ಹಾವೇರಿ ಜಿಲ್ಲೆಯ ಶಾಸಕರು ಮೋಡ ಬಿತ್ತನೆ(Cloud Seeding) ಕಾರ್ಯಕ್ಕೆ ಮುಂದಾಗಿರುವುದು ಸಕಾಲಿಕ ನಿರ್ಧಾರವಾಗಿದೆ. ಆದರೆ ಇದು ತಾತ್ಕಾಲಿಕ ಪರಿಹಾರ ಮಾತ್ರ. ದೀರ್ಘಕಾಲಿಕವಾಗಿ ಕೃಷಿ ಉಳಿಸುವ ಸಲುವಾಗಿ ನೀರಾವರಿ ಸೌಲಭ್ಯಗಳ ವಿಸ್ತರಣೆ, ಮಳೆ ನೀರಿನ ಸಂರಕ್ಷಣೆ, ಒಣ ಬೇಸಾಯ ಪದ್ಧತಿಗಳನ್ನು ಪ್ರೋತ್ಸಾಹಿಸುವುದು ಮತ್ತು ರೈತರಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ಒದಗಿಸುವುದು ಅತ್ಯಗತ್ಯವಾಗಿದೆ.
ಹಾವೇರಿ ಕೃಷಿ ಪ್ರಧಾನ ಜಿಲ್ಲೆ. ಜಿಲ್ಲೆಯ ರೈತರು ಹೆಚ್ಚು ಕೃಷಿ ಭೂಮಿಯನ್ನೇ ಅವಲಂಬಿಸಿದ್ದಾರೆ. ಮುಂಗಾರು ಮಳೆ ಆರಂಭದಿಂದಲೂ ತೀವ್ರ ಮಳೆ ಕೊರತೆ ಉಂಟಾಗಿದ್ದು, ಶೇ.55.13ರಷ್ಟು ಮಳೆ ಕೊರತೆ ಇದ್ದು, ರೈತರಲ್ಲಿ ಆತಂಕ ಮೂಡಿಸಿದೆ. ಜೂನ್ ತಿಂಗಳುದ್ದಕ್ಕೂ ಮೋಡ ಕವಿದ ವಾತಾವರಣ ಇದ್ದರೂ ಮಳೆಯಾಗದೇ ಹೊಲದಲ್ಲಿ ಬಿತ್ತಿದ ಬೆಳೆ ರೈತನ ಕಣ್ಣ ಮುಂದೆಯೇ ಬಾಡುತ್ತಿರುವುದು ನೋವಿನ ಸಂಗತಿಯಾಗಿದೆ. ಇದರಿಂದ ಜಿಲ್ಲೆಯ ಶಾಸಕರು ಮೋಡ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ.
ಮೋಡ ಬಿತ್ತನೆ ಕಾರ್ಯ
ಜೂನ್ ತಿಂಗಳು ಮುಂಗಾರು ಮಳೆ ಕೊರತೆ ಉಂಟಾಗಿದ್ದರಿಂದ ಬಿತ್ತದ ಬೆಳೆಗಳು ಚೈತನ್ಯದಿಂದ ಬೆಳೆಯಲಾಗದೇ ರೈತರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಶಾಸಕರ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ ಕಾರ್ಯ ನಡೆಸಲಾಗುತ್ತಿದೆ. ಜಿಲ್ಲೆಯ ಆರು ಶಾಸಕರು ಒಗ್ಗೂಡಿ ಮೋಡ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ. ಜುಲೈ 7ರಿಂದ 3 ದಿನಗಳ ಕಾಲ ಮೋಡ ಬಿತ್ತನೆ ಕಾರ್ಯ ನಡೆಯಲಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ರಾಣೆಬೆನ್ನೂರು ಶಾಸಕ ಪ್ರಕಾಶ್, “ಕೋಳಿವಾಡರ ಮಾಲೀಕತ್ವದ ವಿಶೇಷ ವಿಮಾನದಿಂದ ಮೋಡ ಬಿತ್ತನೆ ಕಾರ್ಯ ನಡೆಸಲಾಗುತ್ತದೆ. ಮಂಗಳವಾರದಿಂದ ಮೋಡ ಬಿತ್ತನೆ ಮಾಡಲಿದ್ದು, ಗಂಟೆಗೆ 15 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಈ ವೆಚ್ಚವನ್ನು ಹಾವೇರಿ ಜಿಲ್ಲೆಯ ಶಾಸಕರು ಭರಿಸಲಿದ್ದಾರೆ” ಎಂದು ತಿಳಿಸಿದ್ದಾರೆ.
