ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೇಡಂ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಸ್ವಚ್ಛತೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ಆಗ್ರಹಿಸಿ ಅಂಬೇಡ್ಕರ್ ಯುವ ಸೇನೆ ವತಿಯಿಂದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವುದು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಆತಂಕ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಗ್ರಾಮಗಳ ರಸ್ತೆ, ಚರಂಡಿ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ, ನೀರು ನಿಲ್ಲುವ ಪ್ರದೇಶಗಳ ತೆರವು, ಅಗತ್ಯವಿರುವ ಕಡೆಗಳಲ್ಲಿ ಫಾಗಿಂಗ್ ಹಾಗೂ ಲಾರ್ವಾ ನಾಶಕ ಔಷಧಿ ಸಿಂಪಡಣೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಆಯೋಜನೆ, ಶಾಲೆಗಳು, ಅಂಗನವಾಡಿಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ ನಡೆಸುವಂತೆ ಒತ್ತಾಯಿಸಲಾಗಿದೆ.
ಇದಲ್ಲದೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಹಾಗೂ ಆರೋಗ್ಯ ಸಿಬ್ಬಂದಿಗೆ ಅಗತ್ಯ ಸೂಚನೆ ನೀಡಿ ನಿರಂತರ ಮೇಲ್ವಿಚಾರಣೆ ನಡೆಸಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ವಿಶೇಷ ಕಾರ್ಯಯೋಜನೆ ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ
ಈ ಸಂದರ್ಭದಲ್ಲಿ ಅಂಬೇಡ್ಕರ್ ಯುವ ಸೇನೆಯ ತಾಲೂಕು ಅಧ್ಯಕ್ಷ ಗೋಪಾಲ ಎಲ್. ನಾಟೆಕಾರ್, ಮುಧೋಳ ವಲಯ ಅಧ್ಯಕ್ಷ ಕೈಲಾಸ ಮೌರ್ಯ, ಭೀಮು ಮುಂಬಾಯಿ, ಮಲ್ಕಪಲ್ಲಿ ಗ್ರಾಮ ಘಟಕ ಅಧ್ಯಕ್ಷರು ಹಾಗೂ ನವೀನ್ ನಾಟೆಕಾರ್ ಉಪಸ್ಥಿತರಿದ್ದರು.





