ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುವುದು ಹಾಗೂ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಕನ್ನಡ ಭಾಷೆಯ ಬಳಕೆಗೆ ಆದ್ಯತೆ ನೀಡುವ ಕುರಿತು ಸೇಡಂ ತಾಲೂಕು ಆಡಳಿತ ಸೌಧದಲ್ಲಿರುವ ತಹಸೀಲ್ದಾರ್ ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ತಹಸೀಲ್ದಾರ್ ಶ್ರೀಯಾಂಕಾ ಎ. ಧನಶ್ರೀ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಲ್ಯಾಣ ಜನಪರ ವೇದಿಕೆಯ ರಾಜ್ಯ ಉಪಾಧ್ಯಕ್ಷ ವರದಾ ಸ್ವಾಮಿ ಬಿ. ಹಿರೇಮಠ ಮಾತನಾಡಿ, ‘ಈ ಬಾರಿಯೂ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಬೇಕು. ಸೇಡಂ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು’ ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಸನ್ನತ್ತಿ ಬ್ಯಾರೇಜ್ ಸಂತ್ರಸ್ತ ರೈತರಿಗೆ 13 ವರ್ಷವಾದರೂ ಪರಿಹಾರವಿಲ್ಲ!
‘ಮುಧೋಳ, ಕೋಲ್ಕುಂದ ಹಾಗೂ ಆಡಕಿ ವಲಯಗಳ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರೊಂದಿಗೆ ಕನ್ನಡದಲ್ಲಿ ಮಾತನಾಡಲು ಆದ್ಯತೆ ನೀಡಬೇಕು. ಕನ್ನಡ ಭಾಷೆಯ ಬಳಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ನಾಡು, ನುಡಿ ಮತ್ತು ಜಲದ ರಕ್ಷಣೆ ಕನ್ನಡಪರ ಸಂಘಟನೆಗಳಷ್ಟೇ ಅಲ್ಲದೆ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಜವಾಬ್ದಾರಿಯೂ ಆಗಿದೆ. ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು’ ಎಂದು ಅವರು ಹೇಳಿದರು.





