ಈಗಾಗಲೇ ಮುಂಗಾರು ವಿಳಂಬದಿಂದ ಶೇ.50ರಷ್ಟು ಮಳೆ ಕೊರತೆಯಾಗಿದ್ದು, ರಾಜ್ಯಯದ ಬಹುತೇಕ ಜಲಾಶಯಗಳು ಬರಿದಾಗಿದ್ದವು. ಈಗ ಸುರಿಯುತ್ತಿರುವ ಮಳೆ ಮುಂದುವರೆದರೆ, ಕುಡಿಯುವ ನೀರಿನ ಆತಂಕವನ್ನು ಸ್ವಲ್ಪಮಟ್ಟಿಗೆ ನೀಗಿಸಿಕೊಳ್ಳಬಹುದು. ತುಂಗಾ ಭರ್ತಿಯಾಗಿದ್ದು, ಇತರೆ ಜಲಾಶಯಗಳಿಗೆ ಒಳಹರಿವು ಹೆಚ್ಚಿರುವುದು ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಧ್ಯಕ್ಕೆ ಭರವಸೆಯನ್ನುಂಟುಮಾಡಿದೆ.
ರಾಜ್ಯದಲ್ಲಿ ಸುಮಾರು ಶೇ.21ರಷ್ಟು ಮಳೆ ಕೊರತೆ ಎದುರಾಗಿದ್ದು, ರಾಜ್ಯದ 22 ಪ್ರಮುಖ ಜಲಾಶಯಗಳಲ್ಲಿ ಒಟ್ಟು ನೀರು ಸಂಗ್ರಹ ಸುಮಾರು ಶೇ.27.51 ಗ್ರಾಸ್ ಸಾಮರ್ಥ್ಯಕ್ಕೆ ಇಳಿದಿದ್ದು, ಜುಲೈ 1ರವರೆಗೆ ಕೇವಲ ಶೇ.12.27ರಷ್ಟು ನೀರು ಮಾತ್ರ ಸಂಗ್ರಹವಾಗಿತ್ತು. ಕೆಆರ್‌ಎಸ್(ಕೃಷ್ಣರಾಜ ಸಾಗರ), ಕಬಿನಿ, ಹಾರಂಗಿ, ಹೇಮಾವತಿ ಮುಂತಾದ ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಕೊರತೆಯಾಗಿರುವುದಾಗಿ ಕರ್ನಾಟಕ ವಾಟರ್ ರಿಸೋರ್ಸಸ್ ಇನ್ಫಾರ್ಮೇಷನ್ ಸಿಸ್ಟಮ್(KWRIS) ಮತ್ತು ಇತರ ಮೂಲಗಳು ದೃಢಪಡಿದ್ದವು. ಇದೀಗ ಮುಂಗಾರು ಕೊಂಚ ಚುರುಕಾಗಿದ್ದು, ಒಳಹರಿವು ಹೆಚ್ಚಾಗುವ ನಿರೀಕ್ಷೆ ಮೂಡಿಸಿದೆ.
ಕೆಆರ್‌ಎಸ್ ನೀರು ಏಪ್ರಿಲ್-ಮೇ ತಿಂಗಳಲ್ಲಿಯೇ 94 ಅಡಿ ಮಟ್ಟಕ್ಕೆ ಇಳಿದಿದ್ದು, ಇದು ದೀರ್ಘಕಾಲದ ಕನಿಷ್ಠ ಮಟ್ಟದ್ದಾಗಿತ್ತು. ಇದೇ ಮುಂದುವರೆದಿದ್ದರೆ ಬೆಂಗಳೂರು, ಮೈಸೂರು, ಮಂಡ್ಯ ಮುಂತಾದ ಪ್ರದೇಶಗಳ ಕುಡಿಯುವ ನೀರು ಪೂರೈಕೆಗೆ ನೇರ ಪರಿಣಾಮ ಬೀರುವುದರಲ್ಲಿ ಯಾವುದೇ ಅನುಮಾನ ಇರಲಿಲ್ಲ. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ನೀರು ಪೂರೈಕೆಯಲ್ಲಿ ಕಡಿತವಾಗುವ ಸಾಧ್ಯತೆ ಹೆಚ್ಚಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವ ಸ್ಥಿತಿ ಬಂದಿತ್ತು. ಉತ್ತರ ಕರ್ನಾಟಕದಲ್ಲಿ ಈಗಾಗಲೇ ನೀರಿನ ಹಾಹಾಕಾರ ಆರಂಭವಾಗಿದ್ದು, ಸರ್ಕಾರವು 7 ಜಿಲ್ಲೆಗಳಿಗೆ ₹5 ಕೋಟಿ ವಿಶೇಷ ಅನುದಾನ ನೀಡಿ ಕ್ರಮ ಕೈಗೊಳ್ಳುತ್ತಿದೆ ಎನ್ನಲಾಗಿತ್ತು.
