ಪ್ರಜಾಪ್ರಭುತ್ವ ಭಾರತದಲ್ಲಿ ಜನರ ಅತ್ಯಂತ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುತ್ತಿರುವ ಚುನಾವಣಾ ಆಯೋಗದ ದೋಷಪೂರಿತ SIR (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಕೇಂದ್ರ ಸರ್ಕಾರದ ಆಡಳಿತ ಪಕ್ಷದ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಶುಕ್ರವಾರ (ಅಕ್ಟೋಬರ್ 9) ನಗರದ ಹೇಮಾವತಿ ಪ್ರತಿಮೆ ಬಳಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI), ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಮತ್ತು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (AIDSO) ನೇತೃತ್ವದಲ್ಲಿ ನಗರದ ಹೇಮಾವತಿ ಪ್ರತಿಮೆ ಬಳಿ ನೂರಾರು ವಿದ್ಯಾರ್ಥಿಗಳು ಮತ್ತು ಯುವಜನರು, ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಒಂದು ಕಾಲದಲ್ಲಿ ಟಿ.ಎನ್. ಶೇಷನ್ ಅವರಂತಹ ದಿಟ್ಟ ಅಧಿಕಾರಿಗಳಿಂದ ಜಗತ್ತಿನಲ್ಲೇ ಅತ್ಯುನ್ನತ ಗೌರವ ಹೊಂದಿದ್ದ ಸ್ವತಂತ್ರ ಚುನಾವಣಾ ಆಯೋಗವು ಇವತ್ತು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿಯಾಗಿ ಬದಲಾಗಿದ್ದು, ಇಡೀ ಆಯೋಗ ಇಂದು ಆರ್.ಎಸ್.ಎಸ್, ಬಿಜೆಪಿ ಹಾಗೂ ಮೋದಿ-ಅಮಿತ್ ಶಾ ಜೋಡಿಯ ಕೈಗೊಂಬೆಯಾಗಿ ಇಡೀ ದೇಶದ ಜನತೆಯ ಹಕ್ಕುಗಳನ್ನು ಬುಡಮೇಲು ಮಾಡಲು ಹೊರಟಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ಪ್ರಮುಖರು, ಈ ಹಿಂದೆ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಬಂದು ಅತ್ಯಂತ ಪಾರದರ್ಶಕವಾಗಿ ಮತದಾರರನ್ನು ಪರಿಶೀಲಿಸಿ ಸೇರಿಸುತ್ತಿದ್ದರು. ಆದರೆ ಇಂದು ಜಾರಿಗೆ ಬಂದಿರುವ ಈ SIR ಪ್ರಕ್ರಿಯೆಯ ಹೆಸರಿನಲ್ಲಿ ಇಡೀ ದೇಶಾದ್ಯಂತ ಕರಡು ಪಟ್ಟಿಯಿಂದ ಬರೋಬ್ಬರಿ 13 ಕೋಟಿಗೂ ಹೆಚ್ಚು ಮತದಾರರನ್ನು ಯಾವುದೇ ಮುನ್ಸೂಚನೆ ಇಲ್ಲದೆ ರಹಸ್ಯವಾಗಿ ಹೊರದಬ್ಬಲಾಗಿದೆ. ನಮ್ಮ ಕರ್ನಾಟಕದಲ್ಲಿ 1.07 ಕೋಟಿ ಮತಗಳು ನಾಪತ್ತೆಯಾಗಿದ್ದರೆ, ಹಾಸನ ಜಿಲ್ಲೆಯೊಂದರಲ್ಲೇ ಬರೋಬ್ಬರಿ 1,67,285 ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ಅಳಿಸಿಹಾಕಲಾಗಿದೆ. ಇದರಲ್ಲಿ ಹಾಸನ ಕ್ಷೇತ್ರ ಒಂದರಲ್ಲೇ 47,000 ಕ್ಕೂ ಹೆಚ್ಚು ನಾಗರಿಕರ ಧ್ವನಿಯನ್ನು ಅಡಗಿಸಲಾಗಿದ್ದು, ಇದು ಬರೀ ಆಡಳಿತಾತ್ಮಕ ಲೋಪವಲ್ಲ, ಆಡಳಿತ ಪಕ್ಷಕ್ಕೆ ಚುನಾವಣೆಯಲ್ಲಿ ಲಾಭ ಮಾಡಿಕೊಡಲು ಹೆಣೆಯಲಾದ ವ್ಯವಸ್ಥಿತ ಪಿತೂರಿಯಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು. ಇದರಲ್ಲಿ ದೇಶದ ಪ್ರಮುಖ ನೀತಿಗಳನ್ನು ಪ್ರಶ್ನಿಸುವ ವಿರೋಧ ಪಕ್ಷದ ನಾಯಕರು, ನಾಗರಿಕ ಹಕ್ಕುಗಳ ಹೋರಾಟಗಾರರ ಮತಗಳನ್ನೇ ತೆಗೆದುಹಾಕಲಾಗಿದೆ.
