ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದಡಿ ಆಟೋ ಚಾಲಕನೊಬ್ಬನನ್ನು ಬಂಧಿಸಿರುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರ ನಿರ್ದೇಶನದಂತೆ, ಉಪ ಪೊಲೀಸ್ ಆಯುಕ್ತರಾದ ಶಾಲೂ (ಕಾನೂನು ಮತ್ತು ಸುವ್ಯವಸ್ಥೆ), ಪ್ರವೀಣ ಹೆಚ್. ನಾಯಕ್ (ಅಪರಾಧ ಮತ್ತು ಸಂಚಾರ) ಹಾಗೂ ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಸುಬೇದಾರ ಅವರ ಮಾರ್ಗದರ್ಶನದಲ್ಲಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಜಿ.ಎಂ. ಪಾಟೀಲ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.
ಆ.4ರಂದು ನಗರದ ಸಿಟಿ ಬಸ್ ನಿಲ್ದಾಣದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಕಬೀರ್ ಶೇಖ್ (ಆಟೋ ಚಾಲಕ), ಸಾಜೀದ್ ಆಸ್ಪತ್ರೆ ಸಮೀಪದ ಸ್ಟೇಷನ್ ಏರಿಯಾ ನಿವಾಸಿಯನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಮಾದಕ ವಸ್ತು ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಕ್ರೀಡಾಕೂಟದಲ್ಲಿ ಹಯ್ಯಾಳ(ಬಿ) ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಸಂಗಣ್ಣ ಹಾಗೂ ಮಲ್ಲಣ್ಣ ಭಾಗವಹಿಸಿದ್ದರು. ಯಶಸ್ವಿ ಕಾರ್ಯಾಚರಣೆ ನಡೆಸಿದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಶ್ಲಾಘಿಸಿದ್ದಾರೆ.