ದುರ್ಬಲವಾದ ನೈಋತ್ಯ ಮುಂಗಾರಿನಿಂದ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಿಗೆ ಕೃಷಿ, ಕುಡಿವ ನೀರಿಗೆ ಮೂಲವಾದ ಕೃಷ್ಣಾ ನದಿ ಬರಿದಾಗುತ್ತಿತ್ತು. ಹಿಪ್ಪರಗಿ ಬ್ಯಾರೇಜ್‌ನಲ್ಲಿ ಕಡಿಮೆ ಪ್ರಮಾಣದ ನೀರು ಸಂಗ್ರಹವಿತ್ತು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಕಾಗವಾಡ, ಅಥಣಿ, ರಾಯಬಾಗ ಹಾಗೂ ಬಾಗಲಕೋಟೆ ಜಿಲ್ಲೆಯ ತೇರದಾಳ, ರಬಕವಿ-ಬನಹಟ್ಟಿ, ಜಮಖಂಡಿ ತಾಲೂಕುಗಳ ಅಪಾರ ಜಮೀನು ನೀರಾವರಿಗೆ ಬ್ಯಾರೇಜ್ ನೀರೇ ಮೂಲ. ಜನವರಿ ತಿಂಗಳಲ್ಲಿ ಬ್ಯಾರೇಜ್‌ನ ಗೇಟ್ ಮುರಿದ ಪರಿಣಾಮ 2 ಟಿಎಂಸಿ ನೀರು ಪೋಲಾಗಿತ್ತು. ಬ್ಯಾರೇಜ್ ಕೆಳ ಭಾಗದ ಚಿಕ್ಕಪಡಸಲಗಿಯ ಶ್ರಮಬಿಂದು ಬ್ಯಾರೇಜ್‌ನಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಇದರಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಗಂಭೀರ ನೀರಿನ ಬಿಕ್ಕಟ್ಟು ಎದುರಾಗಿತ್ತು.
ಇದೀಗ, ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ ಬರೋಬ್ಬರಿ 15 ಸಾವಿರ ಕ್ಯುಸೆಕ್ ನೀರು ಹರಿದುಬರುತ್ತಿದ್ದು, ಇದೀಗ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ನಲ್ಲಿ ಭಾನುವಾರ 30 ಸಾವಿರ ಕ್ಯುಸೆಕ್ ಒಳಹರಿವು ದಾಖಲಾಗಿದೆ. ಬ್ಯಾರೇಜ್‌ನ ಹತ್ತು ಗೇಟ್‌ಗಳ ಮೂಲಕ ನದಿಗೆ ನೀರು ಬಿಡಲಾಗಿದೆ. ಸೋಮವಾರ ಐವತ್ತು ಸಾವಿರ ಕ್ಯುಸೆಕ್‌ವರೆಗೆ ನೀರು ಹರಿದು ಬರುವುದಾಗಿ ತಿಳಿದುಬಂದಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿ ನದಿಯಲ್ಲಿ ನೀರಿನ ಹರಿವು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದರಿಂದಾಗಿ ರೈತರು ಮತ್ತು ಸಾರ್ವಜನಿಕರಲ್ಲಿ ಸಂತಸ ಉಂಟಾಗಿದ್ದು, ಸ್ಥಳೀಯರು, ಮತ್ತಷ್ಟು ಒಳಹರಿವು ಹೆಚ್ಚಾಗುವ ನಿರೀಕ್ಷೆಯಲ್ಲಿದ್ದಾರೆ.
