ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ 750 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಆಧುನಿಕ ಅನುಭವ ಮಂಟಪದ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದ್ದು, ಮುಂಬರುವ ಬಸವಜಯಂತಿಯ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
ಕೃಷ್ಣರಾಜನಗರದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಸಮಾಜದ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನದ ಶರಣರ ಚಿಂತನೆಗಳನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅನುಭವ ಮಂಟಪವನ್ನು ರೂಪಿಸಲಾಗುತ್ತಿದೆ ಎಂದರು.
ಬಸವಕಲ್ಯಾಣದ ಅನುಭವ ಮಂಟಪವನ್ನು 770 ಅಮರಗಣಗಳ ಹೆಸರಿನಲ್ಲಿ 770 ಕಂಬಗಳೊಂದಿಗೆ ಭವ್ಯವಾಗಿ ನಿರ್ಮಿಸಲಾಗುತ್ತಿದೆ. ಈ ಯೋಜನೆಗೆ ಸಂಬಂಧಿಸಿದಂತೆ 2016ರಲ್ಲಿ ತಾವು ಪೌರಾಡಳಿತ ಸಚಿವರಾಗಿದ್ದಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿಯೋಗದ ಮೂಲಕ ಮನವಿ ಸಲ್ಲಿಸಲಾಗಿತ್ತು. ಖ್ಯಾತ ಚಿಂತಕ ಡಾ. ಗೊ.ರು. ಚನ್ನಬಸಪ್ಪ ಅವರ ನೇತೃತ್ವದಲ್ಲಿ ತಜ್ಞರ ಸಲಹಾ ಸಮಿತಿ ರಚಿಸಿ, ಬಜೆಟ್‌ನಲ್ಲಿ ಯೋಜನೆಯನ್ನು ಘೋಷಿಸಲಾಗಿತ್ತು ಎಂದು ಸ್ಮರಿಸಿದರು.
ನಂತರ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. 2023ರಲ್ಲಿ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾದ ಬಳಿಕ ಯೋಜನೆಗೆ 280 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಇದರಿಂದ ಕಾಮಗಾರಿ ವೇಗ ಪಡೆದುಕೊಂಡಿದೆ. ಈ ಯೋಜನೆ ಸಾಕಾರಗೊಳ್ಳಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಖಂಡ್ರೆ ತಿಳಿಸಿದರು.
ಜಗತ್ತಿಗೆ ಪ್ರಜಾಪ್ರಭುತ್ವ ಮತ್ತು ಸಂಸತ್ತಿನ ಪರಿಕಲ್ಪನೆಯನ್ನು ಪರಿಚಯಿಸಿದ ಐತಿಹಾಸಿಕ ಕೇಂದ್ರವಾಗಿ ಬಸವಕಲ್ಯಾಣದ ಅನುಭವ ಮಂಟಪ ಗುರುತಿಸಿಕೊಂಡಿದೆ. 12ನೇ ಶತಮಾನದಲ್ಲಿ ಶರಣರು ನಡೆಸುತ್ತಿದ್ದ ಚಿಂತನ-ಮಂಥನವನ್ನು ಇಂದಿನ ಪೀಳಿಗೆಗೆ ದೃಶ್ಯ-ಶ್ರವ್ಯ ಮಾಧ್ಯಮದ ಮೂಲಕ ಪರಿಚಯಿಸಲು ರೊಬೋಟಿಕ್ ತಂತ್ರಜ್ಞಾನ ಬಳಸಲಾಗುತ್ತಿದೆ ಎಂದರು.
ಅಲ್ಲಮಪ್ರಭು, ಬಸವಣ್ಣ ಮತ್ತು ಅಕ್ಕಮಹಾದೇವಿ ಸೇರಿದಂತೆ 20 ಶರಣರ ರೊಬೋಟಿಕ್ ಪುತ್ಥಳಿಗಳನ್ನು ನಿರ್ಮಿಸುವ ಯೋಜನೆಯಿದೆ. ಈ ಪುತ್ಥಳಿಗಳು ಪರಸ್ಪರ ಸಂಭಾಷಣೆ ನಡೆಸುವ ರೀತಿಯಲ್ಲಿ ತಂತ್ರಜ್ಞಾನ ಅಳವಡಿಸಲಾಗುತ್ತಿದ್ದು, ಅನುಭವ ಮಂಟಪದಲ್ಲಿ ಶರಣರು ನಡೆಸುತ್ತಿದ್ದ ಚರ್ಚೆಗಳು ಹಾಗೂ ಅವರ ವಿಚಾರಧಾರೆಗಳನ್ನು ಸಂದರ್ಶಕರು ಅನುಭವಿಸಲು ಸಾಧ್ಯವಾಗಲಿದೆ ಎಂದು ವಿವರಿಸಿದರು.
