ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಿ, ಕುಂವೆಂಪು ನಗರದ ಶಾಲೆಯಲ್ಲಿ ಎಂಟನೇ ತರಗತಿವರೆಗೆ ವಿಸ್ತರಿಸುವಂತೆ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಆಡಳಿತಗಾರರು ತ್ವರಿತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಸ್ಥಳೀಯ ಪಾಲಕರು, ಶಿಕ್ಷಕರು ಮತ್ತು ಸಮಾಜ ಒಟ್ಟಾಗಿ ಧ್ವನಿ ಎತ್ತಿ ಈ ಅನ್ಯಾಯವನ್ನು ತಡೆಯಬೇಕಾಗುತ್ತದೆ. ಮಕ್ಕಳ ಶಿಕ್ಷಣಕ್ಕೆ ಯಾವುದೇ ರೀತಿಯ ತಡೆಯೂ ಆಗಬಾರದು ಎಂಬುದು ಪ್ರತಿ ನಾಗರಿಕನ ಹಕ್ಕು ಮತ್ತು ಜವಾಬ್ದಾರಿಯೂ ಆಗಿದೆ.
ಕೊಪ್ಪಳ ನಗರದಲ್ಲಿರುವ ಕುಂವೆಂಪು ನಗರದ ಸರ್ಕಾರಿ ಶಾಲೆಯ ತರಗತಿ ಹೆಚ್ಚಳಕ್ಕೆ ಮೀನಾಮೇಷ ಎಣಿಸುವ ಸನ್ನಿವೇಶಗಳು ಜರುಗುತ್ತಲೇ ಇವೆ. ಈಗಾಗಲೇ ಈ ಸರ್ಕಾರಿ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದ್ದು, ಎಂಟನೇ ತರಗತಿವರೆಗೂ ವಿಸ್ತರಣೆ ಮಾಡುವಂತೆ ಹೇಳಿದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ಯಾರೆ ಎನ್ನದೇ ಇರುವುದು ಮಕ್ಕಳ ಭವಿಷ್ಯದ ಜತೆಗೆ ಚೆಲ್ಲಾಟ ಆಡಿದಂತಿದ್ದು, 14 ಮಂದಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.
ಈ ಶಾಲೆಯಲ್ಲಿ ಪ್ರತಿವರ್ಷವೂ 160ಕ್ಕೂ ಅಧಿಕ ಮಂದಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ. ಆದರೆ ಏಳನೇ ತರಗತಿ ತೇರ್ಗಡೆಯಾದ ಬಳಿಕ ಬಹುತೇಕ ಬಡಮಕ್ಕಳಿಗೆ ಮುಂದಿನ ದಾರಿ ಯಾವುದಯ್ಯಾ ಎಂಬ ಸಂಕಟ ಎದುರಾಗುತ್ತಿದೆ. ಈ ಶಾಲೆಯಲ್ಲಿ 7ನೇ ತರಗತಿ ಮುಗಿಸಿದ ನಂತರ 8ನೇ ತರಗತಿಯಿಂದ ಶಿಕ್ಷಣ ಮುಂದುವರಿಸಲು ಯಾವ ಶಾಲೆಗೆ ಹೋಗಬೇಕು ಎನ್ನುವ ಗೊಂದಲ ಪ್ರತಿ ವರ್ಷವೂ ಕಾಡುತ್ತಿದೆ. ಯಾಕೆಂದರೆ 8ನೇ ತರಗತಿ ಶಿಕ್ಷಣ ಪಡೆಯಲು ಮಕ್ಕಳು ಕುವೆಂಪು ನಗರದಿಂದ ಸುಮಾರು 5 ಕಿಲೋ ಮೀಟರ್ ದೂರ ನಡೆದು ಹೋಗಬೇಕಿರುವುದಲ್ಲದೇ, ರಾಷ್ಟ್ರೀಯ ಹೆದ್ದಾರಿಯನ್ನು ದಾಟಿಯೇ ಮಕ್ಕಳು ಹೋಗಬೇಕು. ಈ ರಸ್ತೆಯಲ್ಲಿ ವಾಹನಗಳು ಹೆಚ್ಚಾಗಿ ಓಡಾಡುವುದರಿಂದ ರಸ್ತೆ ದಾಟುವಾಗ ಮಕ್ಕಳಿಗೆ ಏನಾದರೂ ಅನಾಹುತಗಳು ಉಂಟಾಗಬಹುದೆಂಬ ಆತಂಕವೂ ಪೋಷಕರನ್ನು ಕಾಡುತ್ತಿದೆ.