ಘಟ್ಟ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಗಳಲ್ಲೂ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಭದ್ರಾ ಜಲಾಶಯದಲ್ಲಿ ಶನಿವಾರ 2,108 ಕ್ಯುಸೆಕ್‌ನಷ್ಟಿದ್ದ ಒಳಹರಿವಿನ ಪ್ರಮಾಣ ಭಾನುವಾರ 7,919 ಕ್ಯುಸೆಕ್‌ಗೆ ಏರಿಕೆಯಾಗಿತ್ತು. ಲಿಂಗನಮಕ್ಕಿಯಲ್ಲಿ 7,950 ಕ್ಯುಸೆಕ್‌ರಷ್ಟಿದ್ದ ಒಳಹರಿವು 15,376 ಕ್ಯುಸೆಕ್‌ಗೆ ಹೆಚ್ಚಳವಾಗಿತ್ತು. ಲಿಂಗನಮಕ್ಕಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ 137.4 ಎಂ.ಎಂ ಮಳೆ ಸುರಿದಿದೆ. ಆಗುಂಬೆಯಲ್ಲಿ 186.2 ಮಿ.ಮೀ., ಹುಲಿಕಲ್‌ನಲ್ಲಿ 170 ಮಿ.ಮೀ. ಮಳೆಯಾಗಿದೆ.
ಕೆಆರ್‌ಎಸ್, ತುಂಗಭದ್ರಾ, ಕಬಿನಿ, ಆಲಮಟ್ಟಿ ಸಹಿತ ಪ್ರಮುಖ ಜಲಾಶಯಗಳ ನೀರನ್ನು ಕುಡಿಯುವುದಕ್ಕೂ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಶೇ.35ರಿಂದ 40ರಷ್ಟು ನೀರನ್ನು ಕುಡಿಯುವುದಕ್ಕಾಗಿಯೇ ಮೀಸಲಾಡುತ್ತದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜಲಜೀವನ್ ಮಿಷನ್( ಜೆಜೆಎಂ) ಯೋಜನೆ ಜಾರಿಗೊಂಡ ನಂತರ ಜಲಾಶಯಗಳ ನೀರಿಗೆ ಬೇಡಿಕೆ ಹೆಚ್ಚಿದೆ. ನಗರ, ಪಟ್ಟಣಗಳಲ್ಲದೇ ಗ್ರಾಮಾಂತರ ಪ್ರದೇಶಗಳಿಗೂ ನೀರು ಒದಗಿಸುವುತ್ತಿರುವುದರಿಂದ ಅದಕ್ಕೂ ತೊಂದರೆಯಾಗಬಹುದು. ಮೊದಲೆಲ್ಲ ಜಲಾಶಯಗಳು ಎಂದರೆ ಕೃಷಿಗೆ ಮೀಸಲು ಎನ್ನುವ ಪರಿಕಲ್ಪನೆಯಿತ್ತು. ಇತ್ತೀಚಿನ ವರ್ಷಗಳಲ್ಲಿ ಶುದ್ದ ಕುಡಿಯುವ ನೀರಿನ ಪರಿಕಲ್ಪನೆ ಬೆಳೆದು, ಅಂತರ್ಜಲವೂ ತಗ್ಗುತ್ತಿರುವುದರಿಂದ ಜನರಿಗೆ ಜಲಾಶಯದಿಂದಲೇ ನೀರು ಒದಗಿಸಲಾಗುತ್ತಿದೆ. ಉದಾಹರಣೆಗೆ ಬೆಂಗಳೂರು, ಮೈಸೂರು, ಮಂಡ್ಯ ಸಹಿತ ಪ್ರಮುಖ ನಗರಗಳಿಗೆ ಕೆಆರ್‌ಎಸ್ ಜಲಾಶಯದಿಂದಲೇ ವರ್ಷಕ್ಕೆ 24 ಟಿಎಂಸಿ ನೀರು ಒದಗಿಸಲಾಗುತ್ತಿದೆ. 2050 ಹೊತ್ತಿಗೆ ಇದು 35 ಟಿಎಂಸಿಗೆ ತಲುಪಿದರೆ ಕೃಷಿ ಉತ್ಪಾದನೆಗೆ ಹೊಡೆತ ಬೀಳಬಹುದು ಎನ್ನುವುದು ಜಲಸಂಪನ್ಮೂಲ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
