ಚಿಂಚೋಳಿ ತಾಲೂಕಿನ ಕನಕಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೂವಿನಬಾವಿ ಗ್ರಾಮದಲ್ಲಿ ಕುಡಿಯುವ ನೀರು ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳ ಕೊರತೆಯನ್ನು ತಕ್ಷಣ ನಿವಾರಿಸಬೇಕು ಎಂದು ಒತ್ತಾಯಿಸಿ ಯುನಿಟಿ ಆಫ್ ಮೂಲನಿವಾಸಿ ಬಹುಜನ ಸಂಘಟನೆ ಹಾಗೂ ಮೂಲನಿವಾಸಿ ವಾಹನ ಚಾಲಕರ ಸಂಘದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿದರು.
ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಬಸ್ ಡಿಪೋ ಕ್ರಾಸ್‌ವರೆಗೆ ಸಾಗಿತು. ನೂರಾರು ಕಾರ್ಯಕರ್ತರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಮುಖಂಡ ಮಾರುತಿ ಗಂಜಗಿರಿ ಮಾತನಾಡಿ, ‘ಹೂವಿನಬಾವಿ ಗ್ರಾಮದ ದಲಿತ ಬಡಾವಣೆಗಳಲ್ಲಿ ಬಹುಕಾಲದಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಕೂಲಿ ಕಾರ್ಮಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.
‘ಗ್ರಾಮದಲ್ಲಿರುವ ಏಳು ಹೈಮಾಸ್ಟ್ ವಿದ್ಯುತ್ ಕಂಬಗಳ ದೀಪಗಳು ಕೆಟ್ಟು ಹೋಗಿರುವುದರಿಂದ ಹೊಸ ಬಲ್ಬ್‌ಗಳನ್ನು ಅಳವಡಿಸಬೇಕು. ಬೀದಿದೀಪಗಳ ಕೊರತೆಯನ್ನು ನಿವಾರಿಸಿ ಎಲ್ಲ ವಾರ್ಡ್‌ಗಳಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಇದೇ ವೇಳೆ,’ ಗ್ರಾಮದ ಮೂಲನಿವಾಸಿ ಸಮುದಾಯದ ವ್ಯಕ್ತಿಯನ್ನು ಪಂಪ್ ಆಪರೇಟರ್ ಆಗಿ ನೇಮಕ ಮಾಡಬೇಕು. ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಬೇಕು’ ಎಂದು ತಿಳಿಸಿದರು.
‘ಹೂವಿನಬಾವಿ ಗ್ರಾಮದ ಪ್ರತಿಯೊಂದು ವಾರ್ಡ್‌ಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದೆಂದು’ ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಉದ್ಯಮಿಯಾಗಲು ಬಯಸುವ ಮಹಿಳೆಯರಿಗೆ ಸುವರ್ಣಾವಕಾಶ; ಉಚಿತ ಜಾಗೃತಿ ಶಿಬಿರ
ಈ ಸಂದರ್ಭದಲ್ಲಿ ಮೋಹನ್ ಐನಾಪುರ, ಮಾರುತಿ ಜಾಧವ, ಅಮರನಾಥ ಮೇತ್ರಿ, ಮೈಬುಬ್ ಅಲಿ, ನೀಲಗಾಂಗ, ಶರಣಮ್ಮ, ಮಂಜುಳಾ, ಶೃತಿ, ಕವಿತಾ, ಜಗದೇವಿ, ಮಹ್ಮದ್ ಇಬ್ರಾಹಿಂ, ಮಹಿಪಾಲ ರೆಡ್ಡಿ ಕಾಶೀನಾಥ್, ಗಂಗಮ್ಮ, ಶಿಲ್ಪ, ತಿಪ್ಪಮ್ಮ, ಅಂಬಿಕಾ, ನಾಗಮ್ಮ, ಚಂದ್ರಕಲಾ, ಕಾಲಮ್ಮ, ಘಾಲಮ್ಮ, ಲಕ್ಷ್ಮೀ, ಅಂಬಿಕಾ, ಭೀಮು, ಬಾಬುರೆಡ್ಡಿ, ಫಾರುಕ ಅಲಿ, ತುಕ್ಕಾರೆಡ್ಡಿ, ಜ್ವವಂತ, ತಿಪ್ಪಣ್ಣ ಸೇರಿದಂತೆ ಇನ್ನಿತರರು ಭಾಗವಹಿಸಿದರು.





