ರಾಘವೇಂದ್ರ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಕುಖ್ಯಾತ ಮನೆಗಳ್ಳನೊಬ್ಬನನ್ನು ಬಂಧಿಸಿದ್ದು, ಆತನಿಂದ ನಾಲ್ಕು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ₹22.65 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿದ್ದಾರೆ.
ಬಂಧಿತನನ್ನು ಆಳಂದ ತಾಲೂಕಿನ ಧಂಗಾಪುರ ಗ್ರಾಮದ ಈಶ್ವರ ತಂದೆ ಗೋವಿಂದ ಜಾಧವ (20) ಎಂದು ಗುರುತಿಸಲಾಗಿದೆ. ಗೌಂಡಿ ಕೆಲಸ ಮಾಡುತ್ತಿದ್ದ ಈತ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 30ರಂದು ಎನ್‌ಜಿಒ ಕಾಲೋನಿಯ ಉಗ್ರ ಹನುಮಾನ್ ಗುಡಿಯಲ್ಲಿದ್ದ ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಗಿತ್ತು. ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಖಚಿತ ಮಾಹಿತಿ ಆಧರಿಸಿ ಈಶ್ವರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಾಲ್ಕು ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ರಾಘವೇಂದ್ರ ನಗರ ಠಾಣೆಯ ಮೂರು ಹಾಗೂ ಅಶೋಕ ನಗರ ಠಾಣೆಯ ಒಂದು ಪ್ರಕರಣ ಸೇರಿದಂತೆ ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆತನಿಂದ 136 ಗ್ರಾಂ ಚಿನ್ನಾಭರಣ, ₹20.35 ಲಕ್ಷ ಮೌಲ್ಯ ಹಾಗೂ 1,000 ಗ್ರಾಂ ಬೆಳ್ಳಿ ಆಭರಣ, ₹2.30 ಲಕ್ಷ ಮೌಲ್ಯ ಸೇರಿ ಒಟ್ಟು ₹22.65 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ.
ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ.
ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಶಾಲೂ ಹಾಗೂ ಪ್ರವೀಣ್ ಹೆಚ್. ನಾಯಕ್, ಎಸಿಪಿ ಶರಣಬಸಪ್ಪ ಸುಬೇದಾರ ಮತ್ತು ರಾಘವೇಂದ್ರ ನಗರ ಠಾಣೆಯ ಪಿಐ ವಾಜೀದ್ ಪಟೇಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಎಎಸ್‌ಐ ಮಲ್ಲಿಕಾರ್ಜುನ ಜಾನೆ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನು ಓದಿದ್ದೀರಾ? ಯಾದಗಿರಿ | ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ ಖಂಡಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ
ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಶ್ಲಾಘಿಸಿದ್ದಾರೆ.