ಕೆಳಕಂಡ ಮಾಹಿತಿಯು ರಾಜ್ಯದ ಪ್ರಮುಖ ಜಲಾಶಯಗಳ ಪ್ರಸ್ತುತ ಸ್ಥಿತಿಯನ್ನು ತೋರಿಸುತ್ತದೆ (ಎಲ್ಲಾ ಅಳತೆಗಳು TMC ft ನಲ್ಲಿ):
| ಜಲಾಶಯ | ಒಟ್ಟು ಸಾಮರ್ಥ್ಯ | ಪ್ರಸ್ತುತ ಸಂಗ್ರಹ | ಲೈವ್ ಸ್ಟೋರೇಜ್ | ಒಳಹರಿವು (cusec) |
|---|---|---|---|---|
| ಆಲಮಟ್ಟಿ | 123 | 21 | 3.36 | 0 |
| ತುಂಗಭದ್ರಾ | 105 | 9 | 3.89 | 0 |
| ಭದ್ರಾ | 71 | 24 | 10.85 | 7,919 |
| ಹಿಡ್ಕಲ್ | 51 | 7 | 3 | 5377 |
| ಮಲಪ್ರಭಾ | 38 | 9 | 1.5 | 622 |
| ನಾರಾಯಣಪುರ | 33 | 20 | 5.95 | 0 |
| ಹಾರಂಗಿ | 8.5 | 3.7 | 2.99 | 1344 |
| ಹೇಮಾವತಿ | 37 | 16.64 | 12.27 | 6295 |
| ಕೆಆರ್‌ಎಸ್ | 49.45 | 11.48 | 3.10 | 4291 |
| ಕಬಿನಿ | 19 | 6.7 | 0 | 5774 |
| ವಾಣಿವಿಲಾಸ ಸಾಗರ | 30 | 23 | 21 | 0 |
ಈ ಅಂಕಿಅಂಶಗಳು ಕರ್ನಾಟಕ ವಾಟರ್ ರಿಸೋರ್ಸಸ್ ಇಲಾಖೆ ಮತ್ತು ಸಂಬಂಧಿತ ಮೂಲಗಳಿಂದ ತಿಳಿದುಬಂದಿದ್ದು, ಕೆಆರ್‌ಎಸ್ ಮತ್ತು ಕಬಿನಿ ಅಣೆಕಟ್ಟುಗಳು ಬೆಂಗಳೂರು-ಮೈಸೂರು ಪ್ರದೇಶಗಳ ಕುಡಿಯುವ ನೀರಿಗೆ ಮುಖ್ಯವಾಗಿರುವುದರಿಂದ, ಈ ಅಣೆಕಟ್ಟುಗಳ ನೀರು ಸಂಗ್ರಹ ಕೊರತೆಯಾದರೆ ಈ ನಗರಗಳ ಮೇಲೆ ನೇರ ಪರಿಣಾಮ ಬೀರುತ್ತದೆ.
ಮಳೆ ಹೀಗೆಯೇ ಮುಂದುವರೆದರೆ, ಈ ವರ್ಷದ ಕುಡಿಯುವ ನೀರಿನ ಆತಂಕ ಕೊಂಚ ಕಡಿಮೆಯಾಗಬಹುದು. ಈಗ ಸುರಿಯುತ್ತಿರುವ ಮಳೆ ಇಲ್ಲಿಗೇ ಸ್ಥಗಿತಗೊಂಡರೆ, ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಉತ್ತರ ಕರ್ನಾಟಕದಲ್ಲಿ ಬರದಂತಹ ಪರಿಸ್ಥಿತಿ ಇತ್ತು. ಈಗಾಗಲೇ 122 ತಾಲೂಕುಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗುತ್ತಿದ್ದು, ಕೇಂದ್ರ ಜಲ ಆಯೋಗ(CWC) ವರದಿಗಳ ಪ್ರಕಾರ, ದಕ್ಷಿಣ ಭಾರತದ ಅನೇಕ ಜಲಾಶಯಗಳ ನೀರು ಶೇ.40ಕ್ಕಿಂತ ಕಡಿಮೆಯಾಗಿದೆ ಎಂದು ವರದಿ ನೀಡಿತ್ತು.
