ಡಿಸಿ ಮನ್ನಾ ಜಮೀನು ಹಾಗೂ ವಸತಿ ನಿವೇಶನಗಳ ಹಕ್ಕುಪತ್ರ ವಿತರಣೆಯಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಕಾಪು ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ದಲಿತ ಹಕ್ಕುಗಳ ಸಮಿತಿ (ಡಿಎಚ್‌ಎಸ್) ಉಡುಪಿ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಎಚ್ಚರಿಕೆ ನೀಡಿದ್ದಾರೆ.
ಮೂಡುಬೆಳ್ಳೆಯ ಡಿಎಚ್‌ಎಸ್ ಕಾರ್ಯಾಲಯ ‘ಪ್ರಬುದ್ಧ’ದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಡೆ, ಹೊಳೆ, ರಸ್ತೆ ಹಾಗೂ ಸಾರ್ವಜನಿಕ ಉದ್ದೇಶಗಳಿಗೆ ಬಳಕೆಯಾಗಿರುವುದರಿಂದ ಕಳೆದುಹೋದ ಡಿಸಿ ಮನ್ನಾ ಜಮೀನಿಗೆ ಪರ್ಯಾಯವಾಗಿ ದಲಿತರಿಗೆ ಸರ್ಕಾರಿ ಜಮೀನು ಮೀಸಲಿಡಬೇಕು. ಭೂ ಅನುದಾನ ನಿಯಮಾವಳಿ 1969ರಂತೆ ಪ್ರತಿ ಗ್ರಾಮದಲ್ಲಿ ಶೇ. 50ರಷ್ಟು ಸರ್ಕಾರಿ ಜಮೀನನ್ನು ದಲಿತರಿಗೆ ಮೀಸಲಿಡಬೇಕು ಎಂದು ಕಾಪು ತಹಶೀಲ್ದಾರರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ದಲಿತರ ವಿವಿಧ ಬೇಡಿಕೆಗಳನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಿಶೇಷ ಚರ್ಚೆಗೆ ಒಳಪಡಿಸುವಂತೆ ಒತ್ತಾಯಿಸಿ ಬೃಹತ್ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಜ್ಯ ಸರ್ಕಾರ 2022-23ನೇ ಸಾಲಿನಿಂದ ವಸತಿ ಮನೆಗಳನ್ನು ಮಂಜೂರು ಮಾಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಾರಾಯಿ ಅಂಗಡಿಗೆ ಜಾಗ, ದಲಿತರಿಗೆ ನಿವೇಶನವಿಲ್ಲವೇ?
ಕಟ್ಟಿಂಗೇರಿ ಗ್ರಾಮದ ಸರ್ವೆ ನಂ. 6/1ಸಿಯಲ್ಲಿ ಹಲವು ದಶಕಗಳಿಂದ ದಲಿತ ಕುಟುಂಬಗಳು ವಾಸವಾಗಿದ್ದರೂ, ಸರ್ಕಾರಿ ಜಮೀನು ಬಂಡೆ ಪ್ರದೇಶವೆಂಬ ಕಾರಣ ನೀಡಿ ಹಕ್ಕುಪತ್ರ ನೀಡಿಲ್ಲ. ಆದರೆ ಇದೇ ಜಮೀನನ್ನು ಹಿಂದೆ ಸಾರಾಯಿ ಅಂಗಡಿಗೆ ಮೀಸಲಿಟ್ಟಿದ್ದಾಗಿ ಜಿಲ್ಲಾಧಿಕಾರಿಗಳು ಹಿಂಬರಹ ನೀಡಿದ್ದಾರೆ. ಸಾರಾಯಿ ಅಂಗಡಿಗೆ ಜಾಗ ಮೀಸಲಿಡಲು ಸಾಧ್ಯವಾಗುವುದಾದರೆ ದಲಿತರ ಮನೆ ನಿವೇಶನಕ್ಕೆ ಏಕೆ ನೀಡಲಾಗದು ಎಂದು ದಸಂಸ ಅಂಬೇಡ್ಕರ್ ವಾದದ ಕಾಪು ತಾಲೂಕು ಸಂಘಟನಾ ಸಂಚಾಲಕ ಕೃಷ್ಣ ಮೂಡುಬೆಳ್ಳೆ ಪ್ರಶ್ನಿಸಿದರು.
ಈ ಕುರಿತು ಕಾಪು ತಹಶೀಲ್ದಾರರು ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವಾಸ್ತವ ಸ್ಥಿತಿಯ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಬೈಂದೂರು ತಾಲೂಕಿನ ನಾಡಾ ಗ್ರಾಮದ ದಲಿತರಿಗೆ ಹಲವು ದಶಕಗಳು ಕಳೆದರೂ ಹಕ್ಕುಪತ್ರ ನೀಡಲಾಗಿಲ್ಲ. ಅಂಪಾರು ಗ್ರಾಮದಲ್ಲೂ ಇದೇ ಸಮಸ್ಯೆ ಮುಂದುವರಿದಿದೆ ಎಂದು ಡಿಎಚ್‌ಎಸ್ ಕೋಶಾಧಿಕಾರಿ ನಾಗರತ್ನಾ ಆರ್. ನಾಡಾ ತಿಳಿಸಿದರು.
ಶಾನಾಡಿಯಲ್ಲಿ ಕೊರಗ ಸಮುದಾಯದ ಮಹಿಳೆ ಹಾಗೂ ವಿಕಲಚೇತನ ಮಗುವಿನ ದುರಂತ ಅಂತ್ಯವು ಅಳಿವಿನಂಚಿನಲ್ಲಿರುವ ಸಮುದಾಯಗಳಿಗೆ ಸರ್ಕಾರದ ಸೌಲಭ್ಯಗಳು ತಲುಪದಿರುವುದಕ್ಕೆ ಉದಾಹರಣೆಯಾಗಿದೆ ಎಂದು ಡಿಎಚ್‌ಎಸ್ ಕಾರ್ಯದರ್ಶಿ ರವಿ ವಿಎಂ ಹೇಳಿದರು.
ಪಾಣಾರ ಸಂಘದ ಅಧ್ಯಕ್ಷ ರಾಜು ಪಾಣಾರ ಹಾಗೂ ಗೌರವಾಧ್ಯಕ್ಷ ಸುಧಾಕರ ಪಾಣಾರ ಉಪಸ್ಥಿತರಿದ್ದರು.








