ಕಾಳಗಿ ತಾಲೂಕಿನ ಗೋಟೂರ ಗ್ರಾಮದ ಹೊಲವೊಂದರಲ್ಲಿ ಗುರುವಾರ ವಿದ್ಯುತ್ ಕಂಬದಿಂದ ಕಡಿದುಬಿದ್ದ ತಂತಿ ಸ್ಪರ್ಶಿಸಿದ ಪರಿಣಾಮ ರೈತರೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ರೈತ ಗಾಯಗೊಂಡಿದ್ದಾರೆ. ಘಟನೆಗೆ ಜೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಮೃತರ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ರೈತ ಸಂಘಟನೆಗಳ ಮುಖಂಡರು ಕಾಳಗಿಯ ಜೆಸ್ಕಾಂ ಕಚೇರಿ ಎದುರು ಮೃತದೇಹವಿಟ್ಟು ಪ್ರತಿಭಟನೆ ನಡೆಸಿದರು.
ಮೃತರನ್ನು ಗೋಟೂರ ಗ್ರಾಮದ ಭೀಮಾಶಂಕರ ದೇವಿಂದ್ರಪ್ಪ ಅರನತ್ತಿ (32) ಎಂದು ಗುರುತಿಸಲಾಗಿದೆ. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಗಾಯಗೊಂಡಿರುವ ಜಗನಾಥ ಶಿವಪ್ಪ ಕಲಮೂಡ (45) ಅವರು ಕಾಳಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭೀಮಾಶಂಕರ ಅವರು ಅಣ್ಣಾರಾವ್ ನಡಗಟ್ಟಿ ಅವರ ಹೊಲವನ್ನು ಕಡತಿಗೆ ಪಡೆದು ತೊಗರಿ ಬೆಳೆ ಬಿತ್ತನೆ ಮಾಡಿದ್ದರು. ಗುರುವಾರ ಮಧ್ಯಾಹ್ನ ಕೂಲಿ ಕಾರ್ಮಿಕ ಜಗನಾಥ ಅವರನ್ನು ಕರೆದುಕೊಂಡು ತೊಗರಿ ಬೆಳೆಗೆ ಎಡೆ ಹೊಡೆಯುವ ಕೆಲಸ ಮಾಡುತ್ತಿದ್ದ ವೇಳೆ ಮಧ್ಯಾಹ್ನ ಸುಮಾರು 3 ಗಂಟೆಗೆ ವಿದ್ಯುತ್ ಕಂಬದಿಂದ ಕಡಿದುಬಿದ್ದಿದ್ದ ತಂತಿ ಇಬ್ಬರಿಗೂ ಸ್ಪರ್ಶಿಸಿದೆ.
ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತಗುಲಿದ ಪರಿಣಾಮ ಭೀಮಾಶಂಕರ ಅವರು ಸ್ಥಳದಲ್ಲೇ ಮೃತಪಟ್ಟರೆ, ಜಗನಾಥ ಅವರು ಗಾಯಗೊಂಡಿದ್ದಾರೆ. ವಿಷಯ ತಿಳಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ಕಾಳಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಗೆ ಜೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಮೃತರ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ರೈತ ಸಂಘಟನೆಗಳ ಮುಖಂಡರು ಕಾಳಗಿಯ ಜೆಸ್ಕಾಂ ಕಚೇರಿ ಎದುರು ಭೀಮಾಶಂಕರ ಅವರ ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದರು.
‘ವಿದ್ಯುತ್ ಅವಘಡಕ್ಕೆ ಜೆಸ್ಕಾಂ ನಿರ್ಲಕ್ಷ್ಯವೇ ಕಾರಣ. ಮೃತಪಟ್ಟ ರೈತನ ಕುಟುಂಬಕ್ಕೆ ಹಾಗೂ ಗಾಯಾಳುವಿಗೆ ಜೆಸ್ಕಾಂ ಅಧಿಕಾರಿಗಳು ಸೂಕ್ತ ಮತ್ತು ದೊಡ್ಡ ಮೊತ್ತದ ಪರಿಹಾರ ನೀಡಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? SIR | ಕಲ್ಯಾಣ ಕರ್ನಾಟಕದಲ್ಲಿ 18.11 ಲಕ್ಷ ಮತದಾರರು ಡಿಲೀಟ್ ಆಗುವ ಆತಂಕ!
ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಚಿಂಚೋಳಿ ಡಿವೈಎಸ್ಪಿ ಸಂಗಮೇಶ ಹಿರೇಮಠ, ಸಿಪಿಐ ಜಗದೇವಪ್ಪ ಪಾಳಾ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಂಡರು. ಜೆಸ್ಕಾಂ ಎಇಇ ಇಲಿಯಾಸ್ ಅಹ್ಮದ್, ಜೆಇ ವಿಜಯಕುಮಾರ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.