ಜುಲೈ ಆರಂಭದಲ್ಲಿ ಜಲಾಶಯಗಳ ನೀರಿನ ಸಂಗ್ರಹ
ರಾಜ್ಯದ ಆಲಮಟ್ಟಿ, ಕೃಷ್ಣರಾಜಸಾಗರ, ತುಂಗಭದ್ರಾ, ಕಬಿನಿ, ಲಿಂಗನಮಕ್ಕಿ, ನಾರಾಯಣಪುರ, ಸುಪಾ, ಹೇಮಾವತಿ, ಭದ್ರಾ, ಘಟಪ್ರಭಾ, ಮಲಪ್ರಭಾ, ಹಾರಂಗಿ, ವಾಣಿ ವಿಲಾಸ ಸಾಗರ, ವರಾಹಿ ಸಹಿತ ಪ್ರಮುಖ 14 ಜಲಾಶಯಗಳಿವೆ. ಇವುಗಳ ಸಂಗ್ರಹ ಸಾಮರ್ಥ್ಯವೇ ಸುಮಾರು 900 ಟಿಎಂಸಿಯಷ್ಟಿದೆ. ಇದಲ್ಲದೇ ಇನ್ನೂ 20ಕ್ಕೂ ಹೆಚ್ಚು ಕಿರುಜಲಾಶಯಗಳಿದ್ದು, ಪ್ರಮುಖ ಜಲಾಶಯಗಳೊಂದಿಗೆ ಸಂಪರ್ಕ ಹೊಂದಿವೆ.
ಈ ಬಾರಿ ಮಳೆ ಕೊರತೆಯಿಂದ ಈವರೆಗೂ ಜಲಾಶಯಗಳಲ್ಲಿ ಕೇವಲ 200 ಟಿಎಂಸಿ ನೀರು ಸಂಗ್ರಹವಿದೆ. ಹಿಂದಿನ ವರ್ಷ ಈ ವೇಳೆಗೆ ಸುಮಾರು 560 ಟಿಎಂಸಿ ನೀರು ಸಂಗ್ರಹವಾಗಿತ್ತು. ವಾಣಿ ವಿಲಾಸ ಸಾಗರ, ನಾರಾಯಣಪುರ ಜಲಾಶಯ ಹೊರತುಪಡಿಸಿದರೆ ಎಲ್ಲ ಜಲಾಶಯಗಳಲ್ಲಿ ಶೇ.50ರ ಒಳಗೆ ನೀರಿನ ಸಂಗ್ರಹವಿದ್ದು, ಆತಂಕದ ವಾತಾವರಣ ಎದುರಾಗಿದೆ.
ಪ್ರಸ್ತುತ, ರಾಜ್ಯದ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುವ 10 ಪ್ರಮುಖ ಜಲಾಶಯಗಳು ತಮ್ಮ ಒಟ್ಟು ಸಾಮರ್ಥ್ಯದ ಶೇ.22ರಷ್ಟು ಮಾತ್ರ ಸಂಗ್ರಹಿಸಿವೆ. ಆದರೆ ಕಳೆದ ವರ್ಷ ಇದೇ ದಿನಾಂಕದಂದು ಜಲಾಶಯಗಳು ತಮ್ಮ ಸಾಮರ್ಥ್ಯದ ಶೇ.59ರಷ್ಟು ವೇಗವಾಗಿ ತುಂಬಿದ್ದವು.
