್ಯಾರಂಟಿ ಕಾರ್ಡ್ ವಿತರಿಸಲಾಗುತ್ತದೆ. ಈವರೆಗೆ ಯಾವುದೇ ಯೋಜನೆಯಲ್ಲಿ ಹೆಸರು ನೋಂದಾಯಿಸದ ಗ್ರಾಮೀಣ ಕುಟುಂಬಗಳಿಗೂ ಹೊಸದಾಗಿ ಅರ್ಜಿ ಸಲ್ಲಿಸಿ ಯೋಜನೆಯ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಎರಡು ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಅಗತ್ಯ ಪೂರ್ವಸಿದ್ಧತೆ ಕೈಗೊಳ್ಳಲಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದ್ದು, ಗ್ರಾಮ ಸಭೆಗಳ ಮೂಲಕ ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸುವ ಕಾರ್ಯ ಪ್ರಗತಿಯಲ್ಲಿದೆ. ಜಲ ಸಂರಕ್ಷಣೆ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ, ಜೀವನೋಪಾಯ ವೃದ್ಧಿ ಹಾಗೂ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಲಾಗಿದೆ.
ಹೊಸ ಯೋಜನೆಯಲ್ಲಿ ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕೆಲಸದ ಸ್ಥಳಗಳಲ್ಲಿ ಫೇಸ್ ಅಥೆಂಟಿಕೇಶನ್ ಮೂಲಕವೇ ಹಾಜರಾತಿ ದಾಖಲಿಸಲಾಗುತ್ತದೆ. ಜತೆಗೆ ಕಾರ್ಮಿಕರಿಗೆ ಸುರಕ್ಷಿತ ಕುಡಿಯುವ ನೀರು, ನೆರಳು, ವಿಶ್ರಾಂತಿ ಸೌಲಭ್ಯ ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ತಾಂತ್ರಿಕ ಸಮಸ್ಯೆಗಳು ಎದುರಾದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಕೃಷಿ ಹಂಗಾಮಿನಲ್ಲಿ ರೈತರಿಗೆ ಕಾರ್ಮಿಕರ ಕೊರತೆ ಉಂಟಾಗದಂತೆ ಬಿತ್ತನೆ ಹಾಗೂ ಕೊಯ್ಲಿನ ಅವಧಿಯಲ್ಲಿ ಯೋಜನೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದಂತೆ ವ್ಯವಸ್ಥೆ ಮಾಡಲಾಗಿದೆ. ಉಳಿದ ಅವಧಿಯಲ್ಲಿ ಹೆಚ್ಚಿನ ಕಾಮಗಾರಿಗಳನ್ನು ಆರಂಭಿಸುವ ಮೂಲಕ ಗ್ರಾಮೀಣ ಕುಟುಂಬಗಳಿಗೆ ನಿರಂತರ ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದೆ. ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಮನ್ವಯಗೊಳಿಸಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ.
ಈ ಕುರಿತು ರೋಣ ಹಾಗೂ ಗಜೇಂದ್ರಗಡ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕುಂದಕೂರ ಮಾತನಾಡಿ, “ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತಾಲೂಕು ಮಟ್ಟದಲ್ಲಿ ಅಗತ್ಯ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿಗಳಿಗೆ ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ್ದು, ಅರ್ಹ ಗ್ರಾಮೀಣ ಕುಟುಂಬಗಳಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗ ಕಲ್ಪಿಸಲು ಕ್ರಮವಹಿಸಲಾಗಿದೆ. ಯೋಜನೆಯ ಸೌಲಭ್ಯವನ್ನು ಎಲ್ಲ ಅರ್ಹ ಕಾರ್ಮಿಕರು ಸದುಪಯೋಗಪಡಿಸಿಕೊಳ್ಳಬೇಕು” ಎಂದು ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ? ಕೊಪ್ಪಳ | 14 ಮಂದಿ ಮಕ್ಕಳು ಶಿಕ್ಷಣದಿಂದ ವಂಚಿತ: ತಳಸಮುದಾಯಗಳ ಮಕ್ಕಳ ಬಾಳಲ್ಲಿ ಡಿಡಿಪಿಐ ಚೆಲ್ಲಾಟ?
ಮುಂಗಾರು ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗದ ಅಭಾವ ಉಂಟಾಗಿರುವ ಸಂದರ್ಭದಲ್ಲಿ, ಕೂಲಿಕಾರರು ಜೀವನೋಪಾಯಕ್ಕಾಗಿ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ರೋಣ ತಾಲೂಕು ಪಂಚಾಯತ್ ಅಧಿಕಾರಿಗಳು ವಿಬಿ-ಜಿ ರಾಮ್ ಜಿ ಯೋಜನೆಯಡಿ ಸ್ಥಳೀಯ ಮಟ್ಟದಲ್ಲೇ ಉದ್ಯೋಗಾವಕಾಶ ಕಲ್ಪಿಸಲು ಕೈಗೊಂಡಿರುವ ಕ್ರಮ ಗ್ರಾಮೀಣ ಕುಟುಂಬಗಳಿಗೆ ಹೊಸ ಆಶಾಕಿರಣವಾಗಿದೆ. ವಿಬಿ-ಜಿ ರಾಮ್ ಜಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ ಗ್ರಾಮೀಣ ವಲಸೆಯನ್ನು ತಗ್ಗಿಸುವುದರ ಜತೆಗೆ, ಕೂಲಿಕಾರರ ಆರ್ಥಿಕ ಸ್ಥಿರತೆ ಹೆಚ್ಚಿಸಿ, ಗ್ರಾಮೀಣ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಯೋಜನೆಯ ಯಶಸ್ಸಿಗೆ ಅಧಿಕಾರಿಗಳ ಬದ್ಧತೆ, ಸಮರ್ಪಕ ಅನುದಾನ ಮತ್ತು ಪಾರದರ್ಶಕ ಅನುಷ್ಠಾನ ಅತ್ಯಗತ್ಯವಾಗಿದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.



