ಪೋಕ್ಸೊ ಪ್ರಕರಣದ ತನಿಖೆ ವೇಳೆ ದೂರುದಾರರಿಂದ ಲಂಚದ ಹಣ ಪಡೆದ ಆರೋಪದ ಮೇರೆಗೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಅಮಾನತುಗೊಂಡವರನ್ನು ಠಾಣೆಯ ಎಎಸ್‌ಐ ಶಿವಶರಣಪ್ಪ ಹಾಗೂ ಎಂಎಚ್‌ಸಿ ಜ್ಯೋತಿ ಎಂದು ಗುರುತಿಸಲಾಗಿದೆ.
ಸ್ಟೇಷನ್ ಬಜಾರ್ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೊ ಪ್ರಕರಣದ ತನಿಖೆ ಸಂದರ್ಭದಲ್ಲಿ ನೊಂದ ಬಾಲಕಿಯ ಹೇಳಿಕೆ ದಾಖಲಿಸಿಕೊಳ್ಳಲು ದೂರುದಾರರನ್ನು ಠಾಣೆಗೆ ಕರೆಯಿಸಿಕೊಂಡಿದ್ದ ಆರೋಪಿಗಳು, ಪ್ರಕರಣದಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿ ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಬೇಡಿಕೆ ಇಟ್ಟಿದ್ದ ಹಣದಲ್ಲಿ ₹9 ಸಾವಿರವನ್ನು ಸ್ವೀಕರಿಸುತ್ತಿದ್ದ ವೇಳೆ ಜೂನ್ 7ರಂದು ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ಬಲೆಗೆ ಬೀಳಿಸಿದ್ದರು. ಈ ಘಟನೆ ಪೊಲೀಸ್ ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಪೋಕ್ಸೊದಂತಹ ಗಂಭೀರ ಪ್ರಕರಣದಲ್ಲಿ ದೂರುದಾರರಿಗೆ ನೆರವು ನೀಡುವ ಹೆಸರಿನಲ್ಲಿ ಹಣದ ಬೇಡಿಕೆ ಇಟ್ಟಿರುವುದು ಹಾಗೂ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ತೋರಿರುವುದು ಪ್ರಾಥಮಿಕವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಇದನ್ನು ಓದಿದ್ದೀರಾ? ಯಾದಗಿರಿ | ಗುಣಮಟ್ಟ ಶಿಕ್ಷಣದಿಂದ ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣ ಸಾಧ್ಯ: ವಾಣಿಶ್ರೀ ದರ್ಬಾರಿ
ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತಿನ ನಡಾವಳಿ) ನಿಯಮಾವಳಿಯಡಿ ಇಲಾಖಾ ವಿಚಾರಣೆ ಪೂರ್ಣಗೊಳ್ಳುವವರೆಗೆ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ಈ ಕುರಿತು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಆದೇಶ ಹೊರಡಿಸಿದ್ದಾರೆ.