ಕೃಷ್ಣಾ ಜಲಾನಯನ ಪ್ರದೇಶದ ಪ್ರಮುಖ ಆರು ಜಲಾಶಯಗಳ ಪೈಕಿ ನಾಲ್ಕರಲ್ಲಿ ನೀರಿನ ಒಳಹರಿವು ಶೂನ್ಯವಾಗಿತ್ತು. ಕಳೆದ ವರ್ಷ, ಕೃಷ್ಣಾ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಈ ವೇಳೆಗೆ 1.73 ಲಕ್ಷ ಕ್ಯುಸೆಕ್ ಒಳಹರಿವು ಇತ್ತು. ಈ ಬಾರಿ ತುಂಗಭದ್ರಾ, ಘಟಪ್ರಭಾ, ಮಲಪ್ರಭಾ ಮತ್ತು ಆಲಮಟ್ಟಿ ಅಣೆಕಟ್ಟುಗಳ ಒಳಹರಿವು ಸ್ಥಗಿತಗೊಂಡಿದ್ದು, ನದಿಗಳನ್ನು ಜೀವಂತವಾಗಿಡಲು ಅಧಿಕಾರಿಗಳು ಪ್ರತಿದಿನ 1,411 ಕ್ಯುಸೆಕ್ ನೀರನ್ನು ಬಿಡುಗಡೆ ಮಾಡುತ್ತಿದ್ದರು. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೃಷ್ಣಾ ನದಿ ಪಾತ್ರದ ಜನರಲ್ಲಿ ಭರವಸೆ ಮೂಡಿಸಿದ್ದು, ಒಳಹರಿವು ಹೆಚ್ಚಿಸುವ ನಿರೀಕ್ಷೆಯನ್ನು ಹುಟ್ಟಿಸಿದೆ.
ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ನಾಲ್ಕು ಜಲಾಶಯಗಳಿಗೆ ಕಳೆದ ವರ್ಷ ಜೂನ್ 30ರ ವೇಳೆಗೆ 54,010 ಕ್ಯುಸೆಕ್ ನೀರು ಒಳಹರಿವಿತ್ತು. ಈ ಬಾರಿ ಜೂನ್ 30ರಂದು ಒಟ್ಟಾಗಿ 3,121 ಕ್ಯುಸೆಕ್ ನೀರಿನ ಒಳಹರಿವು ಪಡೆದಿವೆ. ಪ್ರಮುಖ ಜಲವಿದ್ಯುತ್ ಜಲಾಶಯಗಳಾದ ಲಿಂಗನಮಕ್ಕಿ, ಸುಪಾ ಮತ್ತು ಮಾಣಿಗಳಲ್ಲಿ ಶುಕ್ರವಾರ ಬೆಳಿಗ್ಗೆ 8ರ ಹೊತ್ತಿಗೆ ಒಟ್ಟು ಸಾಮರ್ಥ್ಯದ ಕೇವಲ ಶೇ.14.9ರಷ್ಟು ಮಾತ್ರ ಸಂಗ್ರಹವಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಇದು ಶೇ.44.05ರಷ್ಟಿತ್ತು. ಕಳೆದ 10 ವರ್ಷಗಳಲ್ಲೇ 2023ರಲ್ಲಿ ಈ ಮಟ್ಟಕ್ಕಿಂತ ಕಡಿಮೆ ನೀರಿನ ಸಂಗ್ರಹ ಇತ್ತು. ಆ ಸಮಯದಲ್ಲಿ ರಾಜ್ಯವು ತೀವ್ರ ಬರಗಾಲದಿಂದ ಬಳಲುತ್ತಿತ್ತು. ಈ ವೇಳೆ ಒಟ್ಟು ಜಲವಿದ್ಯುತ್ ಸಂಗ್ರಹವು ಕೇವಲ ಶೇ.12.55ರಷ್ಟಿತ್ತು ಎಂಬುದು ಇಂಧನ ಇಲಾಖೆಯ ಅಂಕಿ ಅಂಶಗಳಲ್ಲಿ ಲಭ್ಯವಿರುವುದು ಗಮನಾರ್ಹ. ಇದೀಗ ಮತ್ತೆ ದಾಖಲೆಯ ಮಟ್ಟದಲ್ಲಿ ನೀರು ಇಳಿಕೆಯಾಗಿತ್ತು. ಮುಂಗಾರು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಒಳಹರಿವು ಆರಂಭವಾಗಿದೆ.