ರೈತರು ಮುಂಗಾರಿನ ಆರಂಭದಲ್ಲಿ ಹೊಲವನ್ನು ಹಸನುಗೊಳಿಸಿ, ಸಾಲ ಮಾಡಿ ಬಿತ್ತನೆಬೀಜ, ರಸಗೊಬ್ಬರ ತಂದು ಹೊಲದಲ್ಲಿ ಬಿತ್ತಿ ಆಕಾಶದ ಕಡೆ ಮುಖ ಮಾಡಿ ಮಳೆ ಇಂದು ಆಗುತ್ತದೆಯೋ, ನಾಳೆ ಆಗುತ್ತದೇಯೋ ಎಂದು ದಿಟ್ಟಿಸುತ್ತ, ಮೋಡ ಕವಿದ ವಾತಾವರಣ ಕಂಡು ಮಳೆಯಾಗುವ ಭರವಸೆಯಲ್ಲಿದ್ದರೆ, ಮುಂಗಾರು ಮಳೆ ಬೀಳದೆ ಆ ಭರವಸೆಯನ್ನು ಹುಸಿಗೊಳಿಸಿದೆ. ಹಾವೇರಿ ಜಿಲ್ಲೆಯ ರೈತರು ಬಿತ್ತಿದ ಬೆಳೆಯ ಕಡೆ ಒಮ್ಮೆ, ಮುಗಿಲಿನ ಕಡೆ ಒಮ್ಮೆ ನೋಡುವಂತಹ ಪರಿಸ್ಥಿತಿ ಬಂದೊದಗಿದೆ.
ಹಾವೇರಿ ಜಿಲ್ಲೆಯಲ್ಲಿ ಶೇ 91.2ರಷ್ಟು ಬಿತ್ತನೆ ಕಾರ್ಯ ಮುಗಿದಿದೆ. ಮಳೆಯಾಶ್ರಿತ ಬೆಳೆಗಳು ಮಳೆ ಇಲ್ಲದೇ ಬಿಸಿಲಿಗೆ ಒಣಗಿ, ಬಾಡುತ್ತಿವೆ. ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಜಿಲ್ಲೆಯಲ್ಲಿ ಅತಿ ಹೆಚ್ವು ಗೋವಿನ ಜೋಳ ಹಾಗೂ ಸೊಯಾಬೀನ್ ಬಿತ್ತನೆ ಮಾಡಲಾಗಿದ್ದು, ಮಳೆ ಕೊರತೆಯಿಂದ ಬೆಳೆಗಳು ಮೇಲೆಳಲೂ ಆಗದೆ ಬಳಲುತ್ತಿವೆ.
ಜಿಲ್ಲೆಯಲ್ಲಿ ಜೂನ್ 1ರಿಂದ ಜುಲೈ 4ರವರೆಗೆ 140ಮಿ.ಮಿ ವಾಡಿಕೆ ಮಳೆ ಆಗಬೇಕಿತ್ತು. ಆದರೆ ವಾಸ್ತವವಾಗಿ 63ಮಿ.ಮೀ ಮಳೆಯಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವಾಸ್ತವವಾಗಿ ಬ್ಯಾಡಗಿ 67.06, ಹಾನಗಲ್ 87.72, ಹಾವೇರಿ 62.35, ಹಿರೆಕೇರೂರು 56.68, ಸವಣೂರು 39.11, ಶಿಗ್ಗಾವಿ 64.76, ರಟ್ಟಿಹಳ್ಳಿ 36.59 ವಾಸ್ತವ ಮಳೆಯಾಗಿದೆ. ವಾಡಿಕೆಯಷ್ಟು ಮಳೆಯಾಗದೇ ಇರುವ ತಾಲೂಕು ಗ್ರಾಮಗಳಲ್ಲಿ ಬಾಡಿದ ಬೆಳೆಗಳನ್ನು ಹರಗಿ ನಾಶ ಮಾಡಿರುವ ಸಂಗತಿಗಳನ್ನೂ ಕಾಣಬಹುದು.
