ಮಹಾರಾಷ್ಟ್ರದ ಕಾಳಸಂತೆಗೆ ಸಾಗಿಸಲು ಸಂಗ್ರಹಿಸಲಾಗಿದ್ದ ಸರ್ಕಾರದ ಪಡಿತರ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ 99.80 ಕ್ವಿಂಟಲ್ ಅಕ್ಕಿ ಜಪ್ತಿಯಾಗಿದ್ದು, ಇದರ ಮೌಲ್ಯ ₹3.39 ಲಕ್ಷ ಎಂದು ಅಂದಾಜಿಸಲಾಗಿದೆ.
ಅಫಜಲಪುರ ಮಾರ್ಗವಾಗಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಹಾರಾಷ್ಟ್ರದ ಧುದನಿಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಂಜೀವಕುಮಾರ ದಾಸರ ಸೂಚನೆಯಂತೆ ಆಹಾರ ನಿರೀಕ್ಷಕ ಮಹ್ಮದ್ ಶೋಹೇಬ್ ನೇತೃತ್ವದ ತಂಡ ಅತನೂರ ಗ್ರಾಮದ ಬಳಿ ವಾಹನವನ್ನು ತಡೆದು ಪರಿಶೀಲಿಸಿತು.
ತಪಾಸಣೆ ವೇಳೆ ವಾಹನದಲ್ಲಿ ಸಾಗಿಸಲಾಗುತ್ತಿದ್ದ 99.80 ಕ್ವಿಂಟಲ್ ಪಡಿತರ ಅಕ್ಕಿ ಪತ್ತೆಯಾಗಿದ್ದು, ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು ಅಕ್ಕಿಯನ್ನು ವಶಕ್ಕೆ ಪಡೆದರು. ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ, ರಾಜ್ಯದ ಹೊರಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಿಸಲಾಗುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ರಸಗೊಬ್ಬರ ತರಲು ಹೋದ ರೈತ ಶವವಾಗಿ ಪತ್ತೆ; ಕೊಲೆ ಶಂಕೆ ವ್ಯಕ್ತಪಡಿಸಿದ ಕುಟುಂಬ
ಈ ಸಂಬಂಧ ವಾಹನ ಮಾಲೀಕ ದಿಗಂಬರ ನಾಗಣಸೂರ ವಿರುದ್ಧ ರೇವೂರ (ಬಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ಕಿಯ ಮೂಲ, ಸಂಗ್ರಹಣೆ ಹಾಗೂ ಸಾಗಾಟದ ಹಿಂದಿರುವ ಜಾಲದ ಕುರಿತು ಆಹಾರ ಇಲಾಖೆ ಮತ್ತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





