ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಸಂಬಂಧ ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಕರಡು ಪಟ್ಟಿಯಲ್ಲಿ ಹೆಸರು ಇದ್ದವರಿಗೆ ಯಾವುದೇ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ. ಹೆಸರು ಬಿಟ್ಟು ಹೋಗಿದ್ದರೆ ಮಾತ್ರ ನಿಗದಿಪಡಿಸಿರುವ 11 ದಾಖಲೆಗಳಲ್ಲಿ ಒಂದನ್ನು ಸಲ್ಲಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದಲ್ಲಿ ಉಡುಪಿ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಎಸ್‌ಐಆರ್ ಕುರಿತು ನಡೆದ “ತಿಂಗಳ ಅಂಗಳ” ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ನೀಡಿದರು.
ಮನೆಮನೆಗೆ ತೆರಳಿ ಅರ್ಜಿ ವಿತರಿಸಿ ಸಂಗ್ರಹಿಸುವಂತೆ ಬಿಎಲ್‌ಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕರ್ತವ್ಯ ನಿರ್ಲಕ್ಷ್ಯ ತೋರಿದ ಬಿಎಲ್‌ಒಗಳಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಲಾಗಿದ್ದು, ಸಾರ್ವಜನಿಕರು ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಫಾರ್ಮ್ ಸಲ್ಲಿಸಿದ್ದರೂ ಕರಡು ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ, ತಮ್ಮಲ್ಲಿರುವ ಅರ್ಜಿಯ ಮತ್ತೊಂದು ಪ್ರತಿಯೊಂದಿಗೆ ಮರುಅರ್ಜಿ ಸಲ್ಲಿಸಬಹುದು. ಹೆಸರಿನಲ್ಲಿ ವ್ಯತ್ಯಾಸ ಕಂಡುಬಂದರೆ ಅಧಿಕಾರಿಗಳೇ ನೋಟಿಸ್ ನೀಡಿ ಅಗತ್ಯ ದಾಖಲೆಗಳನ್ನು ಪಡೆಯಲಿದ್ದಾರೆ. ಕರಡು ಪಟ್ಟಿಯಲ್ಲಿ ಹೆಸರು ಇರುವ ಯಾರ ಹೆಸರೂ ಅಂತಿಮ ಪಟ್ಟಿಯಿಂದ ಕೈಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಎಸ್‌ಐಆರ್‌ಗೆ ಸಂಬಂಧಿಸಿದ ಗೊಂದಲ ನಿವಾರಣೆ ಹಾಗೂ ಸಾರ್ವಜನಿಕರಿಗೆ ನೆರವು ನೀಡಲು ತಾಲೂಕು ಮಟ್ಟದಲ್ಲಿ ಅಧಿಕಾರಿಗಳನ್ನು ಹಾಗೂ ಬೂತ್ ಮಟ್ಟದಲ್ಲಿ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ಅವರು ಭಾನುವಾರವೂ ಕಾರ್ಯನಿರ್ವಹಿಸಲಿದ್ದಾರೆ. ಬಿಎಲ್‌ಒಗಳ ಬಗ್ಗೆ ದೂರುಗಳಿದ್ದರೆ ಸೆಕ್ಟರ್ ಅಧಿಕಾರಿಗಳು ಅಥವಾ ತಹಶೀಲ್ದಾರ್‌ಗೆ ದೂರವಾಣಿ ಮೂಲಕ ಮಾಹಿತಿ ನೀಡಬಹುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಂಘದ ‘ಸನ್ಮತಿ’ ಪತ್ರಿಕೆಯ ಜೂನ್ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಅಧ್ಯಕ್ಷತೆ ವಹಿಸಿದ್ದರು. ವಾರ್ತಾಧಿಕಾರಿ ಮಂಜುನಾಥ್, ಜಿಲ್ಲಾ ಕೋಶಾಧಿಕಾರಿ ಹರೀಶ್ ಕುಂದರ್, ಪತ್ರಿಕಾ ಭವನ ಸಮಿತಿಯ ಸಹಸಂಚಾಲಕ ಗಣೇಶ್ ಕಲ್ಯಾಣಪುರ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ, ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್ ವಂದಿಸಿದರು. ಕಾರ್ಯಕ್ರಮವನ್ನು ಪತ್ರಕರ್ತ ರಹೀಂ ಉಜಿರೆ ನಿರೂಪಿಸಿದರು.