ಜಿಲ್ಲಾ ಕೃಷಿ ಇಲಾಖೆ ಮಾಹಿತಿಯಂತೆ ಜಿಲ್ಲೆಯಲ್ಲಿ ಪ್ರಸಕ್ತ 2026-27 ಸಾಲಿನಲ್ಲಿ ಮುಂಗಾರು ಹಂಗಾಮಿಗೆ 3,28,956 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, 2,99,917 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಶೇ 91.17ರಷ್ಟು ಪ್ರಗತಿ ಸಾಧಿಸಿದೆ. ಜಿಲ್ಲೆಯಲ್ಲಿಯೇ ಹಾವೇರಿ ತಾಲೂಕಿನಲ್ಲಿ 54,953 ಹೆಕ್ಟೇರ್ ಪ್ರದೇಶ ಬಿತ್ತನೆ ಪ್ರಗತಿ ಸಾದಿಸಿದ್ದು, ಅತಿಹೆಚ್ಚು ಬಿತ್ತನೆಯಾದ ತಾಲೂಕು ಆಗಿದೆ.
ಜಿಲ್ಲೆಯಲ್ಲಿ 2,40,392 ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳ, 26,579 ಹೆಕ್ಟೇರ್ ಪ್ರದೇಶದಲ್ಲಿ ಸೊಯಾಬೀನ್, 11,084 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 5,639 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, 4,423 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, 4, 74 ಹೆಕ್ಟೇರ್ ಪ್ರದೇಶ ಕಬ್ಬು(ಕ) , 6,115 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು(ಊ) ಬೆಳೆಗಳನ್ನು ಬಿತ್ತನೆ ಮಾಡಲಾಗಿದ್ದು, ಜತೆಗೆ ಉಳಿದ ಪ್ರದೇಶದಲ್ಲಿಯೂ ಇತರೆ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ.
ಹೊಲ ಹದ ಮಾಡಿಕೊಂಡು ಮಳೆಗಾಗಿ ಕಾದ ರೈತರು ಇನ್ನೂ ತಮ್ಮ ಹೊಲಗಳಿಗೆ ಬಿತ್ತನೆ ಮಾಡದೇ ನಿರಾಶರಾಗಿದ್ದಾರೆ. ಜಿಲ್ಲೆಯ ಸವಣೂರು ತಾಲೂಕಿನ ಕಡಕೋಳ, ವಡ್ನಕೊಪ್ಪ, ಕೃಷ್ಣಾಪೂರ, ಹತ್ತಿಮತ್ತೂರು, ಕಳಿವಾಳ, ನದಿನೀರಲಗಿ, ಕೆ.ಬಿ ತಿಮ್ಮಾಪುರ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಲ್ಲಿ ಮಳೆ ಕೊರತೆಯಿಂದ ರೈತರು ಇನ್ನೂ ಬಿತ್ತನೆ ಕಾರ್ಯ ಕೈಗೊಂಡಿಲ್ಲ.
ಹಾವೇರಿ ಜಿಲ್ಲೆ ಬರಪಿಡೀತವೆಂದು ಘೋಷಿಸುವಂತೆ ಒತ್ತಾಯ
ಕಳೆದ ಎರಡು ತಿಂಗಳಿಂದ ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದೇ ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಜಿಲ್ಲೆಯಲ್ಲಿ ವಾಡಿಕೆಗಿಂತ ಮಳೆ ಕೊರತೆಯಾಗಿದ್ದು, ಬೆಳೆಗಳು ಬಾಡುತ್ತಿವೆ. ಹಾನಿ ಆಗುತ್ತಿವೆ. ರೈತರ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಹಾಗಾಗಿ ಜಿಲ್ಲೆಯನ್ನು ಬರಪಿಡೀತ ಪ್ರದೇಶವೆಂದು ಘೋಷನೆ ಮಾಡಬೇಕೆಂದು ರೈತ ಮುಖಂಡರು ಆಗ್ರಹಿಸುತ್ತಿದ್ದಾರೆ.
