ಆಳಂದ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಒಟ್ಟು ₹2.85 ಕೋಟಿ ವೆಚ್ಚದ ಎರಡು ಪ್ರಮುಖ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಿ.ಆರ್ ಪಾಟೀಲ್ ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ 2026–27ನೇ ಸಾಲಿನ 4702 ಅಣೆಕಟ್ಟು ಪಿಕಪ್ ಯೋಜನೆಯಡಿ ಸ್ಥಳೀಯ ನಾಲಕ್ಕೆ ಅಡ್ಡಲಾಗಿ ₹2.25 ಕೋಟಿ ವೆಚ್ಚದಲ್ಲಿ ಬ್ರಿಡ್ಜ್-ಕಂ-ಬ್ಯಾರೇಜ್ (ಬಿ.ಸಿ.ಬಿ.) ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಹಾಕಲಾಯಿತು. ಈ ಯೋಜನೆಯಿಂದ ಅಂತರ್ಜಲ ಮರುಪೂರಣಕ್ಕೆ ಉತ್ತೇಜನ ದೊರೆಯಲಿದ್ದು, ರೈತರಿಗೆ ನೀರಿನ ಲಭ್ಯತೆ ಹೆಚ್ಚಾಗಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ಶಾಸಕರು ತಿಳಿಸಿದರು.

ಇದೇ ವೇಳೆ, ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ (2024–25) ಅಡಿಯಲ್ಲಿ ಹೊನ್ನಳ್ಳಿ ಗ್ರಾಮದ ಯಲ್ಲಮ್ಮ ದೇವಸ್ಥಾನದ ಸಮೀಪ ₹60 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೂ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಭವನವು ಗ್ರಾಮಸ್ಥರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಕೇಂದ್ರವಾಗಲಿದ್ದು, ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ನೆರವಾಗಲಿದೆ.
ಇದನ್ನು ಓದಿದ್ದೀರಾ? ಯಾದಗಿರಿ | ಜಿಲ್ಲೆಯಾದ್ಯಂತ ಬರ ವೀಕ್ಷಣೆ ನಡೆಸಿದ ಸಚಿವ ಡಾ. ಶರಣಪ್ರಕಾಶ ಪಾಟೀಲ್
ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಈ ಕಾಮಗಾರಿಗಳಿಂದ ಆಳಂದ ಕ್ಷೇತ್ರದ ಗ್ರಾಮೀಣ ಮೂಲಸೌಕರ್ಯ ಮತ್ತಷ್ಟು ಬಲಪಡಲಿದ್ದು, ಜನರ ಜೀವನಮಟ್ಟ ಸುಧಾರಣೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.





