ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದ ಆತಂಕಕ್ಕೊಳಗಾಗಿದ್ದ ಗ್ರಾಮಸ್ಥರ ಸಮಸ್ಯೆಗೆ ಅರಣ್ಯ ಇಲಾಖೆ ತಕ್ಷಣ ಸ್ಪಂದಿಸಿದ್ದಾರೆ.
ಕಳೆದ ರಾತ್ರಿ ಸುಮಾರು 13 ಕಾಡಾನೆಗಳು ಗ್ರಾಮದ ಸುತ್ತಮುತ್ತ ಸಂಚರಿಸಿದ್ದು, ಮನೆಗಳ ಸಮೀಪ ಬಂದ ಆನೆಗಳು ಮೋನಿಕಾ ಹೇಮಂತ್ ಅವರ ಮನೆಯ ಬಳಿಯ ತೆಂಗಿನ ಮರವನ್ನು ಮುರಿದು ಹಾಕಿದ್ದವು. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿದ್ದೀರಾ?ಹಾಸನ | ಅಕ್ರಮ ಭೂ ಮಂಜೂರಾತಿ ಮಾಜಿ ಶಾಸಕ ಬಂಧನ
ನಂತರ ಬೆಳಗೋಡು ಅರಣ್ಯ ವಲಯದ ಮಂಜುನಾಥ್ ಅವರು ಮಧ್ಯಾಹ್ನ ಸ್ಥಳಕ್ಕೆ ಆಗಮಿಸಿ, ಹಾನಿಗೊಳಗಾದ ಸ್ಥಳವನ್ನು ಪರಿಶೀಲಿಸಿ, ಮುರಿದು ಬಿದ್ದ ತೆಂಗಿನ ಮರದ ವಿವರಗಳನ್ನು ಜಿಪಿಆರ್‌ಎಸ್ ಮೂಲಕ ದಾಖಲಿಸಿಕೊಂಡರು. ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೆಬ್ಬನಹಳ್ಳಿ ಗ್ರಾಮಸ್ಥರು ಧನ್ಯವಾದಗಳನ್ನು ತಿಳಿಸಿದ್ದು, ಜನರ ಸುರಕ್ಷತೆಗೆ ಕೈಗೊಂಡ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳ ನಿಯಂತ್ರಣಕ್ಕೆ ಇಲಾಖೆ ಮುಂದಿನ ದಿನಗಳಲ್ಲಿಯೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.




