ಸಕಲೇಶಪುರ: ತಾಲೂಕಿನ ಯಸಳೂರು ವಲಯದಲ್ಲಿ ಕಾಡಾನೆಗಳೊಂದಿಗೆ ವೀರಾವೇಶದಿಂದ ಹೋರಾಡಿ ಹುತಾತ್ಮನಾದ ದಸರಾ ರಾಯಭಾರಿ ಅರ್ಜುನ ಆನೆಯ ಸ್ಮರಣಾರ್ಥವಾಗಿ ನಿರ್ಮಿಸಿರುವ ಸ್ಮಾರಕವನ್ನು ಇಂದು ಲೋಕಾರ್ಪಣೆ ಮಾಡಲಾಯಿತು.
ಸ್ಮಾರಕವನ್ನು ಉದ್ಘಾಟಿಸಿ ಮಾತನಾಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಅರ್ಜುನ ಕೇವಲ ಒಂದು ಆನೆಯಲ್ಲ, ಕರ್ನಾಟಕದ ಏಳು ಕೋಟಿ ಜನರ ಮನಗೆದ್ದ ಗಜರಾಜ. ಮೈಸೂರು ದಸರಾ ಮಹೋತ್ಸವದಲ್ಲಿ ಎಂಟು ಬಾರಿ ಚಿನ್ನದ ಅಂಬಾರಿಯನ್ನು ಹೊತ್ತು ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ಅವನ ಸೇವೆ ಅಮೋಘವಾಗಿದೆ. ಅವನ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. 2023ರಲ್ಲಿ ಬೆಳಗಾವಿ ಅಧಿವೇಶನದ ವೇಳೆ ಅರ್ಜುನ ಹುತಾತ್ಮನಾದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಬಂದು ಸಮಾಧಿಗೆ ಪೂಜೆ ಸಲ್ಲಿಸಿ ಸ್ಮಾರಕ ನಿರ್ಮಾಣದ ಘೋಷಣೆ ಮಾಡಿದ್ದೆವು. ಅದರಂತೆ ಇಂದು ಇಲ್ಲಿ ಸ್ಮಾರಕ ನಿರ್ಮಾಣ ಮಾಡಿ ಉದ್ಘಾಟನೆ ಮಾಡಲಾಗಿದೆ. ಇನ್ನೂ ಬಳ್ಳೆ ಪ್ರದೇಶದಲ್ಲಿಯೂ ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಪ್ರದೇಶ ಮಾನವ-ಪ್ರಾಣಿ ಸಂಘರ್ಷಕ್ಕೆ ಒಳಪಟ್ಟಿದ್ದು, ಆನೆಗಳು ಅರಣ್ಯದ ಹೊರಭಾಗದಲ್ಲೇ ಸಂಚರಿಸುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ‘ಆನೆ ಧಾಮ’ ನಿರ್ಮಾಣದ ಯೋಜನೆ ಕೈಗೊಳ್ಳಲಾಗಿದೆ. ಮಾನವ ಜೀವ ಅತ್ಯಮೂಲ್ಯವಾಗಿರುವುದರಿಂದ ಅದರ ಸಂರಕ್ಷಣೆ ಜೊತೆಗೆ ವನ್ಯಜೀವಿಗಳ ರಕ್ಷಣೆಯನ್ನೂ ಸಮನ್ವಯದಿಂದ ಮಾಡಲಾಗುತ್ತಿದೆ. ಅರ್ಜುನ ಆನೆಯ ಸ್ಮರಣಾರ್ಥವಾಗಿ ಪ್ರತಿಷ್ಠಿತ ಪ್ರಶಸ್ತಿ ಘೋಷಿಸಲಾಗಿದ್ದು, ಭೀಮ ಆನೆಯ ಕಾರ್ಯಾಚರಣೆಯಲ್ಲಿ ಪುಂಡ ಆನೆಗಳನ್ನು ಹಿಡಿಯುವಲ್ಲಿ ಯಶಸ್ವಿಯಾದ ಮಾವುತ ನಂಜುಂಡಸ್ವಾಮಿ ಹಾಗೂ ಕಾವಾಡಿಗ ಗುಂಡೆಗೆ ಪ್ರಶಸ್ತಿ ನೀಡಲಾಗಿದೆ. ಮುಂದುವರೆಯುವಂತೆ ಈ ಪ್ರಶಸ್ತಿಯನ್ನು ಮುಂದುವರಿಸಲಾಗುತ್ತದೆ. ಮುಂಚೂಣಿ ಸಿಬ್ಬಂದಿಗಳಾದ ಮಾವುತರು ಮತ್ತು ಕಾವಾಡಿಗರ ಸಾಹಸವನ್ನು ಗುರುತಿಸಿ ಗೌರವಿಸುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.
ಸ್ಮಾರಕದ ಸುತ್ತ ಸುರಕ್ಷತೆ ದೃಷ್ಟಿಯಿಂದ ಸುತ್ತುಗೋಡೆ, ಟೆಂಟಕಲ್ ಫೆನ್ಸಿಂಗ್ ಮತ್ತು ಅಗತ್ಯವಿದ್ದರೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರವಾಸಿಗರಿಗೆ ಯಾವುದೇ ಅಪಾಯವಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರು ಮತ್ತು ರೈತರು ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕು. ಹಾಗೆಯೇ, ಸಾಫ್ಟ್ ರಿಲೀಸ್ ಸೆಂಟರ್ ಸ್ಥಾಪನೆಗಾಗಿ ಕೇಂದ್ರದಿಂದ ಅನುಮತಿ ದೊರಕದ ಹಿನ್ನೆಲೆಯಲ್ಲಿ, ರಾಜ್ಯ ವ್ಯಾಪ್ತಿಯಲ್ಲಿ ಹೊಸ ಯೋಜನೆ ರೂಪಿಸಲಾಗುತ್ತಿದೆ. ವಿಸ್ತೃತ ವರದಿ ಸಿದ್ಧವಾಗುತ್ತಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ ಚಿಕ್ಕಮಗಳೂರು | ಅಂಚೆ ಮತ ಏಣಿಕೆ: ನಾಲ್ವರ ಮೇಲೆ FIR ವಿಚಾರಣೆ ಮುಂದೂಡಿಕೆ
ಈ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಕೃಷ್ಣ ಬೈರೇಗೌಡ, ಶಾಸಕ ಶಿವಲಿಂಗೇಗೌಡ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಮುರುಳಿ ಮೋಹನ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.




