ಪದವೀಧರರ ಪಶ್ಚಿಮ ಮತಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯಿಂದ ನಕಲಿ ಮತದಾನ ಮಾಡಲಾಗಿದೆ. ಈ ಬಗ್ಗೆ ಚುನಾವಣಾ ಅಧಿಕಾರಿಗೆ ದೂರು ನೀಡಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಪ್ರಸನ್ನ ಹಿರೇಮಠ ಆರೋಪಿಸಿದ್ದಾರೆ. ಹಾವೇರಿ ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯು ನಕಲಿ ಮತದಾನದ ಮೂಲಕ ಗೆಲುವು ಸಾಧಿಸಲು ಪ್ರಯತ್ನಿಸುತ್ತಿದೆ ಇದು ಕಳ್ಳ ಮಾರ್ಗ ಎಂದು ಕಿಡಿಕಾರಿದರು.
‘ಬಿಜೆಪಿ ಮುಖಂಡ ನಾಗರಾಜ ಹರಿಗೋಲ ಅವರ ಮಕ್ಕಳಾದ ಐಶ್ವರ್ಯ ಹಾಗೂ ವರ್ಷಾ ಬೆಂಗಳೂರಿನಲ್ಲಿದ್ದಾರೆ. ಇನ್ನೊಬ್ಬ ಬಿಜೆಪಿ ಮುಖಂಡ ಶಿವಬಸಪ್ಪ ವನಹಳ್ಳಿ ಅವರ ಮಗಳು ಕೀರ್ತಿ ಅವರು ಬೆಂಗಳೂರಿನಲ್ಲಿದ್ದಾರೆ. ಮೂವರು ಮಕ್ಕಳು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಅ. 23ರಂದು ಮತದಾನಕ್ಕೆ ಬಂದಿಲ್ಲ. ಆದರೂ ಇವರ ಹೆಸರಿನಲ್ಲಿ ನಕಲಿ ಮತದಾನ ಆಗಿದೆ’ ಎಂದು ದೂರಿದರು.
‘ಮೂವರು ಕಂಪನಿಯಲ್ಲಿ ಕೆಲಸಕ್ಕೆ ಹೋಗಿದ್ದರು ಎಂಬುದಕ್ಕೆ ಕಚೇರಿಯಿಂದ ಹಾಜರಾತಿ ಮಾಹಿತಿ ಪಡೆತಲಾಗುತ್ತಿದೆ. ಜೊತೆಗೆ, ಮತಗಟ್ಟೆಯ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿ ಪಡೆಯಲು ಜಿಲ್ಲಾ ಚುನಾವಣಾ ಅಧಿಕಾರಿಗೆ ಅರ್ಜಿ ಸಲ್ಲಿಸಲಾಗುವುದು’ ಎಂದರು.







