ರಾಜ್ಯ ಸಚಿವ ಸಂಪುಟದಿಂದ ಮಂಜೂರಾಗಿರುವ ₹200 ಕೋಟಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಬೀದರ್ ನಗರದ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಬೇಕು ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ನಿರ್ದೇಶನ ನೀಡಿದರು.
ಬೀದರ್ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರ ನಡೆದ ಬೀದರ್ ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ನಗರದ ಅಭಿವೃದ್ಧಿ ಕಾರ್ಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಅಧಿಕಾರಿಗಳಿಗೆ ಸೂಚಿಸಿದರು.
- “ಖಾಲಿ ಇರುವ ಪೌರ ಕಾರ್ಮಿಕರ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿ, ಸಿಬ್ಬಂದಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಬಾಕಿ ಉಳಿದಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಅಗತ್ಯವಿದ್ದಲ್ಲಿ ಮರು ಅಂದಾಜು ಸಲ್ಲಿಸಬೇಕು. ಭವಿಷ್ಯದ ಜನಸಂಖ್ಯೆ ಹಾಗೂ ನೀರಿನ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ನೀರಿನ ಸಂಸ್ಕರಣಾ ಘಟಕಗಳನ್ನು ನಿರ್ಮಿಸಿ, ಯುಜಿಡಿ ಕಾಮಗಾರಿಯನ್ನು ಶೇ.100ರಷ್ಟು ಪೂರ್ಣಗೊಳಿಸಬೇಕು” ಎಂದರು.
ಹೊಸ ವಾಣಿಜ್ಯ ಸಂಕೀರ್ಣಗಳಲ್ಲಿ ಕಡ್ಡಾಯವಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ, ರಸ್ತೆ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಮಾರುಕಟ್ಟೆ ನಿರ್ಮಿಸಬೇಕು. ಸ್ಥಳೀಯ ಬಿದರಿ ಕಲೆಯ ಉತ್ತೇಜನಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು. ನಗರದ ಎಲ್ಲ ಆಸ್ತಿಗಳ ಜಿಪಿಎಸ್ ಮ್ಯಾಪಿಂಗ್ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಇ-ಖಾತಾ ವಿತರಿಸಬೇಕು. ಅಧಿಕೃತ ಟ್ರೇಡ್ ಲೈಸೆನ್ಸ್ ಇಲ್ಲದೆ ವ್ಯಾಪಾರ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ತ್ಯಾಜ್ಯ ಸಂಸ್ಕರಣಾ ಘಟಕ, ಕಸ ವಿಂಗಡಣಾ ಯಂತ್ರಗಳು ಹಾಗೂ ಸಾರ್ವಜನಿಕ ಶೌಚಾಲಯಗಳ ಗುಣಮಟ್ಟಕ್ಕೆ ಆದ್ಯತೆ ನೀಡಿ, ಸ್ವಚ್ಛತೆ ಕುರಿತು ಜನಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು. ಬಾಕಿ ಉಳಿದಿರುವ ಕುಡಿಯುವ ನೀರಾವರಿ ಯೋಜನೆಗಳನ್ನು ಶೀಘ್ರವಾಗಿ ಮುಗಿಯುವಂತೆ ಕ್ರಮ ವಹಿಸಬೇಕು ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಸಣ್ಣ ಸಣ್ಣ ಸಮುದಾಯಗಳು ಸಂಘ ಸಂಸ್ಥಗಳು ಸಿಎ ಸೈಟ್ ಒದಗಿಸುವಂತೆ ಕೋರಿದಲ್ಲಿ ಅಂತಹ ಸಂಘ ಸಂಸ್ಥೆಗಳಿಗೆ ಸೈಟು ದೊರೆಯುವಂತೆ ಕ್ರಮ ವಹಿಸಬೇಕು. ವಸತಿ ಯೋಜನೆಯಡಿ ಬೇಡಿಕೆಗೆ ಅನುಗುಣವಾಗಿ ಕಾಮಗಾರಿಗಳ ಯೋಜನೆ ರೂಪಿಸಬೇಕು.ಎಲ್ಲ ವಸತಿ ಯೋಜನೆ ಬೇಗ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ನಗರದ ರಸ್ತೆ ಗುಂಡಿಗಳ ದುರಸ್ತಿ ಕಾಮಗಾರಿಗಳಿಗೆ ವೇಗ ನೀಡಬೇಕು. ಎಲ್ಲ ರಸ್ತೆಗಳಲ್ಲಿರುವ ಗುಂಡಿಗಳನ್ನು ಅದಷ್ಟು ಬೇಗ ದುರಸ್ತಿಗೊಳಿಸಬೇಕು, ಅತಿಕ್ರಮವಾದ ಪುಟ್‌ಪಾತ್ ತೆರವುಗೊಳಿಸಲು ಕ್ರಮವಹಿಸುವಂತೆ ಅವರು ಸೂಚಿಸಿದರು. ನಗರದಲ್ಲಿ ಮೇಗಾ ಮಾರುಕಟ್ಟೆ ನಿರ್ಮಿಸಿದಲ್ಲಿ ಬರೀ ವ್ಯಾಪಾರಿಕರಣಕ್ಕೆ ಮೀಸಲಿರಿಸದೆ ಸಣ್ಣ ಪುಟ್ಟ ವ್ಯಾಪರಸ್ಥರಿಗೆ ವಿವಿಧ ರೀತಿಯ ಮಳಿಗೆಗಳನ್ನು ಹಾಕಿಕೊಳ್ಳಲು ಅವಕಾಶ ಕಲ್ಪಿಸಿದಲ್ಲಿ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ” ಎಂದು ಹೇಳಿದರು.
ಇದನ್ನೂ ಓದಿ : ಎಸ್‌ಐಆರ್ | ಬೀದರ್ ಜಿಲ್ಲೆಯಲ್ಲಿ 2.45 ಲಕ್ಷ ಮತದಾರರು ಕರಡು ಪಟ್ಟಿಯಿಂದ ಹೊರಬೀಳುವ ಭೀತಿ
ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ರಹೀಮ್ ಖಾನ್, ಬೀದರ್ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.




