ಜಾತಿ ತಾರತಮ್ಯ, ಅಸ್ಪೃಶ್ಯತೆ, ಲಿಂಗಭೇದ ಹಾಗೂ ಸಾಮಾಜಿಕ ಅಸಮಾನತೆಗಳ ವಿರುದ್ಧ 12ನೇ ಶತಮಾನದಲ್ಲಿಯೇ ವಿಶ್ವಗುರು ಬಸವಣ್ಣನವರು ಸಾಮಾಜಿಕ ಕ್ರಾಂತಿ ನಡೆಸಿದ್ದರು. ಆದರೆ, ಸುಮಾರು 900 ವರ್ಷಗಳ ನಂತರವೂ ಬಸವಣ್ಣನವರು ಕನಸು ಕಂಡ ಸಮಾನತೆಯ ಸಮಾಜ ನಿರ್ಮಾಣವಾಗದಿರುವುದು ವಿಷಾದನೀಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವೀರಶೈವ ಲಿಂಗಾಯತ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರು ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತರಾದವರಲ್ಲ. ಅವರು ಇಡೀ ಮನುಕುಲಕ್ಕೆ ಸೇರಿದವರು. ಜಾತಿ, ವರ್ಗ ಮತ್ತು ಲಿಂಗದ ಆಧಾರದಲ್ಲಿ ಮನುಷ್ಯರನ್ನು ವಿಭಜಿಸದೆ ಎಲ್ಲರೂ ಸಮಾನರು ಎಂಬ ಮಾನವೀಯ ಮೌಲ್ಯವನ್ನು ಪ್ರತಿಪಾದಿಸಿದ್ದರು. ಪ್ರತಿಯೊಬ್ಬರೂ ಸಮಾನ ಗೌರವದಿಂದ ಬದುಕಬೇಕು, ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು ಎಂಬುದು ಅವರ ಆಶಯವಾಗಿತ್ತು ಎಂದರು.
ಆದರೆ, ಇಂದಿಗೂ ಸಮಾಜದಲ್ಲಿ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಅಸಮಾನತೆ ಹಾಗೂ ಧರ್ಮ ಮತ್ತು ಜಾತಿಗಳ ನಡುವೆ ವೈಮನಸ್ಸು ಮುಂದುವರಿದಿವೆ. ಜಾತಿ ಮತ್ತು ದ್ವೇಷವನ್ನು ಬಿತ್ತಿ ಪೋಷಿಸುವ ಪಟ್ಟಭದ್ರ ಹಿತಾಸಕ್ತಿಗಳೂ ನಮ್ಮ ನಡುವೆ ಇವೆ. ಇಂತಹ ಪರಿಸ್ಥಿತಿಯಲ್ಲಿ ಬಸವಣ್ಣನವರ ವಿಚಾರಧಾರೆಗಳನ್ನು ಅರ್ಥಮಾಡಿಕೊಂಡು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು.
“ಇವನಾರವ ಇವನಾರವ ಇವನಾರವನೆಂದೆನ್ನದಿರಯ್ಯ, ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನ್ನಿರಯ್ಯ” ಎಂದು ಬಸವಣ್ಣನವರು ಅಂದೇ ಸಾರಿದ್ದರು. ಮನುಷ್ಯರನ್ನು ಜಾತಿ ಮತ್ತು ವರ್ಗಗಳ ಆಧಾರದಲ್ಲಿ ಗುರುತಿಸಿ ದೂರವಿಡದೆ, ಎಲ್ಲರನ್ನೂ ನಮ್ಮವರಂತೆ ಕಾಣಬೇಕೆಂಬ ಉದಾತ್ತ ಸಂದೇಶವನ್ನು ಈ ವಚನ ಸಾರುತ್ತದೆ. ಪರಸ್ಪರ ಪ್ರೀತಿ, ಸಹಬಾಳ್ವೆ ಮತ್ತು ಮಾನವೀಯತೆಯಿಂದ ಕೂಡಿದ ಸಮಾಜ ನಿರ್ಮಾಣವಾಗಬೇಕು ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.
