“ಶರಣ ಪರಂಪರೆಯ ಜೀವಕಾರಣ್ಯ, ಮಾನವೀಯತೆ, ಕಾಯಕ ಮತ್ತು ದಾಸೋಹದ ಮೌಲ್ಯಗಳನ್ನು ಸಗರನಾಡಿನಲ್ಲಿ ಬಿತ್ತಿದ ಚರಬಸವೇಶ್ವರರು ಶ್ರೇಷ್ಠ ಕಾಯಕಯೋಗಿ ಹಾಗೂ ಆಧ್ಯಾತ್ಮಿಕ ಚೇತನರಾಗಿದ್ದಾರೆ” ಎಂದು ಡಾ. ಜ್ಯೋತಿಲತಾ ತಡಿಬಿಡಿಮಠ ಹೇಳಿದರು.
ನಗರದ ಸರ್ಕಾರಿ ಕನ್ಯಾ ಪದವಿಪೂರ್ವ ಕಾಲೇಜಿನಲ್ಲಿ ಶಹಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ‘ಕಾಲೇಜು ಅಂಗಳದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚಿಂತನೆ’ ಕಾರ್ಯಕ್ರಮದಲ್ಲಿ ‘ಕಾಯಕಯೋಗಿ, ಆಧ್ಯಾತ್ಮಿಕ ಚೇತನ ಚರಬಸವೇಶ್ವರರು’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, “ಚರಬಸವೇಶ್ವರರು ಬಡವ-ಬಲ್ಲಿದರೆನ್ನದೆ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತು ಭಕ್ತರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದರು. ತಮ್ಮ ಕಾಯಕನಿಷ್ಠೆ, ಸರಳ ಜೀವನ ಹಾಗೂ ಪರೋಪಕಾರದ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದರು” ಎಂದು ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ವೇದಮೂರ್ತಿ ಪೂಜ್ಯ ಬಸವಯ್ಯ ಶರಣರು ಮಾತನಾಡಿ, “ಚರಬಸವೇಶ್ವರರು ‘ಸರ್ವವೂ ಶಿವಾರ್ಪಣಮಸ್ತು’ ಎಂಬ ಭಾವನೆಯೊಂದಿಗೆ ನಡೆ, ನುಡಿ ಮತ್ತು ನಂಬಿಕೆಗಳ ತ್ರಿವೇಣಿ ಸಂಗಮವಾಗಿದ್ದರು. ಭಕ್ತರ ಬದುಕಿನ ಸಾರ್ಥಕತೆ ಹಾಗೂ ಒಳಿತಿಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡಿದ್ದರು” ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಪ್ರಾಚಾರ್ಯ ವೈ.ಎಚ್. ವಜ್ಜಲ್ ಅವರು ಸಗರನಾಡಿಗೆ ಚರಬಸವೇಶ್ವರ ಗದ್ದುಗೆ ಸಂಸ್ಥಾನದ ಕೊಡುಗೆಯನ್ನು ಸ್ಮರಿಸಿದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರವೀಂದ್ರನಾಥ ಹೊಸಮನಿ ಮಾತನಾಡಿ, “ಚರಬಸವೇಶ್ವರ ತಾತನವರು ಅನ್ನದಾಸೋಹ, ಕಾಯಕದಾಸೋಹ ಮತ್ತು ಆಧ್ಯಾತ್ಮಿಕ ದಾಸೋಹದ ಮೂಲಕ ‘ಕಾಯಕವೇ ಕೈಲಾಸ’ ಎಂಬ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಪ್ರಥಮ ಬಾರಿಗೆ ಅನ್ನದಾಸೋಹ ಆರಂಭಿಸಿದ ಹೆಗ್ಗಳಿಕೆ ಅವರದ್ದಾಗಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಇಸ್ಪೀಟ್ ಜೂಜಾಟದ ಅಡ್ಡೆ ಮೇಲೆ ಪೊಲೀಸರ ದಾಳಿ; 7 ಮಂದಿ ಬಂಧನ, ₹3,150 ಜಪ್ತಿ
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸುರೇಶಬಾಬು ಅರುಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸಾಹಿತಿ ಗುರುಬಸಯ್ಯ ಗದ್ದುಗೆ, ವಿಶ್ರಾಂತ ಮುಖ್ಯಗುರು ವಿಶ್ವನಾಥ ಗದ್ದುಗೆ, ಮಹಮ್ಮದ್ ಮಷಾಕ್, ಕವಿ ಈರಣ್ಣ ಸಾಹಿತ್ಯಗಾರ ಬೀರನೂರ, ಉಪನ್ಯಾಸಕರಾದ ನಾಗವೇಣಿ ಗೋಗಿ, ರಾಜೇಶ್ವರಿ ಅನವಾರ, ಈರಣ್ಣ ಕೊಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.