ರಾಜ್ಯವಾರು ಕರಡು ಪಟ್ಟಿಗಳನ್ನು ಗಮನಿಸಿದರೆ ಉತ್ತರ ಪ್ರದೇಶದಲ್ಲಿ 2.89 ಕೋಟಿ, ಮಹಾ ರಾಷ್ಟ್ರದಲ್ಲಿ 2.06 ಕೋಟಿ, ತಮಿಳುನಾಡಿನಲ್ಲಿ 97.3 ಲಕ್ಷ ಮತ್ತು ಪಶ್ಚಿಮ ಬಂಗಾಳದಲ್ಲಿ 93 ಲಕ್ಷ ಮತದಾರರನ್ನು ಕೈಬಿಡಲಾಗಿದೆ. ರಾಜಧಾನಿ ದೆಹಲಿಯಲ್ಲಂತೂ ಒಟ್ಟು ಮತದಾರರ ಪೈಕಿ ಸುಮಾರು ಶೇ. 32.78ರಷ್ಟು (47.56 ಲಕ್ಷ) ಜನರನ್ನು ಹೊರದಬ್ಬುವ ಮೂಲಕ ಮೂರನೇ ಒಂದು ಭಾಗದಷ್ಟು ಜನರ ಮತದಾನದ ಹಕ್ಕನ್ನೇ ಇಲ್ಲದಂತೆ ಮಾಡಲಾಗಿದೆ. ಈ ಮಹಾ ಹಗರಣದಲ್ಲಿ ಬಿಜೆಪಿ-ಆರ್.ಎಸ್.ಎಸ್ ಕಾರ್ಯಕರ್ತರು ತಮಗೆ ಬೇಡದ ಮತಗಳನ್ನು ತೆಗೆಯಲು ಫಾರ್ಮ್ ನಂ 7 (Form 7) ಅನ್ನು ಭೀಕರವಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಕಚೇರಿಗಳಲ್ಲಿ ಸಾವಿರಾರು ಪ್ರಿ-ಪ್ರಿಂಟೆಡ್ ಫಾರ್ಮ್-7 ಅರ್ಜಿಗಳನ್ನು ಸಿದ್ಧಪಡಿಸಿ, ಒಂದೇ ಬೂತ್ನಲ್ಲಿ ನೂರಾರು ಬಡವರ, ಮುಸ್ಲಿಮರ, ದಲಿತರ ಹಾಗೂ ಆದಿವಾಸಿಗಳ ಹೆಸರುಗಳನ್ನು ತೆಗೆಯಲು ನಕಲಿ ಸಹಿಗಳನ್ನು ಸೃಷ್ಟಿಸಿ (Forged Signatures) ಅರ್ಜಿ ಸಲ್ಲಿಸುವ ಮೂಲಕ ಮತಗಳ ಮಾರಣಹೋಮ ನಡೆಸಲಾಗುತ್ತಿದೆ. ಹೊಸ ನಿಯಮದ ಪ್ರಕಾರ ವೋಟ್ ಮರುಸೇರ್ಪಡೆ ಮಾಡಲು ಹೋದರೆ, ‘ನಾನು ಹಿಂದೆ ಎಂದೂ ವೋಟ್ ಮಾಡಿಲ್ಲ’ ಎಂದು सुಳ್ಳು ಪ್ರಮಾಣ ಪತ್ರ ನೀಡಬೇಕಾದ ನರಕಯಾತನೆಯನ್ನು ಜನಸಾಮಾನ್ಯರಿಗೆ ಸೃಷ್ಟಿಸಲಾಗಿದೆ. ಹಾಸನ ಜಿಲ್ಲೆಯಲ್ಲಿ ಸುಮಾರು 80,000 ಕ್ಕೂ ಹೆಚ್ಚು ನಾಗರಿಕರಿಗೆ ತಾಂತ್ರಿಕ ನೆಪ ಒಡ್ಡಿ ನೋಟಿಸ್ ನೀಡಿ, ತಾಂತ್ರಿಕ ಕಂದಕದ ಕಾರಣದಿಂದಾಗಿ ಬಡವರು ಮಾಹಿತಿ ಸಿಗದೆ ಕಚೇರಿಗಳಿಗೆ ಅಲೆಯುವಂತೆ ನರಕಯಾತನೆ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ SIR ಪ್ರಕ್ರಿಯೆಯು ಎಷ್ಟು ದೋಷಪೂರಿತವಾಗಿದೆ ಎಂದರೆ, ಸ್ವತಃ ಚುನಾವಣಾ ಆಯೋಗದ ಇಬ್ಬರು ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಷಿ ಅವರೇ ಇದರ ವಿರುದ್ಧ 14 ಬಾರಿ ಲಿಖಿತ ಆಕ್ಷೇಪಣೆ ಎತ್ತಿದ್ದಾರೆ ಹಾಗೂ ಸುಪ್ರೀಂ ಕೋರ್ಟ್ನ ಗೌರವಾನ್ವಿತ ಜಸ್ಟಿಸ್ ಉಜ್ಜಲ್ ಭುಯಾನ್ ಅವರೂ ಸಹ ಈ ಪ್ರಕ್ರಿಯೆಯನ್ನು ಸಂವಿಧಾನ ವಿರೋಧಿ ಮತ್ತು ಅನಿಯಂತ್ರಿತ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಆದರೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಮೋದಿ-ಅಮಿತ್ ಶಾ ಜೋಡಿಯ ಆಜ್ಞೆಯಂತೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ.
