ವರದಕ್ಷಿಣೆ ಕಿರುಕುಳದ ಆರೋಪದ ನಡುವೆ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಗರದ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ಶರಣ ಶಿರಸಗಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಸೋಮವಾರ ನಡೆದಿದೆ.
ಮೃತರನ್ನು ರೇಣುಕಾ (34) ಎಂದು ಗುರುತಿಸಲಾಗಿದೆ. ಆಕೆಯ ಪತಿ ಸಂಜುಕುಮಾರ್ ಶಿಂಧೆ ಸೇರಿದಂತೆ ಅತ್ತೆ-ಮಾವನ ಮನೆಯವರು ಕಳೆದ ಹತ್ತು ವರ್ಷಗಳಿಂದ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಪತಿ ಮದ್ಯಪಾನದ ಚಟ ಹೊಂದಿದ್ದು, ಆಗಾಗ್ಗೆ ಕಿರುಕುಳ ನೀಡುತ್ತಿದ್ದ ಎಂದು ದೂರಲಾಗಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರೇಣುಕಾ ಕಳೆದ ಒಂದು ವರ್ಷದಿಂದ ತವರು ಮನೆಯಲ್ಲಿ ವಾಸವಾಗಿದ್ದರು. ಹಿರಿಯರ ಮಧ್ಯಸ್ಥಿಕೆಯಲ್ಲಿ ದಾಂಪತ್ಯ ಕಲಹ ಬಗೆಹರಿಸಲು ಪ್ರಯತ್ನ ನಡೆಸಿ, ಸುಮಾರು ಎರಡು ತಿಂಗಳ ಹಿಂದೆ ಆಕೆಯನ್ನು ಮತ್ತೆ ಪತಿಯ ಮನೆಗೆ ಕಳುಹಿಸಲಾಗಿತ್ತು ಎನ್ನಲಾಗಿದೆ.
ಆದರೆ ಇದೀಗ ರೇಣುಕಾ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಕುಟುಂಬಸ್ಥರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪತಿ ಸಂಜುಕುಮಾರ್ ಶಿಂಧೆ, ಆತನ ಸಹೋದರರಾದ ರಮೇಶ್ ಶಿಂಧೆ ಹಾಗೂ ವಿಠ್ಠಲ ಶಿಂಧೆ ಮತ್ತು ತಾಯಿ ಗಂಗಾಬಾಯಿ ಸೇರಿದಂತೆ ಕುಟುಂಬದ ಸದಸ್ಯರ ವಿರುದ್ಧ ಮೃತಳ ಸಂಬಂಧಿಕರು ಕೊಲೆ ಹಾಗೂ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ.
This video cannot be played in your browser. Open the video directly

ಇದನ್ನು ಓದಿದ್ದೀರಾ? ಯಾದಗಿರಿ | ಬರದ ಹೊಡೆತಕ್ಕೆ ಬೆಳೆ ನಷ್ಟ, ಸಾಲದ ಹೊರೆ; ರೈತ ಆತ್ಮಹತ್ಯೆ
ಘಟನೆ ಕುರಿತು ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





