ಸಂಸತ್ತಿನಲ್ಲಿ ಮುಂದುವರಿದಿರುವ ಕಲಾಪ ಸ್ಥಗಿತ ಹಾಗೂ ಗೊಂದಲವನ್ನು ಶಮನಗೊಳಿಸುವ ಪ್ರಯತ್ನವಾಗಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಮುಂಬರುವ ಕ್ಷೇತ್ರ ಪುನರ್‌ವಿಂಗಡಣೆ (ಡಿಲಿಮಿಟೇಷನ್) ವಿಧೇಯಕ ಹಾಗೂ ಎಫ್‌ಸಿಆರ್‌ಎ (FCRA) ತಿದ್ದುಪಡಿ ಮಸೂದೆಗೆ ಕಾಂಗ್ರೆಸ್ ಪಕ್ಷದ ಬೆಂಬಲವನ್ನು ಕೇಂದ್ರ ಸರ್ಕಾರ ಕೋರಿದೆ ಎಂದು ವರದಿಯಾಗಿದೆ.
ಸಂಸತ್ ಭವನದಲ್ಲಿರುವ ರಾಹುಲ್ ಗಾಂಧಿ ಅವರ ಕೊಠಡಿಯಲ್ಲಿ ಸುಮಾರು 50 ನಿಮಿಷಗಳ ಕಾಲ ಈ ಸಭೆ ನಡೆಯಿತು. ಈ ವೇಳೆ ಕಾಂಗ್ರೆಸ್ ಸಂಸದೀಯ ನಾಯಕರಾದ ಕೆ.ಸಿ. ವೇಣುಗೋಪಾಲ್, ಗೌರವ್ ಗೊಗೋಯ್ ಮತ್ತು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಉಪಸ್ಥಿತರಿದ್ದರು.
ಇದನ್ನೂ ಓದಿ: ಮೋದಿ ಸರ್ಕಾರದ ಡಿಲಿಮಿಟೇಷನ್ ದುಸ್ಸಾಹಸ: ಮ್ಯಾಜಿಕ್ ನಂಬರ್‌ಗಾಗಿ ಪ್ರಜಾಸತ್ತಾತ್ಮಕ ಮೌಲ್ಯಗಳ ಬಲಿ!
ಕ್ಷೇತ್ರ ಪುನರ್‌ವಿಂಗಡಣೆ ವಿಧೇಯಕಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ತನ್ನ ಹಳೆಯ ನಿಲುವಿಗೇ ಬದ್ಧವಾಗಿದೆ ಎಂದು ಭೇಟಿಯ ವೇಳೆ ಸ್ಪಷ್ಟಪಡಿಸಲಾಗಿದೆ. ಬಜೆಟ್ ಅಧಿವೇಶನದಲ್ಲಿ ತಳೆದಿದ್ದ ವಿರೋಧದ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. “ವಿವಿಧ ರಾಜಕೀಯ ಪಕ್ಷಗಳನ್ನು ಪ್ರತ್ಯೇಕವಾಗಿ ಸಂಪರ್ಕಿಸುವ ಬದಲು, ಕೇಂದ್ರ ಸರ್ಕಾರ ಈ ಸೂಕ್ಷ್ಮ ವಿಷಯದಲ್ಲಿ ಸರ್ವಪಕ್ಷ ಸಭೆಯನ್ನು ಏಕೆ ಕರೆಯುತ್ತಿಲ್ಲ” ಎಂದು ರಾಹುಲ್ ಗಾಂಧಿ ಸಚಿವರನ್ನು ಪ್ರಶ್ನಿಸಿದ್ದಾರೆ.
ಸಂಸತ್ ಕಲಾಪ ಸಾಗಲು ರಾಹುಲ್ ವಿಧಿಸಿದ ಷರತ್ತುಗಳು
ಸಂಸತ್ತಿನ ಕಲಾಪಗಳು ಸುಸೂತ್ರವಾಗಿ ನಡೆಯಬೇಕಾದರೆ ವಿಪಕ್ಷಗಳು ಇಟ್ಟಿರುವ ಎರಡು ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸಲೇಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ನೀಟ್ (NEET) ಪರೀಕ್ಷೆ ಅಕ್ರಮ ಖಂಡಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಅವರು ಸದನದಲ್ಲಿ ಅಧಿಕೃತ ಸ್ಪಷ್ಟನೆ ನೀಡಬೇಕು. ಅಯೋಧ್ಯೆಯ ರಾಮ ಮಂದಿರದ ದೇಣಿಗೆಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಸಂಸತ್ತಿನಲ್ಲಿ ಪೂರ್ಣ ಪ್ರಮಾಣದ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.