“ಜೂನ್ ತಿಂಗಳಲ್ಲಿ ರಾಜ್ಯದಲ್ಲಿ ಕಳೆದ 100 ವರ್ಷಗಳಲ್ಲಿಯೇ ಅತ್ಯಂತ ಕೆಟ್ಟ ಮಳೆ ಕೊರತೆ ಎದುರಾಗಿದ್ದು, ಇದು ಜಲಾಶಯಗಳ ಭರ್ತಿಯ ಮೇಲೆ ಪರಿಣಾಮ ಬೀರಿದೆ” ಎಂಬುದು ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರ ಅಭಿಪ್ರಾಯವಾಗಿದೆ.
“ಕರ್ನಾಟಕದ ಜಲಾಶಯಗಳಲ್ಲಿ ಕಡಿಮೆ ನೀರಿನ ಸಂಗ್ರಹ ಮತ್ತು ಒಳಹರಿವಿನ ಸ್ಥಗಿತದಿಂದಾಗಿ ರಾಜ್ಯವು ಅಪಾಯಕಾರಿ ಪರಿಸ್ಥಿತಿಯಲ್ಲಿದೆ. ಭಾರತವು ಎಲ್ ನಿನೊ ಪರಿಣಾಮವನ್ನು ಎದುರಿಸುವ ನಿರೀಕ್ಷೆಯಿರುವುದರಿಂದ, ಈ ಮುಂಗಾರಿನಲ್ಲಿ ನಾವು ಸರಾಸರಿಗಿಂತ ಕಡಿಮೆ ಮಳೆಯನ್ನು ನಿರೀಕ್ಷಿಸುತ್ತಿದ್ದೇವೆ. ಈ ಅನಿಶ್ಚಿತ ಅವಧಿಯಲ್ಲಿ, ರಾಜ್ಯ ಸರ್ಕಾರವು ನೀರಿನ ಸಂರಕ್ಷಣೆಗೆ ಆದ್ಯತೆ ನೀಡಬೇಕು” ಎಂದು ಧಾರವಾಡದ ನೀರು ಮತ್ತು ಭೂ ನಿರ್ವಹಣಾ ಸಂಸ್ಥೆಯ(ವಾಲ್ಮಿ) ಮಾಜಿ ನಿರ್ದೇಶಕ ರಾಜೇಂದ್ರ ಪೊದ್ದಾರ್ ಒತ್ತಾಯಿಸಿದ್ದರು.
ಕುಡಿಯುವ ನೀರಿನ ಆದ್ಯತೆ
ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಮಳೆ ಕೊರತೆ ಮುಂದುವರೆದರೆ, ರಾಜ್ಯವು ಅಭೂತಪೂರ್ವ ಪರಿಸ್ಥಿತಿಯನ್ನು ಎದುರಿಸಬಹುದು. ಹಾಗಾಗಿ ಸರ್ಕಾರ ತುರ್ತು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುತ್ತಿದ್ದು, ನಿರಂತರ ಕುಡಿಯುವ ನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ₹5 ಕೋಟಿ ಹಂಚಿಕೆ ಮಾಡಿದೆ. ನೀರಿನ ನಿರ್ವಹಣಾ ಕ್ರಮಗಳನ್ನು ತಕ್ಷಣ ಜಾರಿಗೆ ತರಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದ್ದರು.