ದೆಹಲಿಯ ಜಂತರ್ ಮಂತರ್ ಸೇರಿದಂತೆ ದೇಶಾದ್ಯಂತ ವಿದ್ಯಾರ್ಥಿ-ಯುವಜನರ ಮೇಲೆ ಪೊಲೀಸರನ್ನು ಬಿಟ್ಟು ಲಾಠಿ ಪ್ರಹಾರ ನಡೆಸಿ, ತಲೆ ಒಡೆದು, ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಿ ಭೀಕರ ಖಾಕಿ ದಬ್ಬಾಳಿಕೆ ನಡೆಸಲಾಗುತ್ತಿದೆ. ಆದರೆ ಪೊಲೀಸರ ಲಾಠಿ ಪ್ರಹಾರಕ್ಕಾಗಲಿ, ಅಕ್ರಮ ಬಂಧನಗಳಿಗಾಗಲಿ ಈ ದೇಶದ ಯುವಶಕ್ತಿ ಹೆದರುವುದಿಲ್ಲ, ಜಂತರ್ ಮಂತರ್ನಿಂದ ಹತ್ತಿರುವ ಈ ಕ್ರಾಂತಿಕಾರಿ ಕಿಚ್ಚು ಇಡೀ ದೇಶವನ್ನು ವ್ಯಾಪಿಸಲಿದೆ ಎಂದು ಎಚ್ಚರಿಸಿದರು.
ಬಿಜೆಪಿ-ಆರ್.ಎಸ್.ಎಸ್ ಕೈಗೊಂಬೆಯಾಗಿ ಇಡೀ ದೇಶದ ಜನರ ಮತ ಕದಿಯುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ತಕ್ಷಣದ ವಜಾ, ದೋಷಪೂರಿತ SIR ಪ್ರಕ್ರಿಯೆಯ ಸಂಪೂರ್ಣ ರದ್ಧತಿ, ನಕಲಿ ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಿ ಮತಗಳನ್ನು ಅಳಿಸಲು ಸಂಚು ರೂಪಿಸಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದು ಹಾಗೂ ಹಾಸನ ಜಿಲ್ಲೆಯ 1.67 ಲಕ್ಷ ಮತದಾರರು ಸೇರಿದಂತೆ ದೇಶದ ಎಲ್ಲಾ ಅಕ್ರಮವಾಗಿ ಡಿಲೀಟ್ ಮಾಡಲಾದ ನಾಗರಿಕರ ಹೆಸರುಗಳ ತಕ್ಷಣದ ಮರುಸೇರ್ಪಡೆಗೆ ಒತ್ತಾಯಿಸಲಾಯಿತು.
ಇದನ್ನೂ ಓದಿದ್ದೀರಾ?ಹಾಸನ | ಕುಡಿದ ಮತ್ತಿನಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಈ ವೇಳೆ ಡಿವೈಎಫ್ಐ ಜಿಲ್ಲಾ ಸಂಚಾಲಕ ಪೃಥ್ವಿ ಎಂಜಿ, ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ರಮೇಶ್, ಎಐಡಿಎಸ್ಓ ಜಿಲ್ಲಾಧ್ಯಕ್ಷೆ ಚೈತ್ರಾ, ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಸಿಐಟಿಯು ಜಿಲ್ಲಾಧ್ಯಕ್ಷರಾದ ಧರ್ಮೇಶ್, ದಲಿತ ಮುಖಂಡ ಟಿ.ಆರ್ ವಿಜಯ್ ಕುಮಾರ್, ಪ್ರತಿಭಟನೆಯನ್ನು ಬೆಂಬಲಿಸಿ ಮಾತನಾಡಿದರು. AIDSO ಜಿಲ್ಲಾ ಕಾರ್ಯದರ್ಶಿ ಸುಷ್ಮಾ, DYFI ಮುಖಂಡ ಪ್ರದೀಪ್, ಲೋಕೇಶ್, SFI ಮೇಘನಾ ಸೇರಿದಂತೆ ಸಂಘಟನೆಗಳ ಪದಾಧಿಕಾರಿಗಳು, ನೂರಾರು ವಿದ್ಯಾರ್ಥಿಗಳು, ಯುವಜನರು ಹಾಗೂ ಪ್ರಗತಿಪರ ಚಿಂತಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.