ಅನುಭವ ಮಂಟಪಕ್ಕೆ ಬರುವ ಭಕ್ತರು ಹಾಗೂ ಸಂದರ್ಶಕರಿಗೆ ಇಷ್ಟಲಿಂಗ ಪೂಜೆಯಿಂದ ದೇಹ ಮತ್ತು ಮನಸ್ಸಿನ ಮೇಲೆ ಉಂಟಾಗುವ ಪರಿಣಾಮಗಳನ್ನು ವೈಜ್ಞಾನಿಕವಾಗಿ ತಿಳಿದುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ಐಐಟಿ ಹೈದರಾಬಾದ್ ಮತ್ತು ಐಐಟಿ ಖರಗ್‌ಪುರದ ನೆರವಿನಿಂದ ವಿಶೇಷ ವೈದ್ಯಕೀಯ ಉಪಕರಣವನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಈ ವ್ಯವಸ್ಥೆಯಡಿ ಮೊದಲು ಸಂದರ್ಶಕರ ಹೃದಯ ಬಡಿತ, ನಾಡಿಮಿಡಿತ ಹಾಗೂ ಮೆದುಳಿನ ರಕ್ತಸಂಚಾರ ಸೇರಿದಂತೆ ಕೆಲವು ದೈಹಿಕ ಸೂಚಕಗಳನ್ನು ದಾಖಲಿಸಲಾಗುತ್ತದೆ. ಬಳಿಕ ಇಷ್ಟಲಿಂಗ ಪೂಜೆಯ ನಂತರ ಮತ್ತೊಮ್ಮೆ ಪರೀಕ್ಷೆ ನಡೆಸಿ, ದೈಹಿಕ ಸೂಚಕಗಳಲ್ಲಿ ಕಂಡುಬರುವ ಬದಲಾವಣೆಗಳನ್ನು ದಾಖಲಿಸಿ ವಿವರಿಸಲಾಗುತ್ತದೆ. ಇಷ್ಟಲಿಂಗ ಪೂಜೆಯು ಮನಸ್ಸನ್ನು ನಿರಾಳಗೊಳಿಸುವಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಈ ಪ್ರಕ್ರಿಯೆಯ ಮೂಲಕ ಅಧ್ಯಯನ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಆಧುನಿಕ ಅನುಭವ ಮಂಟಪವು ಆಧ್ಯಾತ್ಮಿಕ ಪರಂಪರೆ ಮತ್ತು ಆಧುನಿಕ ವಿಜ್ಞಾನವನ್ನು ಒಗ್ಗೂಡಿಸುವ ಕೇಂದ್ರವಾಗಲಿದೆ. ಶರಣರ ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯತೆಯ ಸಂದೇಶಗಳನ್ನು ಯುವಜನರಿಗೆ ತಲುಪಿಸುವುದರ ಜೊತೆಗೆ ಏಕಾಗ್ರತೆ ಹಾಗೂ ಆತ್ಮಸ್ಥೈರ್ಯ ವೃದ್ಧಿಗೆ ಪೂರಕವಾದ ಅನುಭವಗಳನ್ನು ಒದಗಿಸುವ ಗುರಿ ಹೊಂದಲಾಗಿದೆ ಎಂದರು.
ಈ ವಿಶೇಷ ವರದಿ ಓದಿದ್ದೀರಾ? ಕಳೆಗುಂದಿದ ದರಿಯಾ ದೌಲತ್: ಟಿಪ್ಪು ಅರಮನೆಯ ಮೂಲ ಸೌಂದರ್ಯ ಉಳಿಸುವ ಹೊಣೆ ಯಾರದ್ದು?
ಅನುಭವ ಮಂಟಪ ಲೋಕಾರ್ಪಣೆಯಾದ ಬಳಿಕ ದೇಶದ ಪ್ರಮುಖ ಐತಿಹಾಸಿಕ ಮತ್ತು ಪ್ರವಾಸಿ ತಾಣಗಳಲ್ಲಿ ಒಂದಾಗಿ ಬೆಳೆಯುವ ನಿರೀಕ್ಷೆಯಿದೆ ಎಂದು ತಿಳಿಸಿದರು.