ಮುಖ್ಯಮಂತ್ರಿಗಳ ಅಧ್ಯಕ್ಷತೆಯೊಂದಿಗೆ ನಡೆದ ಸಭೆಯಲ್ಲಿ ಪ್ರಾದೇಶಿಕ ಆಯುಕ್ತರು ಮತ್ತು ಉಪ ಆಯುಕ್ತರಿಗೆ ನಿರ್ದೇಶನ ನೀಡಿದ್ದು, “ಕೆ ಆರ್ ಎಸ್ ಜಲಾಶಯದ ಈಗಿನ ಸಂಗ್ರಹ ಬೆಂಗಳೂರು, ಮೈಸೂರು ಮಂಡ್ಯಕ್ಕೆ ಎರಡು ತಿಂಗಳು ಕುಡಿಯುವ ನೀರು ಪೂರೈಸಬಹುದು. ಕೃಷಿಗೆ ನೀರು ಬಿಡುಗಡೆ ಮಾಡಿದರೆ ಕುಡಿಯುವ ನೀರು ಒಂದು ತಿಂಗಳಿಗೆ ಮಾತ್ರ ಸಾಕಾಗುತ್ತದೆ. ಈ ನೀರನ್ನು ಕುಡಿಯುವ ನೀರಿಗೆ ಮೀಸಲಿಡಬೇಕು. ಸೀಮಿತ ನೀರನ್ನು ಮಾತ್ರ ಬಳಸಿಕೊಳ್ಳಬೇಕು” ಎಂದು ಜಲಾಶಯದ ಅಧಿಕಾರಿಗಳಿಗೆ ಆದೇಶ ನೀಡಲಾಗಿತ್ತು. ಅಲ್ಲದೆ ಬೆಳೆ ಇಡದಂತೆ ರೈತರಲ್ಲಿಯೂ ಮನವಿ ಮಾಡಿದ್ದರು.
ಏತನ್ಮಧ್ಯೆ, ನಿವಾಸಿಗಳು ನೀರನ್ನು ಸಂರಕ್ಷಿಸುವಂತೆ ಮತ್ತು ಅನಗತ್ಯವಾಗಿ ನೀರನ್ನು ಪೋಲು ಮಾಡದಂತೆ ಪಾಲಿಕೆ, ನಗರಸಭೆ, ಪಂಚಾಯಿತಿ ಅಧಿಕಾರಿಗಳು ಒತ್ತಾಯಿಸುತ್ತಿದ್ದರು.
ಇದನ್ನೂ ಓದಿದ್ದೀರಾ? ರಾಜ್ಯದ ಉತ್ತರ, ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಭಾರೀ ಮಳೆ: ಜಲಾಶಯಗಳಿಗೆ ಹೆಚ್ಚಿದ ಒಳಹರಿವು
ಮಳೆ ಕೊರತೆಯಾಗಿ ಕೃಷಿ ಉತ್ಪಾದನೆ ಕುಸಿದರೆ, ಆಹಾರ ಸುರಕ್ಷತೆಗೂ ಅನಾನುಕೂಲತೆ ಎದುರಾಗುತ್ತದೆ. ಪಶುಸಂಗೋಪನೆ, ಉದ್ಯಮಗಳು ಮತ್ತು ವಿದ್ಯುತ್ ಉತ್ಪಾದನೆಯ ಮೇಲೂ ಪರಿಣಾಮ ಬೀಳುತ್ತದೆ. ಪ್ರಾಣಿ, ಪಕ್ಷಿಗಳೂ ಕೂಡ ನೀರಿಲ್ಲದೆ ಸೊರಗಬಹುದು, ನೀರಿನ ಕೊರತೆ ಉಂಟಾದರೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಯಿತ್ತು.
ಈಗಾಗಲೇ ಮುಂಗಾರು ವಿಳಂಬದಿಂದ ಶೇ.50ರಷ್ಟು ಮಳೆ ಕೊರತೆಯಾಗಿದ್ದು, ರಾಜ್ಯಯದ ಬಹುತೇಕ ಜಲಾಶಯಗಳು ಬರಿದಾಗಿದ್ದವು. ಈಗ ಸುರಿಯುತ್ತಿರುವ ಮಳೆ ಮುಂದುವರೆದರೆ, ಕುಡಿಯುವ ನೀರಿನ ಆತಂಕವನ್ನು ಸ್ವಲ್ಪಮಟ್ಟಿಗೆ ನೀಗಿಸಿಕೊಳ್ಳಬಹುದು. ತುಂಗಾ ಭರ್ತಿಯಾಗಿದ್ದು, ಇತರೆ ಜಲಾಶಯಗಳಿಗೆ ಒಳಹರಿವು ಹೆಚ್ಚಿರುವುದು ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಧ್ಯಕ್ಕೆ ಭರವಸೆಯನ್ನುಂಟು ಮಾಡಿದೆ.