ಹಾಗಾಗಿ, ಕುವೆಂಪು ನಗರದಲ್ಲೇ ಎಂಟನೇ ತರಗತಿವರೆಗೆ ಮುಂದುವರೆಸುವಂತೆ ಪೋಷಕರು, ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರು ಹಲವು ಬಾರಿ ಮನವಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಎಸ್‌ಡಿಎಂಸಿ ಅಧ್ಯಕ್ಷರು ಸುದ್ದಿಗೋಷ್ಟಿ ನಡೆಸಿಯೂ ಆಗ್ರಹ ಮಾಡಿದ್ದಾರೆ. ಈ ವೇಳೆ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ್ ಗೌಡ ಅವರು ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿರುವುದನ್ನು ಖಂಡಿಸಲಾಗಿದೆ.
“ಇಷ್ಟೆಲ್ಲ ಆದರೂ ಎಂಟನೇ ತರಗತಿ ಆರಂಭವಾಗದ ಹಿನ್ನೆಲೆ 14 ಮಂದಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಶಾಲೆಯಲ್ಲಿ ಕಲಿತ ಒಟ್ಟು 16 ಮಕ್ಕಳಲ್ಲಿ ಇಬ್ಬರು ಮಾತ್ರ ಹಾಸ್ಟೆಲ್‌ಗೆ ಹೋಗಿದ್ದಾರೆ. ಆದರೆ ಉಳಿದ 14 ಮಕ್ಕಳು ಈಗ ಶಾಲೆಯಿಂದ ಡ್ರಾಪೌಟ್ ಆಗಿದ್ದಾರೆ. ಆಶ್ಚರ್ಯ ಎಂದರೆ ಡ್ರಾಪೌಟ್ ಆದ ಮಕ್ಕಳು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯ ಮಕ್ಕಳು. ಹಿಂದುಳಿದ ಮಕ್ಕಳ ಭವಿಷ್ಯ ಎಂದರೆ ಅಧಿಕಾರಿಗಳಿಗೆ ಅಸಡ್ಡೆಯೋ ಏನೋ ತಿಳಿಯದು. ಹಲವು ಬಾರಿ ಮನವಿ ಮಾಡಿದರೂ ಎಂಟನೇ ತರಗತಿ ವಿಸ್ತರಣೆಗೆ ಮನಸು ಮಾಡದೇ ಇರುವುದು ಅಧಿಕಾರದ ಮದ ಮತ್ತು ಅಜ್ಞಾನವೇ ಹೊರತು ಮತ್ತೇನಲ್ಲ” ಎಂದು ಸ್ಥಳೀಯರು ಆರೋಪಿಸಿದರು.
ಈ ಕುರಿತು ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ ಈ ದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿದ್ದು, “ಈಗ 14 ಮಂದಿ ಮಕ್ಕಳು ಡ್ರಾಪೌಟ್ ಆಗಿದ್ದಾರೆ. ಆ ಮಕ್ಕಳ ಮುಂದಿನ ಭವಿಷ್ಯವನ್ನು ರೂಪಿಸುವವರು ಯಾರು? ಇಲ್ಲಿ ಎಂಟನೇ ತರಗತಿ ಓಪನ್ ಮಾಡುವುದು ಕೇವಲ ಅರ್ಧ ಗಂಟೆಯ ಕೆಲಸ. ಆದರೆ ಡಿಡಿಪಿಐಯವರು ತೋರುತ್ತಿರುವ ನಿರ್ಲಕ್ಷ್ಯ ದೋರಣೆ ಸಹಿಸುವಂಥದ್ದಲ್ಲ. ಹೀಗಾಗಿ, ಡ್ರಾಪೌಟ್ ಆದ ಮಕ್ಕಳು ಮತ್ತು ಪೋಷಕರೊಂದಿಗೆ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಎದುರು ವಿಷ ಕುಡಿದು ಪ್ರತಿಭಟನೆ ನಡೆಸುತ್ತೇವೆ. ಇದರ ಜತೆಗೆ ವಿಧಾನಸೌಧದ ಮುಂದೆ ಪ್ರತಿಭಟನೆ ಕೂರಲು ನಿರ್ಧರಿಸಿದ್ದೇವೆ” ಎಂದು ಎಚ್ಚರಿಕೆ ನೀಡಿದರು.
