ಹೈದರಾಬಾದ್ ಸಂಸ್ಥಾನ ವಿಮೋಚನಾ ಹೋರಾಟಗಾರರಾಗಿದ್ದ ಮಹಾದೇವಪ್ಪ ಕಡೇಚೂರ್ ಅವರು ಬದುಕಿನುದ್ದಕ್ಕೂ ಆದರ್ಶ ಜೀವನ ನಡೆಸಿದ್ದು, ಅವರ ಬದುಕಿನ ಅನುಭವ ಮತ್ತು ಮೌಲ್ಯಗಳು ‘ಅಯ್ಯನ ಕಥೆಗಳು’ ಕೃತಿಯಲ್ಲಿ ಪ್ರತಿಫಲಿಸಿವೆ ಎಂದು ರಾಜ್ಯ ಸಮಗ್ರ ಶಿಕ್ಷಣ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ. ಸತೀಶ್ ಎಸ್. ಹೊಸಮನಿ ಹೇಳಿದರು.
ನಗರದ ಹೋಟೆಲ್ ಬೃಂದಾವನ ಗ್ರ್ಯಾಂಡ್‌ನ ‘ಬಲದೇವ್’ ಸಭಾಂಗಣದಲ್ಲಿ ಬುಧವಾರ ಮಹಾದೇವಪ್ಪ ಕಡೇಚೂರ್ ಅವರ ಪ್ರಥಮ ಪುಣ್ಯಸ್ಮರಣೆಯ ಅಂಗವಾಗಿ ಆಯೋಜಿಸಿದ್ದ ‘ಅಯ್ಯನ ಕಥೆಗಳು’ ಸಣ್ಣಕಥೆಗಳ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಕ್ರೀಡೆ, ಸ್ನೇಹ, ಓದುವ ಹವ್ಯಾಸ, ಸಾಹಸ, ಮಹಾಪುರುಷರ ಜೀವನ ಮತ್ತು ಪ್ರಾಣಿಪ್ರೀತಿ ಸೇರಿದಂತೆ ಅನೇಕ ಮೌಲ್ಯಗಳನ್ನು ಬೆಳೆಸುವ ಕಥೆಗಳು ಈ ಕೃತಿಯಲ್ಲಿವೆ ಎಂದರು.
“ಇಂತಹ ಮೌಲ್ಯಯುತ ಕಥೆಗಳು ಮಕ್ಕಳಿಗೆ ದಾರಿದೀಪವಾಗಲಿದ್ದು, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರೇರಣೆ ನೀಡಲಿವೆ. ಸಾಮಾಜಿಕ ಬದಲಾವಣೆಗೆ ಪೂರಕವಾದ ಕಥಾಹಂದರವನ್ನು ಕೃತಿ ಒಳಗೊಂಡಿದೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ. ಜಯದೇವಿ ಗಾಯಕವಾಡ ಮಾತನಾಡಿ, ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಮಕ್ಕಳ ಮನೋಧರ್ಮಕ್ಕೆ ಅನುಗುಣವಾಗಿ ನೀತಿ ಮತ್ತು ಜೀವನ ಮೌಲ್ಯಗಳನ್ನು ಬೋಧಿಸುವ ಪ್ರಯತ್ನವನ್ನು ಕಡೇಚೂರ್ ಅವರು ತಮ್ಮ ಕಥೆಗಳ ಮೂಲಕ ಮಾಡಿದ್ದಾರೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಪತ್ರಾಗಾರ ಮತ್ತು ಗ್ಯಾಸೆಟಿಯರ್ ಇಲಾಖೆಯ ಉಪ ನಿರ್ದೇಶಕ ವೀರಶೆಟ್ಟಿ ಬಿ. ಗಾರಂಪಳ್ಳಿ ಕೃತಿ ಪರಿಚಯ ಮಾಡಿಕೊಟ್ಟು, “ಸಮಾಜದ ನೈತಿಕ ಶುದ್ಧೀಕರಣದ ಉದ್ದೇಶದಿಂದ ಹೆಣೆಯಲಾದ ಕಥೆಗಳು ಸರಳ ಭಾಷೆಯಲ್ಲಿ ಮಣ್ಣಿನ ಸೊಗಡನ್ನು