ಕಲಬುರಗಿ ನಗರದ ಹೈಕೋರ್ಟ್ ವೃತ್ತದ ಬಳಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ಬುಧವಾರ ರಾತ್ರಿ ಅನಧಿಕೃತವಾಗಿ ಅಳವಡಿಸಲು ಯತ್ನಿಸಲಾಗಿದ್ದು, ಮಹಾನಗರ ಪಾಲಿಕೆ ಸಿಬ್ಬಂದಿ ಪ್ರತಿಮೆಯನ್ನು ತೆರವುಗೊಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಗರಕ್ಕೆ ಆಗಮಿಸಿದ್ದ ದಿನವೇ ಈ ಘಟನೆ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ರಾತ್ರಿ ವೇಳೆ ಕೆಲವರು ಹೈಕೋರ್ಟ್ ವೃತ್ತದ ಸಮೀಪದ ರಸ್ತೆ ಬದಿಯಲ್ಲಿ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ನಿಲ್ಲಿಸಿದ್ದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಫಜಲಪುರ ತಾಲ್ಲೂಕಿನ ದತ್ತಾತ್ರೇಯ ದೇವಸ್ಥಾನಕ್ಕೆ ತೆರಳಬೇಕಿದ್ದ ಮಾರ್ಗವೂ ಇದೇ ವೃತ್ತದ ಮೂಲಕ ಸಾಗಬೇಕಿತ್ತು.
ಪ್ರತಿಮೆ ಅಳವಡಿಸಿರುವ ಮಾಹಿತಿ ಅಧಿಕಾರಿಗಳಿಗೆ ಲಭಿಸುತ್ತಿದ್ದಂತೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಯಾವುದೇ ಅನುಮತಿ ಪಡೆಯದೆ ಪ್ರತಿಮೆ ಅಳವಡಿಸಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪ್ರತಿಮೆಯನ್ನು ಬಟ್ಟೆಯಿಂದ ಮುಚ್ಚಿ, ಬಳಿಕ ಸ್ಥಳದಿಂದ ತೆರವುಗೊಳಿಸಿ ಬೇರೆಡೆಗೆ ಕೊಂಡೊಯ್ಯಲಾಯಿತು ಎಂದು ತಿಳಿದುಬಂದಿದೆ.
This video cannot be played in your browser. Open the video directly

ಇದನ್ನು ಓದಿದ್ದೀರಾ? ಹೆಸರಾಯಿತು ಕಲ್ಯಾಣ ಕರ್ನಾಟಕ; ಬದಲಾಗದ ಜನರ ಬದುಕು!
ಈ ಕುರಿತು ಹಾಲುಮತ ಸಮಾಜದ ಮುಖಂಡ ಮಹಾಂತೇಶ ಕೌಲಗಿ ಮಾತನಾಡಿ, ಸಾರ್ವಜನಿಕ ಸ್ಥಳದಲ್ಲಿ ಪ್ರತಿಮೆ ಪ್ರತಿಷ್ಠಾಪಿಸುವ ಮೊದಲು ಮಹಾನಗರ ಪಾಲಿಕೆಯ ಅನುಮತಿ ಪಡೆಯಬೇಕಿತ್ತು. ನಿಯಮಾನುಸಾರ ಅನುಮತಿ ಪಡೆದು ಪ್ರತಿಮೆ ಸ್ಥಾಪಿಸಿದ್ದರೆ ಯಾವುದೇ ಗೊಂದಲ ಉಂಟಾಗುತ್ತಿರಲಿಲ್ಲ. ಅನುಮತಿ ಇಲ್ಲದೆ ಪ್ರತಿಮೆ ಅಳವಡಿಸಲು ಯತ್ನಿಸಿರುವುದು ಸಿದ್ದರಾಮಯ್ಯ ಅವರಿಗೆ ಅವಮಾನ ಮಾಡಿದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.