ಉಸ್ತುವಾರಿ ವಹಿಸಿಕೊಂಡಿರುವ ಅನಂತಮೂರ್ತಿಯವರನ್ನು ಈ ದಿನ.ಕಾಮ್ ಸಂಪರ್ಕಿಸಿದಾಗ ಮಾತನಾಡಿ, “ಈ ಶಾಲೆಯಲ್ಲಿ ಎಂಟನೇ ತರಗತಿ ಆರಂಭಿಸುವುದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ. ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಬೇಕಾಗಿ ಮನವಿ ಮಾಡಿದ್ದೇವೆ. ಇವತ್ತು ಕುವೆಂಪು ನಗರದ ಶಾಲೆಗೆ ಬಿಇಒ ಅವರನ್ನು ಕಳುಹಿಸಿದ್ದೇವೆ. ಅವರು, ಡ್ರಾಪೌಟ್ ಆದ ಮಕ್ಕಳನ್ನು ಹತ್ತಿರದ ಶಾಲೆಯಲ್ಲಿ ದಾಖಲಾತಿ ಮಾಡಿಸುವಂತೆ ಪೋಷಕರಿಗೆ ಮನವರಿಕೆ ಮಾಡಿದ್ದಾರೆ. ಇಲ್ಲಿ 8ನೇ ತರಗತಿ ಆರಂಭಕ್ಕೆ ಅನುಮತಿ ಸಿಗುತ್ತಿದ್ದಂತೆ ಮಕ್ಕಳನ್ನು ಇಲ್ಲಿಗೆ ಟ್ರಾನ್ಸ್‌ಫರ್ ಮಾಡಿಸಿಕೊಳ್ಳಲಾಗುತ್ತದೆ” ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್ ಈದಿನ.ಕಾಮ್ ಜತೆಗೆ ಮಾತನಾಡಿ, “ಈಗಾಗಲೇ ಶಿಕ್ಷಣ ಇಲಾಖೆ ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್ ಅವರ ಜತೆಗೆ ಮಾತನಾಡಿದ್ದೇನೆ. ಆದಷ್ಟು ಬೇಗನೇ ಮಕ್ಕಳ ಕಲಿಕೆಗೆ ವ್ಯವಸ್ಥೆ ಮಾಡಲಾಗುತ್ತದೆ. ಈ ವಿಚಾರ ಇತ್ತೀಚೆಗಷ್ಟೇ ನನ್ನ ಗಮನಕ್ಕೆ ಬಂದಿದೆ. ಮೊದಲೇ ತಿಳಿದಿದ್ದರೆ ಮಾರ್ಚ್ ವೇಳೆಯೇ ಪ್ರಪೋಸಲ್ ಕಳುಹಿಸಿ ಸಮಸ್ಯೆ ನಿವಾರಿಸಲು ಪ್ರಯತ್ನಿಸುತ್ತಿದ್ದೆ” ಎಂದರು.
ಡ್ರಾಪೌಟ್ ಮಕ್ಕಳ ಪರಿಸ್ಥಿತಿ ಮನವರಿಕೆ ಮಾಡುವ ಸಲುವಾಗಿ ಈ ದಿನ.ಕಾಮ್ ಡಿಡಿಪಿಐ ಸೋಮಶೇಖರ್ ಪಾಟೀಲ್ ಸಂಪರ್ಕಿಸಿದೆಯಾದರೂ, ಫೋನ್ ರಿಂಗ್ ಆದ ಬಳಿಕ ಕರೆ ಕಡಿತಗೊಳಿಸಿ, ಕೆಲವೇ ಕ್ಷಣದಲ್ಲಿ ಫೋನ್ ಸ್ವಿಚ್ಡ್ ಮಾಡಿಕೊಂಡಿದ್ದಾರೆ.
