ನಗರದ ಸಿದ್ಧರಾಮೇಶ್ವರ ಕಾಲೊನಿಯ ಮದುವೆ ಮನೆಯೊಂದನ್ನು ಗುರಿಯಾಗಿಸಿಕೊಂಡ ಕಳ್ಳರು, ಮಂಗಳಸೂತ್ರ ಸೇರಿದಂತೆ ₹7.51 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದು ಕಳವು ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಪ್ರೌಢಶಾಲೆ ಶಿಕ್ಷಕರಾದ ಸಿದ್ದಾರೂಢ ಬೆಳಮಗಿ ಅವರ ಪುತ್ರಿ ಸ್ಫೂರ್ತಿ ಅವರ ವಿವಾಹ ಜೂನ್ 22ರಂದು ಆಳಂದ ರಸ್ತೆಯ ನಿಗ್ಗುಡಗಿ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಕುಟುಂಬದ ಎಲ್ಲ ಸದಸ್ಯರು ಬೆಳಿಗ್ಗೆಯೇ ಮಂಟಪಕ್ಕೆ ತೆರಳಿದ್ದರು.
ಈ ವೇಳೆ ಖಾಲಿ ಇದ್ದ ಮನೆಯನ್ನು ಗುರಿಯಾಗಿಸಿಕೊಂಡ ಕಳ್ಳರು, ಮುಖ್ಯ ಬಾಗಿಲಿನ ಕೊಂಡಿ ಮುರಿದು ಒಳನುಗ್ಗಿದ್ದಾರೆ. ದೇವರ ಅಕ್ಷತೆ ಕಾರ್ಯಕ್ರಮದ ಬಳಿಕ ಮದುವೆಗಾಗಿ ಇರಿಸಿದ್ದ 2 ತೊಲೆಯ ಚಿನ್ನದ ಮಂಗಳಸೂತ್ರ ತರಲು ಬೆಳಿಗ್ಗೆ 10.30ರ ಸುಮಾರಿಗೆ ಮನೆಗೆ ಬಂದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಕಳ್ಳರು 20 ಗ್ರಾಂ ತೂಕದ ಚಿನ್ನದ ಮಂಗಳಸೂತ್ರ, 10 ಗ್ರಾಂ ತೂಕದ ಚಿನ್ನದ ಉಂಗುರ, ಚಿನ್ನದ ನೆಕ್ಲೆಸ್, ಬೆಳ್ಳಿ ಆರತಿ ತಟ್ಟೆ, ನಾಲ್ಕು ಬೆಳ್ಳಿ ತಟ್ಟೆಗಳು, ಬೆಳ್ಳಿ ಆರತಿಗಳು, ಬೆಳ್ಳಿ ಹೂಜಿ, ಬೆಳ್ಳಿಯ ಲಕ್ಷ್ಮೀ ಮೂರ್ತಿ ಹಾಗೂ ₹35 ಸಾವಿರ ನಗದು ದೋಚಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಆಮ್ಮೆಟ್ ವಿಚಾರಕ್ಕೆ ಶುರುವಾದ ಜಗಳ; ಆಟೋ ಚಾಲಕನ ಬರ್ಬರ ಹತ್ಯೆ
ಘಟನೆ ಸಂಬಂಧ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.