ಬಸವಣ್ಣನವರು ಪ್ರತಿಪಾದಿಸಿದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆಶಯಗಳು ಭಾರತೀಯ ಸಂವಿಧಾನದಲ್ಲಿಯೂ ಪ್ರತಿಫಲಿಸಿವೆ. ಸುಮಾರು 2,500 ವರ್ಷಗಳ ಹಿಂದೆ ಬುದ್ಧರು, 900 ವರ್ಷಗಳ ಹಿಂದೆ ಬಸವಣ್ಣನವರು ಪ್ರತಿಪಾದಿಸಿದ ಸಮಾನತೆಯ ಚಿಂತನೆಗಳು ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಆಶಯಗಳಲ್ಲಿಯೂ ಕಾಣಸಿಗುತ್ತವೆ ಎಂದರು.
ಪ್ರತಿಯೊಬ್ಬ ಭಾರತೀಯನೂ ಸಂವಿಧಾನವನ್ನು ಓದಬೇಕು, ಅರ್ಥಮಾಡಿಕೊಳ್ಳಬೇಕು ಹಾಗೂ ಅದರ ಆಶಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಈ ಉದ್ದೇಶದಿಂದ ತಾವು ಮುಖ್ಯಮಂತ್ರಿಯಾಗಿದ್ದಾಗ ಶಾಲೆ ಮತ್ತು ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾಗಿ ತಿಳಿಸಿದರು.

ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಸಂವಿಧಾನದ ಆಶಯಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಸಮಾನತೆಗಳು ನಿವಾರಣೆಯಾಗಬೇಕು. ವಿಶೇಷವಾಗಿ ಬಡವರು, ಶೋಷಿತರು ಹಾಗೂ ಅವಕಾಶವಂಚಿತ ಸಮುದಾಯಗಳಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಶಕ್ತಿ ತುಂಬಬೇಕು ಎಂದು ಹೇಳಿದರು.
ಬಸವಣ್ಣನವರ ‘ಕಾಯಕವೇ ಕೈಲಾಸ’ ಮತ್ತು ದಾಸೋಹದ ತತ್ವಗಳು ದುಡಿಮೆಯ ಘನತೆ ಹಾಗೂ ಸಂಪನ್ಮೂಲಗಳ ಹಂಚಿಕೆಯ ಮಹತ್ವವನ್ನು ಸಾರುತ್ತವೆ. ಶ್ರಮಕ್ಕೆ ಗೌರವ ದೊರೆಯಬೇಕು; ದುಡಿಮೆಯ ಫಲ ಕೆಲವರಿಗಷ್ಟೇ ಸೀಮಿತವಾಗಬಾರದು. ಸಮಾಜದ ಪ್ರತಿಯೊಬ್ಬರೂ ಗೌರವಯುತ ಬದುಕು ನಡೆಸಲು ಅವಕಾಶ ದೊರೆಯಬೇಕು ಎಂಬುದು ಬಸವಣ್ಣನವರ ಚಿಂತನೆಯಾಗಿತ್ತು ಎಂದು ವಿವರಿಸಿದರು.
ಜಾತಿ, ವರ್ಗ ಮತ್ತು ಲಿಂಗಭೇದವಿಲ್ಲದ ಸಮಾಜ ನಿರ್ಮಾಣದ ಆಶಯದಿಂದ ಬಸವಣ್ಣನವರು ರೂಪಿಸಿದ ಅನುಭವ ಮಂಟಪವು ಪ್ರಜಾಸತ್ತಾತ್ಮಕ ಚಿಂತನೆಗಳಿಗೆ ಮಹತ್ವದ ವೇದಿಕೆಯಾಗಿತ್ತು. ವಿವಿಧ ಸಮುದಾಯಗಳ ಶರಣರು ತಮ್ಮ ವಿಚಾರಗಳನ್ನು ಮುಕ್ತವಾಗಿ ಮಂಡಿಸಿ, ಸಾಮಾಜಿಕ ಸಮಸ್ಯೆಗಳ ಕುರಿತು ಚರ್ಚೆ ನಡೆಸುತ್ತಿದ್ದರು. ಮಹಿಳೆಯರಿಗೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶವಿತ್ತು. ಅನುಭವ ಮಂಟಪದ ಅಧ್ಯಕ್ಷರಾಗಿ ಅಲ್ಲಮಪ್ರಭುಗಳು ಕಾರ್ಯನಿರ್ವಹಿಸಿದ್ದು, ಶರಣ ಪರಂಪರೆಯಲ್ಲಿ ಸಾಮಾಜಿಕ ಸ್ಥಾನಮಾನಕ್ಕಿಂತ ಜ್ಞಾನ ಮತ್ತು ಅನುಭವಕ್ಕೆ ಮಹತ್ವ ನೀಡಲಾಗುತ್ತಿತ್ತು ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.
ಬಸವಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಾಣವಾಗಬೇಕು ಎಂಬುದು ತಮ್ಮ ಆಶಯವಾಗಿತ್ತು. ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗೋ.ರು. ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಸಮಿತಿಯ ವರದಿಯ ಆಧಾರದ ಮೇಲೆ ಅನುಭವ ಮಂಟಪದ ನಿರ್ಮಾಣಕ್ಕಾಗಿ ₹280 ಕೋಟಿ ಬಿಡುಗಡೆ ಮಾಡಿದ್ದೆ. ತಮ್ಮ ಆಡಳಿತಾವಧಿಯಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಅನುಭವ ಮಂಟಪದ ನಿರ್ಮಾಣ ಕಾರ್ಯ ಪೂರ್ಣಗೊಂಡು, ಬಸವಣ್ಣನವರ ಸಮಾನತೆ ಮತ್ತು ಮಾನವೀಯತೆಯ ಸಂದೇಶಗಳು ಮುಂದಿನ ಪೀಳಿಗೆಗೆ ತಲುಪಬೇಕು ಎಂಬುದು ತಮ್ಮ ಸಂಕಲ್ಪವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
2013ರ ಮೇ 13ರಂದು ಬಸವ ಜಯಂತಿಯ ದಿನವೇ ತಾವು ಮೊದಲ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದನ್ನು ಸಿದ್ದರಾಮಯ್ಯ ಸ್ಮರಿಸಿದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ನಂತರ ಬಸವ ಜಯಂತಿಯಂದೇ ಅಧಿಕಾರ ಸ್ವೀಕರಿಸುವ ಅವಕಾಶ ದೊರೆತಿದ್ದು ಕಾಕತಾಳೀಯವಾದರೂ ತಮ್ಮ ಬದುಕಿನಲ್ಲಿ ಸಂತೋಷ ತಂದ ಮಹತ್ವದ ಸಂಗತಿಯಾಗಿದೆ ಎಂದರು.

ಬಸವಣ್ಣನವರ ಆಶಯದಂತೆ ಜಾತಿ, ವರ್ಗ ಮತ್ತು ಲಿಂಗಭೇದವಿಲ್ಲದ ಸಮಾಜ ನಿರ್ಮಿಸುವುದು, ಪರಸ್ಪರ ಪ್ರೀತಿ, ಸಹಬಾಳ್ವೆ, ಸಮಾನತೆ ಹಾಗೂ ಮಾನವೀಯತೆಯನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ. ಇಂತಹ ಸಮಾಜ ನಿರ್ಮಿಸುವುದೇ ವಿಶ್ವಗುರು ಬಸವಣ್ಣನವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದರು.
ಈ ವಿಶೇಷ ವರದಿ ಓದಿದ್ದೀರಾ? ಕಳೆಗುಂದಿದ ದರಿಯಾ ದೌಲತ್: ಟಿಪ್ಪು ಅರಮನೆಯ ಮೂಲ ಸೌಂದರ್ಯ ಉಳಿಸುವ ಹೊಣೆ ಯಾರದ್ದು?
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಸಚಿವ ಈಶ್ವರ್ ಬಿ. ಖಂಡ್ರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವೀಣಾ ಕಾಶಪ್ಪನವರ್, ಶಾಸಕ ರವಿಶಂಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.