ಬಿಂಬಿಸುತ್ತವೆ. ಹೈಸ್ಕೂಲು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ನೀತಿ ಬೋಧಿಸುವ ಉತ್ತಮ ಕೃತಿ ಇದಾಗಿದೆ” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ, ಮೌಲ್ಯಗಳು ಕಣ್ಮರೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮಹಾದೇವಪ್ಪ ಕಡೇಚೂರ್ ಅವರ ಬದುಕು ಮತ್ತು ಹೋರಾಟ ಮಾನವೀಯ ಮೌಲ್ಯಗಳ ಅರ್ಥಪೂರ್ಣ ಸಂದೇಶ ನೀಡುತ್ತದೆ ಎಂದರು. ಅವರ ಹೆಸರಿನಲ್ಲಿ ಪ್ರತಿಷ್ಠಾನವು ಪ್ರತಿವರ್ಷ ಒಬ್ಬ ಸಾಧಕರಿಗೆ ವಾರ್ಷಿಕ ಪ್ರಶಸ್ತಿ ನೀಡುವ ಪರಂಪರೆ ಆರಂಭಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ವೈದ್ಯ ಡಾ. ಪಿ.ಎಸ್. ಶಂಕರ್ ಮಾತನಾಡಿ, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ಸಾಂಪ್ರದಾಯಿಕ ಮಾದರಿಯಿಂದ ಹೊರಬಂದು ಓದುಗರೊಂದಿಗೆ ಸಂವಾದಾತ್ಮಕವಾಗಿ ನಡೆಯಬೇಕು. ಲೇಖಕರು ಕೃತಿಯ ಹಿನ್ನೆಲೆಯನ್ನು ವಿವರಿಸಿ, ಓದುಗರು ಪ್ರಶ್ನೆಗಳ ಮೂಲಕ ಅದರ ಒಳನೋಟ ತಿಳಿಯುವ ಪದ್ಧತಿ ಬೆಳೆಸಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಧರ್ಮದರ್ಶಿ ವೆಂಕಟೇಶ ಎಂ. ಕಡೇಚೂರ್ ಸೇರಿದಂತೆ ಚಂದ್ರಕಾಂತ ಗುತ್ತೇದಾರ್, ಡಾ. ಹನುಮಂತರಾವ್ ದೊಡ್ಡಮನಿ, ಬೋಡೆ ರಿಯಾಝ್ ಅಹಮ್ಮದ್, ಮಹಾದೇವಯ್ಯ ಕರದಳ್ಳಿ, ಸಂಧ್ಯಾ ಹೊನಗುಂಟಿಕರ್, ನಾರಾಯಣ ಕುಲಕರ್ಣಿ, ಚಿತ್ರಶೇಖರ ಕಂಠಿ, ಸುಬ್ರಾವ್ ಕುಲಕರ್ಣಿ, ಪ್ರಭಾಕರ ಜೋಶಿ, ಜಮುನಾ ಗುತ್ತೇದಾರ್ ಹಾಗೂ ಇತರರು ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ? ಕಲಬುರಗಿ | ಮದುವೆ ಮನೆಯಲ್ಲೇ ಕಳ್ಳರ ಕೈಚಳಕ; ₹7.51 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಕಳವು
ಡಾ. ಸದಾನಂದ ಪೆರ್ಲ ಸ್ವಾಗತಿಸಿದರು. ಕಿರಣ್ ಪಾಟೀಲ್ ಪ್ರಾರ್ಥನಾ ಗೀತೆ ಹಾಡಿದರು. ಡಾ. ಗವಿಸಿದ್ದಪ್ಪ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.