ಈ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಈ ದಿನ.ಕಾಮ್ ಜತೆಗೆ ಮಾತನಾಡಿ, “ಕಳೆದ ಎರಡು ತಿಂಗಳಿಂದ ಮಳೆ ಕೊರತೆಯಾಗಿದೆ. ಶೇ.55ರಷ್ಟು ಮಳೆ ಕೊರತೆ ಕಾಣುತ್ತದೆ. ಜಿಲ್ಲೆಯ ರೈತರು ತಮ್ಮ ಜಮೀನುಗಳಲ್ಲಿ ಬಿತ್ತಿದ ಬೆಳೆಗೆ ಮಳೆ ಇಲ್ಲದೆ ಬೆಳೆಗಳು ಒಣಗಿವೆ. ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಹಾಗಾಗಿ ಕೂಡಲೇ ಹಾವೇರಿ ಜಿಲ್ಲೆಯನ್ನು ಬರಪಿಡೀತ ಜಿಲ್ಲೆಯೆಂದು ಘೋಷಿಸಿ, ಪರಿಹಾರ ಕಾರ್ಯಗಳು ಆರಂಭವಾಗಬೇಕು. ರೈತನ ಪ್ರತಿ ಎಕರೆಗೆ ₹25,000 ಬೆಳೆ ಪರಿಹಾರ ನೀಡಬೇಕು. ಇದರಿಂದ ಹಿಂಗಾರು ಬಿತ್ತನೆಗೆ ಆರ್ಥಿಕವಾಗಿ ಅನುಕೂಲವಾಗಲಿದೆ” ಎಂದು ಹೇಳಿದರು.
ಇದನ್ನೂ ಓದಿದ್ದೀರಾ? ರಾಜ್ಯದಲ್ಲಿ ವಿಳಂಬದ ನಡುವೆಯೂ ಬಿರುಸು ಪಡೆದ ಮುಂಗಾರು: ನೀಗುವುದೇ ನೀರಿನ ಕೊರತೆ?
ಹಾವೇರಿ ಜಿಲ್ಲೆಯಲ್ಲಿ ಜೂನ್‌ನಿಂದಲೂ ನಿರಂತರ ಮೋಡ ಕವಿದ ವಾತಾವರಣವಿದ್ದರೂ ಮಳೆಯಿಲ್ಲದೆ, ಬಿತ್ತಿದ ಬೆಳೆಗಳು ಬಾಡುತ್ತಿರುವುದು ರೈತರ ಮುಖದ ಮೇಲೆ ಆತಂಕದ ನೆರಳು ಬೀರಿದೆ. ಈ ಬಾರಿ ಶೇ.55.13ರಷ್ಟು ಮುಂಗಾರು ಮಳೆ ಕೊರತೆಯಾಗಿರುವುದು ರೈತರ ಜೀವನಾಧಾರವಾದ ಕೃಷಿಯು ತೀವ್ರವಾಗಿ ಅನಾವೃಷ್ಟಿಗೊಳಗಾಗಿದೆ.
ಈ ಸಂಕಷ್ಟದ ನಡುವೆ ಹಾವೇರಿ ಜಿಲ್ಲೆಯ ಶಾಸಕರು ಮೋಡ ಬಿತ್ತನೆ(Cloud Seeding) ಕಾರ್ಯಕ್ಕೆ ಮುಂದಾಗಿರುವುದು ಸಕಾಲಿಕ ನಿರ್ಧಾರವಾಗಿದೆ. ಆದರೆ ಇದು ತಾತ್ಕಾಲಿಕ ಪರಿಹಾರ ಮಾತ್ರ. ದೀರ್ಘಕಾಲಿಕವಾಗಿ ಕೃಷಿ ಉಳಿಸುವ ಸಲುವಾಗಿ ನೀರಾವರಿ ಸೌಲಭ್ಯಗಳ ವಿಸ್ತರಣೆ, ಮಳೆ ನೀರಿನ ಸಂರಕ್ಷಣೆ, ಒಣ ಬೇಸಾಯ ಪದ್ಧತಿಗಳನ್ನು ಪ್ರೋತ್ಸಾಹಿಸುವುದು ಮತ್ತು ರೈತರಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ಒದಗಿಸುವುದು ಅತ್ಯಗತ್ಯವಾಗಿದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.



