ದಾಂಡೇಲಿ: ವಾಟರ್ ಆಕ್ಟಿವಿಟೀಸ್ ನಡೆಸಲು ಅವಕಾಶ ನೀಡದೆ ಜಟ್ಟಿ ಬಳಿ ತಡೆದು, ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಬೈಸನ ರಿವರ್ ರೆಸಾರ್ಟ್‌ಗೆ ಸಂಬಂಧಿಸಿದ ಮ್ಯಾನೇಜರ್ ಹಾಗೂ ಕೆಲ ಸಿಬ್ಬಂದಿ ವಿರುದ್ಧ ವಿಷ್ಣುಮೂರ್ತಿ ವಿಠ್ಠಲ ರಾವ್ ಎನ್ನುವವರು ದೂರು ನೀಡಿದ್ದಾರೆ.
ಘಟನೆಯ ವಿವರ: ವಿಷ್ಣುಮೂರ್ತಿ ವಿಠ್ಠಲ ರಾವ್ ಹಾಗೂ ಅವರ ಬಿಸಿನೆಸ್ ಪಾರ್ಟ್ನರ್‌ಗಳಾದ ಸುರಜ್ ಬಿ. ಗೌಡ, ಗಣೇಶ ಮುದಲಿಯಾರ ಮತ್ತು ಶಫೀಕ್ ರೆಹಮಾನ್ ಅವರು ಬೈಸನ ರಿವರ್ ರೆಸಾರ್ಟ್ ಮಾಲೀಕ ಅನೀಸ್ ಬಸರಿಕಟ್ಟಿ ಅವರೊಂದಿಗೆ ವಾಟರ್ ಆಕ್ಟಿವಿಟೀಸ್ ನಡೆಸುವ ಕುರಿತು 2026ರ ಜನವರಿ 2ರಂದು ಒಪ್ಪಂದ ಮಾಡಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಸಿದ್ದಾಪುರ | ಜನರ ಸಮಸ್ಯೆಗಳಿಗೆ ಸ್ಪಂದಿಸಲು ‘ಅನಂತ ಜನ ಸ್ಪಂದನ ಕೇಂದ್ರ’ ಆರಂಭ
ಅದರಂತೆ, ಅನೀಸ್ ಬಸರಿಕಟ್ಟಿ ಅವರಿಗೆ ಸೇರಿದ ಜಟ್ಟಿಯನ್ನು ಬಳಸಿಕೊಂಡು ಪ್ರತಿ ತಿಂಗಳು ₹4.25 ಲಕ್ಷ ಪಾವತಿಸಿ ವಾಟರ್ ಆಕ್ಟಿವಿಟೀಸ್ ನಡೆಸಲು ಒಪ್ಪಂದವಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಜನವರಿ 2026ರಲ್ಲಿ ವಾಟರ್ ಆಕ್ಟಿವಿಟೀಸ್ ನಡೆಸಲು ಸಹಕಾರ ನೀಡಿದ್ದ ರೆಸಾರ್ಟ್ ಮಾಲೀಕರು ಬಳಿಕ ನೀಡುತ್ತಿರುವ ಹಣ ಕಡಿಮೆಯಾಗುತ್ತಿದೆ ಎಂದು ಹೇಳಿ, ಹೆಚ್ಚಿನ ಹಣ ಪಾವತಿಸಿ ಆಕ್ಟಿವಿಟೀಸ್ ನಡೆಸುವಂತೆ ಒತ್ತಾಯಿಸುತ್ತಿದ್ದರು.
ಇದರಿಂದ ವಾಟರ್ ಆಕ್ಟಿವಿಟೀಸ್ ನಡೆಸಲು ಅವಕಾಶ ನೀಡದೆ ತೊಂದರೆ ನೀಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸೆ.25ರಂದು ಮಧ್ಯಾಹ್ನ 12.30ರ ಸುಮಾರಿಗೆ ವಿಷ್ಣುಮೂರ್ತಿ ವಿಠ್ಠಲ ರಾವ್ ಹಾಗೂ ಅವರ ಬಿಸಿನೆಸ್ ಪಾರ್ಟ್ನರ್‌ಗಳಾದ ಸುರಜ್ ಬಿ. ಗೌಡ ಮತ್ತು ಗಣೇಶ ಮುದಲಿಯಾರ ಅವರು ಬೈಸನ ರಿವರ್ ರೆಸಾರ್ಟ್‌ನ ಜಟ್ಟಿ ಬಳಿ ತೆರಳುತ್ತಿದ್ದಾಗ, ರೆಸಾರ್ಟ್ ಮ್ಯಾನೇಜರ್ ಹಾಗೂ ಕೆಲ ಸಿಬ್ಬಂದಿ ಅವರನ್ನು ತಡೆದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ, “ಇಲ್ಲಿ ಬರಲು ನೀವ್ಯಾರು?” ಎಂದು ಪ್ರಶ್ನಿಸಿ ಜಗಳವಾಡಿದ್ದಾರೆ. ಅಲ್ಲದೆ, ರೆಸಾರ್ಟ್ ಮಾಲೀಕರ ಅನುಮತಿ ಪಡೆದುಕೊಂಡು ಬರುವಂತೆ ಸೂಚಿಸಿ, ಮತ್ತೊಮ್ಮೆ ಜಟ್ಟಿ ಬಳಿ ಕಾಲಿಟ್ಟರೆ ಜೀವಂತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಒಪ್ಪಂದದಂತೆ ಜಟ್ಟಿಯಲ್ಲಿ ವಾಟರ್ ಆಕ್ಟಿವಿಟೀಸ್ ನಡೆಸಲು ಅವಕಾಶ ನೀಡದೆ, ತಮ್ಮ ಮ್ಯಾನೇಜರ್ ಹಾಗೂ ಸಿಬ್ಬಂದಿಯ ಮೂಲಕ ತಡೆದು, ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿಷ್ಣುಮೂರ್ತಿ ವಿಠ್ಠಲ ರಾವ್ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.




