ಬಾಕಿ ಉಳಿದಿದ್ದ ಬಾಡಿಗೆ ಹಣ ನೀಡುವಂತೆ ಕೇಳಿದ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಾಲಿನಿಂದ ಒದ್ದು ಹಲ್ಲೆ ನಡೆಸಿದ ಆರೋಪದಡಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫಾರೂಕ್ ಇಸ್ಮಾಯಿಲ್ ಸಿಕಂದರ್ ಎನ್ನುವವರು ಚಂದಾವರ ನಾಕಾ ಸಮೀಪ ರಸ್ತೆ ಬದಿಯಲ್ಲಿರುವ ಜಾಗದಲ್ಲಿ ಕಳೆದ 20 ವರ್ಷಗಳ ಹಿಂದೆ ಅತಿಕ್ರಮಣ ಮಾಡಿಕೊಂಡು, ಕಳೆದ ಆರು ವರ್ಷಗಳಿಂದ ಗುಜರಿ ಅಂಗಡಿ ನಡೆಸಿಕೊಂಡು ಬರುತ್ತಿದ್ದರು. ವಯಸ್ಸಾದ ಹಿನ್ನೆಲೆಯಲ್ಲಿ ಅಂಗಡಿಯನ್ನು ತಮ್ಮ ಮಗ ಇಸ್ಮಾಯಿಲ್ ಹಾಗೂ ಅಳಿಯ ಜಮಾಲ್ ಸಾಬ್ ಅವರಿಗೆ ನಡೆಸಲು ನೀಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಗ ಕಳೆದ ಒಂದು ವರ್ಷದ ಹಿಂದೆ ಅಡಿಕೆ ವ್ಯಾಪಾರ ಆರಂಭಿಸಿದ ಬಳಿಕ ಅಳಿಯ ಜಮಾಲ್ ಸಾಬ್ ಗುಜರಿ ಅಂಗಡಿ ನಡೆಸುತ್ತಿದ್ದು, ತಿಂಗಳಿಗೆ ₹16,000 ಬಾಡಿಗೆ ನೀಡುವುದಾಗಿ ಮಾತುಕತೆ ನಡೆದಿತ್ತು. ಅದರಂತೆ ಮೊದಲ ಮೂರು ತಿಂಗಳ ಬಾಡಿಗೆ ನೀಡಿದ್ದರೂ, ಬಳಿಕದ ಏಳು ತಿಂಗಳ ಬಾಡಿಗೆ ನೀಡಿರಲಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ದಾಂಡೇಲಿ | ವಾಟರ್ ಆಕ್ಟಿವಿಟೀಸ್‌ಗೆ ಅಡ್ಡಿ: ರೆಸಾರ್ಟ್ ಮ್ಯಾನೇಜರ್, ಸಿಬ್ಬಂದಿ ವಿರುದ್ಧ ಜೀವ ಬೆದರಿಕೆ ಆರೋಪ
ಜುಲೈ 7ರಂದು ಬೆಳಿಗ್ಗೆ 10.30ರ ಸುಮಾರಿಗೆ ಬಾಕಿ ಬಾಡಿಗೆ ಹಣದ ಕುರಿತು ವಿಚಾರಿಸಲು ಅಂಗಡಿ ಬಳಿ ತೆರಳಿದ್ದಾಗ, ಆರೋಪಿತನು ಬಾಡಿಗೆ ಹಣ ನೀಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಾಲಿನಿಂದ ಎಡ ಕಿಬ್ಬೊಟ್ಟೆಗೆ ಒದ್ದು ಹಲ್ಲೆ ನಡೆಸಿದ್ದಾಗಿ ದೂರುದಾರರು ಆರೋಪಿಸಿದ್ದಾರೆ.
ಈ ಕುರಿತು ಜುಲೈ 7ರಂದು ಹೊನ್ನಾವರ ಠಾಣೆಯಲ್ಲಿ ದೂರು ನೀಡಲಾಗಿತ್ತು. ಪ್ರಕರಣ ಅಸಂಜ್ಞೇಯ ಸ್ವರೂಪದ್ದಾಗಿದ್ದ ಹಿನ್ನೆಲೆಯಲ್ಲಿ ಎನ್‌ಸಿ ಸಂಖ್ಯೆ 117/2026ರಡಿ ಕಲಂ 115(2), 351(2) ಬಿಎನ್‌ಎಸ್-2023ರ ಅಡಿಯಲ್ಲಿ ದಾಖಲಿಸಲಾಗಿತ್ತು. ನಂತರ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಅನುಮತಿ ಪಡೆದುಕೊಂಡ ಹಿನ್ನೆಲೆಯಲ್ಲಿ ಸೆ.27ರಂದು ಮಧ್ಯಾಹ್ನ 12.30ಕ್ಕೆ ಪ್ರಕರಣವನ್ನು ಗುನ್ನಾ ಸಂಖ್ಯೆ 220/2026ರಡಿ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.