ಅದೇನೆ ಇರಲಿ, ಮಕ್ಕಳು ಎಂದರೆ ಎಲ್ಲರಿಗೂ ಮಕ್ಕಳೇ. ಯಾರ ಮಕ್ಕಳ ಭವಿಷ್ಯವೂ ಹಾಳಾಗದಂತೆ ನೋಡಿಕೊಳ್ಳುವುದು ಇಡೀ ವ್ಯವಸ್ಥೆಯ ಜವಾಬ್ದಾರಿ. ಅದಕ್ಕಾಗಿ ಜಿಲ್ಲಾಧಿಕಾರಿಗಳು, ಕರೆ ಸ್ವೀಕರಿಸಲಾಗದಷ್ಟು ಬ್ಯುಸಿ ಇರುವ ಡಿಡಿಪಿಐ ಅವರು ಇನ್ನಷ್ಟು ಹೆಚ್ಚಿನ ಪ್ರಯತ್ನ ಮಾಡಬೇಕಿದೆ. ಇದು ಬೇರೆಯವರ ಮಕ್ಕಳ ಭವಿಷ್ಯದ ವಿಚಾರ ಅಲ್ಲ. ತಮ್ಮದೇ ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಎಂದುಕೊಂಡು ಆದಷ್ಟು ಬೇಗನೇ ಸಮಸ್ಯೆಗೆ ಇತಿಶ್ರೀ ಹಾಡಬೇಕಿದೆ. ಇದರಿಂದ ಬಡಪಾಯಿ ಮಕ್ಕಳ ಜೀವನ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಕೊಪ್ಪಳದ ಕುಂವೆಂಪು ನಗರದ ಸರ್ಕಾರಿ ಶಾಲೆಯನ್ನು 8ನೇ ತರಗತಿವರೆಗೆ ವಿಸ್ತರಿಸುವ ಬೇಡಿಕೆಯು ಕೇವಲ ಒಂದು ಶಾಲೆಯ ಸಮಸ್ಯೆಯಲ್ಲ, ಅದು ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲಿರುವ ಜಡತ್ವದ ಪ್ರತೀಕವಾಗಿದೆ. ಮಕ್ಕಳ ಭವಿಷ್ಯದೊಂದಿಗಿನ ಚೆಲ್ಲಾಟವನ್ನು ತಡೆಯಬೇಕಾದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಕ್ಷಣವೇ ಪ್ರತಿಕ್ರಿಯಿಸಬೇಕು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸುವುದು ಸರ್ಕಾರದ ಮುಖ್ಯ ಜವಾಬ್ದಾರಿ. ಈಗಾಗಲೇ ಒಂದರಿಂದ ಏಳನೇ ತರಗತಿವರೆಗೆ ಶಿಕ್ಷಣ ನೀಡುತ್ತಿರುವ ಶಾಲೆಯನ್ನು ಎಂಟನೇ ತರಗತಿಗೆ ವಿಸ್ತರಿಸುವುದು ತಾಂತ್ರಿಕವಾಗಿ ಸಾಧ್ಯವಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದು ಕೇವಲ ಒಂದು ತರಗತಿ ಹೆಚ್ಚಳದ ಪ್ರಶ್ನೆಯಲ್ಲ, ನೂರಾರು ಮಕ್ಕಳ ಶೈಕ್ಷಣಿಕ ಹಕ್ಕುಗಳು ಮತ್ತು ಭವಿಷ್ಯದ ಪ್ರಶ್ನೆಯಾಗಿದೆ.
ಇದನ್ನೂ ಓದಿದ್ದೀರಾ? ಸರ್ಕಾರಿ ಶಾಲೆಗೆ ಮಕ್ಕಳಿಲ್ಲ: ದೇಶಾದ್ಯಂತ 86 ಲಕ್ಷ ದಾಖಲಾತಿ ಇಳಿಕೆ, ರಾಜ್ಯದಲ್ಲೂ ಖಾಸಗಿ ಶಾಲೆಗಳತ್ತ…
ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಿ, ಕುಂವೆಂಪು ನಗರದ ಶಾಲೆಯಲ್ಲಿ ಎಂಟನೇ ತರಗತಿವರೆಗೆ ವಿಸ್ತರಿಸುವಂತೆ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಆಡಳಿತಗಾರರು ತ್ವರಿತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಸ್ಥಳೀಯ ಪಾಲಕರು, ಶಿಕ್ಷಕರು ಮತ್ತು ಸಮಾಜ ಒಟ್ಟಾಗಿ ಧ್ವನಿ ಎತ್ತಿ ಈ ಅನ್ಯಾಯವನ್ನು ತಡೆಯಬೇಕಾಗುತ್ತದೆ. ಮಕ್ಕಳ ಶಿಕ್ಷಣಕ್ಕೆ ಯಾವುದೇ ರೀತಿಯ ತಡೆಯೂ ಆಗಬಾರದು ಎಂಬುದು ಪ್ರತಿ ನಾಗರಿಕನ ಹಕ್ಕು ಮತ್ತು ಜವಾಬ್ದಾರಿಯೂ ಆಗಿದೆ.

ವಿಜಯಕುಮಾರ್ ಎಂ
ವಿಜಯನಗರ ಕೋಆರ್ಡಿನೇಟರ್



